Advertisement

ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ವಾಹನ ಸಂಚಾರ ಮೊಟಕು

07:22 PM Jul 24, 2019 | Sriram |

ಕಾಸರಗೋಡು: ಬದಿಯಡ್ಕ ಸಮೀಪದ ಕರಿಂಬಿಲದಲ್ಲಿ ಗುಡ್ಡೆ ಕುಸಿದು ರಸ್ತೆಗೆ ಬೀಳಲಾರಂಭಿಸಿದ್ದು ಅಪಾಯದ ಭೀತಿಗೆ ಕಾರಣವಾಗಿದೆ. ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿದು ರಸ್ತೆಗೆ ಬೀಳ ಬಹುದಾದ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯರು ಸೇರಿ ಕೈಗೊಂಡ ನಿರ್ಧಾರದಂತೆ ಬದಿಯಡ್ಕ- ಪೆರ್ಲ ರಸ್ತೆಯಲ್ಲಿ ಬಸ್‌ ಸಹಿತ ವಾಹನ ಸಂಚಾರ ಪೂರ್ಣವಾಗಿ ಮೊಟಕುಗೊಳಿಸ ಲಾಗಿದೆ. ಕುಸಿಯಲಿರುವ ಗುಡ್ಡದ ಮಣ್ಣನ್ನು ತೆರವು ಗೊಳಿಸಿದ ಬಳಿಕವೇ ವಾಹನ ಸಂಚಾರ ಆರಂಭಿಸಬಹುದಾಗಿದೆ. ಆದರೆ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.

ಬದಿಯಡ್ಕದಿಂದ ಪೆರ್ಲದತ್ತ ವಾಹನಗಳು ತೆರಳದಂತೆ ಬದಿಯಡ್ಕ ಬಳಿಯ ಕೆಡೆಂಜಿ ಹಾಗೂ ಕಾಡಮನೆಯಲ್ಲಿ ರಸ್ತೆಯಲ್ಲಿ ತಡೆಯೊಡ್ಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ಪೆರ್ಲಕ್ಕೆ ತೆರಳುವ ಖಾಸಗಿ ಬಸ್‌ಗಳು ಬದಿಯಡ್ಕದ ವರೆಗೆ ಸಂಚರಿಸಿ ವಾಪಸಾಗುತ್ತಿವೆ. ಕಾಸರಗೋಡಿನಿಂದ ಪುತ್ತೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬದಿಯಡ್ಕದಿಂದ ಕನ್ಯಪ್ಪಾಡಿ, ಏಳಾRನ, ಉಕ್ಕಿನಡ್ಕ ಮೆಡಿಕಲ್‌ ಕಾಲೇಜು ರಸ್ತೆ, ಪೆರ್ಲ ಮೂಲಕ ಸಂಚರಿಸಿ ಇದೇ ರಸ್ತೆಯಲ್ಲಿ ಮರಳುತ್ತಿವೆ. ಈ ರಸ್ತೆ ಸುಮಾರು 10 ಕಿಲೋ ಮೀಟರ್‌ನಷ್ಟು ಸುತ್ತುಬಳಸಿ ಸಾಗಬೇಕಾಗುತ್ತದೆ. ಇದೇ ವೇಳೆ ಕೆಲವು ಸಣ್ಣಪುಟ್ಟ ವಾಹನಗಳು ಬದಿಯಡ್ಕದಿಂದ ಕಾಡಮನೆ, ಮಾಡತ್ತಡ್ಕ ಮೂಲಕ ಒಳ ರಸ್ತೆಯಾಗಿ ಪೆರ್ಲಕ್ಕೆ ಸಂಚರಿಸುತ್ತಿವೆ.

Advertisement

ಇದೇ ಮೊದಲಲ್ಲ
ಕರಿಂಬಿಲದಲ್ಲಿ ಗುಡ್ಡೆ ಈ ಹಿಂದೆಯೂ ರಸ್ತೆಗೆ ಕುಸಿದಿತ್ತು. ಉಳಿದ ಭಾಗ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಅಪಾಯದಲ್ಲಿದೆ. ಈ ಬಗ್ಗೆ ಅವಲೋಕಿಸಲು ಎಡಿಎಂ ಎನ್‌. ದೇವಿದಾಸ್‌, ಎಎಸ್‌ಪಿ ಡಿ. ಶಿಲ್ಪಾ ಸಹಿತ ಹಿರಿಯ ಪೊಲೀಸ್‌ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕರಿಂಬಿಲಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾ ಪಂಚಾಯತ್‌ ಸದಸ್ಯ ಕೆ. ಶ್ರೀಕಾಂತ್‌, ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಸಹಿತ ಜನ ಪ್ರತಿನಿಧಿಗಳು ಹಾಗೂ ಸ್ಥಳೀಯರೊಂದಿಗೆ ಅಧಿಕಾರಿ ಗಳು ಸಮಾಲೋಚನೆ ನಡೆಸಿದ್ದು, ರಸ್ತೆಗೆ ಬೀಳಬಹುದಾದ ಮಣ್ಣನ್ನು ತೆರವುಗೊಳಿಸುವವರೆಗೆ ಈ ರಸ್ತೆ ಯಲ್ಲಿ ವಾಹನ ಸಂಚರಿಸದಂತೆ ತೀರ್ಮಾನಿಸಲಾಯಿತು.

ಚೆರ್ಕಳ-ಅಡ್ಕಸ್ಥಳ ರಸ್ತೆಯನ್ನು ಮೆಕ್‌ಡಾಂ ಡಾಮರೀಕರಣದಂಗವಾಗಿ ಅಗಲಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ರಸ್ತೆಯ ಎರಡೂ ಭಾಗಗಳಿಂದ ಮಣ್ಣು ತೆಗೆಯಲಾಗಿದ್ದು, ಇದರಿಂದ ಗುಡ್ಡೆಯ ಎತ್ತರ ಹೆಚ್ಚಿದೆ. ಇದೇ ವೇಳೆ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ತೆಗೆದ ಪರಿಣಾಮವೇ ಗುಡ್ಡೆ ಕುಸಿಯಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಮಣ್ಣು ತೆಗೆಯುವಾಗ ಎತ್ತರದ ಪ್ರದೇಶಗಳಲ್ಲಿ ಉಳಿದುಕೊಂಡ ಮರಗಳು ಕೂಡಾ ವಿವಿಧೆಡೆ ರಸ್ತೆಗೆ ಈಗಾಗಲೇ ಬಿದ್ದಿವೆ. ಇದೇ ಸ್ಥಿತಿಯುಂಟಾದರೆ ಇನ್ನಷ್ಟು ಮಣ್ಣ, ಮರಗಳು ರಸ್ತೆಗೆ ಉರುಳುವ ಸಾಧ್ಯತೆಯಿದೆ.

ಬದಿಯಡ್ಕ ಭಾಗದಿಂದ ಪುತ್ತೂರಿಗೆ ತೆರಳಲಿರುವ ಪ್ರಧಾನ ರಸ್ತೆ ಇದಾಗಿದ್ದು, ಇದರಲ್ಲಿ ಬಸ್‌ ಸಹಿತ ಇತರ ವಾಹನ ಸಂಚಾರ ಮೊಟಕುಗೊಂಡಿರುವುದರಿಂದ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಕರಿಂಬಿಲ, ಚೊಟ್ಟೆತ್ತಡ್ಕ ಮೊದಲಾದೆಡೆಗಳಲ್ಲಿ ಎತ್ತರದ ಗುಡ್ಡೆಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ.

ಮನೆಗೆ ನುಗ್ಗಿದ ನೀರು
ಮಂಜೇಶ್ವರದ ಕೀತೇìಶ್ವರದಲ್ಲಿ ಕಟ್ಟೆಪುಣಿಯೊಂದು ಕುಸಿದು ತೋಡಿನ ನೀರು ಗದ್ದೆ ಹಾಗು ಸಮೀಪದ ಮನೆಗೆ ನುಗ್ಗಿದೆ. ಮಂಜೇಶ್ವರ ಪಂಚಾಯತ್‌ನ 18 ನೇ ವಾರ್ಡ್‌ನಲ್ಲಿನ ಕುಂಡುಕೊಳಕೆಯಿಂದ ಮಂಜೇಶ್ವರ ಚರ್ಚ್‌ಗೆ ಸಾಗುವ ಕಾಲುದಾರಿ ಮಧ್ಯೆ ಕೀತೇìಶ್ವರದಲ್ಲಿ ಸಿಗುವ ಗದ್ದೆ ಬದಿಯ ಕಟ್ಟೆಪುಣಿ ಕುಸಿದು ಸಮೀಪದ ತೋಡಿನ ನೀರು ಗದ್ದೆಗೆ ಸೇರಿದೆ. ಈ ಮೂಲಕ ಸಮೀಪದಲ್ಲಿರುವ ಗಂಗಮ್ಮ, ಲೂಯಿಸ್‌ ಡಿ’ಸೋಜಾ, ಕುವೆಲ್ಲಾ ಡಿ’ಸೋಜಾ ಮೊದಲಾದವರ ಮನೆಗಳಿಗೆ ನೀರು ನುಗ್ಗಿದೆ. ಕಟ್ಟೆಪುಣಿ ಕುಸಿದುದರಿಂದ ಈ ದಾರಿಯಲ್ಲಿ ನಡೆದು ಹೋಗುವವರಿಗೂ ಸಮಸ್ಯೆಯಾಗಿದೆ.

Advertisement

ಚರಂಡಿ ಅವ್ಯವಸ್ಥೆ:
ಅಂಗಡಿಗಳಿಗೆ ನುಗ್ಗಿದ ನೀರು
ಚರಂಡಿ ಅವ್ಯವಸ್ಥೆಯಿಂದಾಗಿ ಹೊಸಂ ಗಡಿಯ ಜಯರಾಜ್‌ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿರುವ ನಾಲ್ಕು ಅಂಗಡಿಗಳಿಗೆ ಮಳೆ ನೀರು ನುಗ್ಗಿದ್ದು, ಸಾಮಗ್ರಿಗಳು ಹಾನಿಗೀಡಾಗಿವೆ. ಜನಾದ‌ìನ ಅವರ ದಿನಸಿ ಅಂಗಡಿ, ಶ್ರೀಧರ ಮಜಲು ಅವರ ತರಕಾರಿ ಅಂಗಡಿ, ಮೊಹಮ್ಮದ್‌ ಆಲಿ ಅವರ ಹಾರ್ಡ್‌ವೇರ್‌ ಅಂಗಡಿ ಹಾಗೂ ಅಬೂಬಕ್ಕರ್‌ ಕಡಂಬಾರ್‌ ಅವರ ಜವುಳಿ ಅಂಗಡಿಗೆ ಹಾನಿಯಾಗಿದೆ.

ಮಧೂರು ಪಂಚಾಯತ್‌
ಕಚೇರಿ ಸುತ್ತ ನೀರು
ಧಾರಾಕಾರ ಮಳೆಯಿಂದಾಗಿ ಉಳಿಯತ್ತಡ್ಕದಲ್ಲಿರುವ ಮಧೂರು ಗ್ರಾಮ ಪಂಚಾಯತ್‌ ಕಚೇರಿ ಪರಿಸರ ನೀರಲ್ಲಿ ಮುಳುಗಿದೆ. ಇದರಿಂದಾಗಿ ರಸ್ತೆ ಯಾವುದು, ಚರಂಡಿ ಯಾವುದು ಎಂಬುದು ತಿಳಿಯದಂತಾಗಿದೆ.

ಕೇರಳ ಕರಾವಳಿಯಲ್ಲಿ ತಾಸಿಗೆ 40ರಿಂದ 50 ಕಿಮೀ ವೇಗದಲ್ಲಿ ಪ್ರಬಲವಾಗಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ನಿಗಾ ಕೇಂದ್ರ ತಿಳಿಸಿದೆ. ಕಡಲುಬ್ಬರ ಕಾಣಿಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳಕೂಡದು ಎಂದು ಮುನ್ಸೂಚನೆ ನೀಡಲಾಗಿದೆ.

ಅಧಿಕಾರಿಗಳ ಭೇಟಿ
ಬಿರುಸಿನ ಮಳೆಯಿಂದ ದುರವಸ್ಥೆ ಅನುಭವಿಸುತ್ತಿರುವ ಜಿಲ್ಲೆಯ ವಿವಿಧ ಪ್ರದೇಶಗಳನ್ನು ಹೆಚ್ಚುವರಿ ದಂಡನಾಧಿಕಾರಿ ಎನ್‌.ದೇವಿದಾಸ್‌ ಮಂಗಳವಾರ ಸಂಜೆ ಸಂದರ್ಶಿಸಿ, ಪರಿಸ್ಥಿಯ ಅವಲೋಕನ ನಡೆಸಿದರು.

ಉಕ್ಕಿ ಹರಿದ ಮಧುವಾಹಿನಿ
ವಿದ್ಯಾನಗರ ಬಳಿಯ ಎರ್ದುಂಕಡವು ಪುದುಮಣ್ಣು ಎಂಬಲ್ಲಿ ಮಧುವಾಹಿನಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನೆರೆ ಹಾವಳಿ ಅನುಭವಿಸುತ್ತಿರುವ ಇಲ್ಲಿನ ಮೂರು ಮನೆಗಳಿಗೆ ಅವರು ಭೇಟಿ ನೀಡಿದರು. ಹೊಳೆ ಬದಿಯಲ್ಲಿರುವ ಮನೆಗಳ ಒಂದು ಭಾಗ ಕುಸಿದು ಬೀಳುವ ಸಾಧ್ಯತೆಯಿದ್ದು, ಈ ಮನೆಯ ಮಂದಿಗೆ ತಾತ್ಕಾಲಿಕ ಪುನರ್ವಸತಿ ಕೇಂದ್ರ ಎಂಬ ನಿಟ್ಟಿನಲ್ಲಿ ಸಮೀಪದ ಎನ್‌.ಎ. ಹೆಣ್ಣು ಮಕ್ಕಳ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಆಸರೆ ಒದಗಿಸಲಾಗಿದೆ.

ಕಾಸರಗೋಡು ತಹಸೀಲ್ದಾರ್‌ ಮಹಮ್ಮದ್‌ ನವಾಝ್, ಡೆಪ್ಯೂಟಿ ತಹಸೀಲ್ದಾರ್‌ ಸುರೇಶ್‌ ಬಾಬು, ಗ್ರಾಮಾಧಿಕಾರಿ ಲೋಕೇಶ್‌, ಗ್ರಾಮ ಸಹಾಯಕ ಸಾದಿಕ್‌ ಆಲಿ ಮೊದಲಾದವರು ಜತೆಗಿದ್ದರು.

ಸಾಂಕ್ರಾಮಿಕ ಜ್ವರ ವ್ಯಾಪಕ
ಮಳೆಯ ಪರಿಣಾಮವಾಗಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಜ್ವರದಿಂದ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಅಧಿಕವಾಗಿದೆ. ಇದೀಗ 30 ಮಂದಿ ಜ್ವರದಿಂದ ಜನರಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರಲ್ಲೊಬ್ಬರಿಗೆ ಡೆಂಗ್ಯು, ನಾಲ್ಕು ಮಂದಿಗೆ ಹಳದಿ ಕಾಮಾಲೆ, ಐದು ಮಂದಿಗೆ ಬೇಧಿ, ನಾಲ್ಕು ಮಂದಿಗೆ ಹೈಪಟೈಟಸ್‌, 14 ಮಂದಿಗೆ ಸಾಮಾನ್ಯ ಜ್ವರ ಬಾಧಿಸಿದೆ. ಜ್ವರ ಬಾಧಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸೌಕರ್ಯ ಏರ್ಪಡಿಸಲಾಗಿದೆ ಎಂದು ಡೆಪ್ಯೂಟಿ ಸುಪರಿಂಟೆಂಡೆಂಟ್‌ ಡಾ|ಗೀತಾ ಗುರುದಾಸ್‌ ತಿಳಿಸಿದ್ದಾರೆ.

ಗುಡ್ಡೆ ಕುಸಿತದಿಂದ ಮನೆಗೆ ಹಾನಿ
ಮೊಗ್ರಾಲ್‌ಪುತ್ತೂರು ಕೋಟೆಕುಂಜದಲ್ಲಿ ವಿಮಲ ಅವರ ಕಾಂಕ್ರೀಟ್‌ ಮನೆಗೆ ಗುಡ್ಡೆ ಜರಿದು ಹಾನಿಗೀಡಾಗಿದೆ. ಚೌಕಿ ಕಲ್ಲಂಗೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್‌ ಮರ ಮುರಿದು ವಿದ್ಯುತ್‌ ತಂತಿ ಮೇಲೆ ಬಿದ್ದು ಸಾರಿಗೆ ಅಡಚಣೆ ಉಂಟಾಗಿದೆ. ಅಗ್ನಿಶಾಮಕ ದಳ ಮತ್ತು ಲೋಕೋಪಯೋಗಿ ಇಲಾಖೆ ಸ್ಥಳಕ್ಕೆ ಆಗಮಿಸಿ ಮರ ಕಡಿದು ಸಂಚಾರ ಸುಗಮಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next