Advertisement

ಉಜ್ಜೋಡಿ: ಅಂಡರ್‌ಪಾಸ್‌ ಕಾಮಗಾರಿ ಆರಂಭ

08:57 PM May 27, 2019 | Sriram |

ಮಹಾನಗರ: ಪಂಪ್‌ವೆಲ್‌- ಎಕ್ಕೂರು ನಡುವಿನ ಉಜ್ಜೋಡಿ
ಶ್ರೀ ಮಹಾಕಾಳಿ ದೇವಸ್ಥಾನದ ಸಮೀಪ ಬಹುಕಾಲದ ಬೇಡಿಕೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಸದ್ಯ ಆರಂಭವಾಗಿದೆ. ಕಾಮಗಾರಿ ವೇಳೆ ರಾ.ಹೆ. ಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ಸದ್ಯ ಪಂಪ್‌ವೆಲ್‌ನಿಂದ ಉಜ್ಜೋಡಿಯವರೆಗೆ ಸರ್ವಿಸ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Advertisement

ನಂತೂರಿನಿಂದ ತಲಪಾಡಿವರೆಗೆ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿದಿದ್ದರೂ ಕೆಲವೆಡೆ ಇನ್ನೂ ಆರಂಭವಾರಲಿ ಲ್ಲ. ಈ ಪೈಕಿ, ಉಜ್ಜೋಡಿಯಿಂದ ಪಂಪ್‌ವೆಲ್‌ ಹೆದ್ದಾರಿ ಅಗಲೀಕರಣ ಹಲವು ವರ್ಷಗ ಳಿಂದ ಬಾಕಿಯಾಗಿತ್ತು. ಪಂಪ್‌ವೆಲ್‌- ತೊಕ್ಕೊಟ್ಟು ಫ್ಲೈಓವರ್‌ ಕಾಮಗಾರಿಯೂ ನಿಧಾನವಾಗಿ ನಡೆಯುತ್ತ ಬಹಳಷ್ಟು ಸಮಸ್ಯೆ ಸೃಷ್ಟಿಯಾಗಿತ್ತು. ಸದ್ಯ ತೊಕ್ಕೊಟ್ಟು ಫ್ಲೈಓವರ್‌ ಕಾಮಗಾರಿ ಕೊನೆಯ ಹಂತದಲ್ಲಿದೆ. ಪಂಪ್‌ವೆಲ್‌ ಪ್ಲೈಓವರ್‌ ಕೆಲಸಕ್ಕೆ ಸದ್ಯ ವೇಗ ದೊರೆತಿದೆ.

ಪಂಪ್‌ವೆಲ್‌ ಸಮೀಪದ ಉಜ್ಜೋಡಿ ಅಂಡರ್‌ಪಾಸ್‌ ಕಾಮಗಾರಿ ಮಾಡುವ ಹಿನ್ನೆಲೆಯಲ್ಲಿ ರಾ.ಹೆ.ಯ ಎರಡೂ ಕಡೆಯಿಂದ ಸರ್ವಿಸ್‌ ರಸ್ತೆಯನ್ನು ಫೆಬ್ರವರಿಯಲ್ಲಿ ಮಾಡಲಾಗಿತ್ತು. ಕಳೆದ ಕೆಲವು ದಿನಗಳಿಂದ ಇದೇ ಸರ್ವಿಸ್‌ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.

ಪಂಪ್‌ವೆಲ್‌ನಲ್ಲಿ ಫ್ಲೈಓವರ್‌ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಲಭ್ಯವಾದ ಬಳಿಕ ಇಂಡಿಯಾನ ಆಸ್ಪತ್ರೆಯಿಂದ ಉಜ್ಜೋಡಿವರೆಗಿನ ಹಾಗೂ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ನಿಂದ ಉಜ್ಜೋಡಿಯವರೆಗಿನ ಎರಡೂ ಬದಿಯ ವಾಹನ ಸವಾರರಿಗೆ ಉಜ್ಜೋಡಿ ಅಂಡರ್‌ಪಾಸ್‌ ಉಪಯೋಗವಾಗಲಿದೆ.

ಉಡುಪಿ- ಕಾಸರಗೋಡು ಮಾರ್ಗದ ಪಂಪ್‌ವೆಲ್‌ನಲ್ಲಿ ಫ್ಲೈಓವರ್‌ ಕಾಮಗಾರಿ ಸದ್ಯ ಇನ್ನಷ್ಟು ವೇಗ ಪಡೆದುಕೊಂಡಿದೆ. ಸುದೀರ್ಘ‌ ವರ್ಷದಿಂದ ಕುಂಟುತ್ತಾ ಸಾಗಿದ ಈ ಕಾಮಗಾರಿ ಸಾರ್ವಜನಿಕರ ಆಕ್ಷೇಪಗಳಿಗೂ ಕಾರಣವಾಗಿತ್ತು. ಸುಮಾರು 600 ಮೀ. ಉದ್ದ ಹಾಗೂ 20 ಮೀ. ಅಗಲದಲ್ಲಿ ಫ್ಲೈಓವರ್‌ ಇರಲಿದೆ.

Advertisement

ನಂತೂರು ಭಾಗದಿಂದ ಬರುವಾಗ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿ ಮುಂಭಾಗದಿಂದ, ಇಂಡಿಯಾನ ಆಸ್ಪತ್ರೆಯ ಮುಂಭಾಗದವರೆಗೆ ಫ್ಲೈಓವರ್‌ ನಿರ್ಮಾಣವಾಗಲಿದೆ. ಪಂಪ್‌ವೆಲ್‌ ಸುತ್ತಮುತ್ತ ವಾಹನದಟ್ಟಣೆ ಪ್ರತಿನಿತ್ಯ ಬಿಗಡಾಯಿಸುತ್ತಿರುವ ಪರಿಣಾಮ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿರುವುದು ಸಾಮಾನ್ಯ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಎರಡೂ ಬದಿಯಿಂದ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ದ್ವಿಪಥದ ಫ್ಲೈಓವರ್‌ ನಿರ್ಮಾಣ ಮಾಡಲಾಗುತ್ತಿದೆ.

ಅಂಡರ್‌ಪಾಸ್‌ ಎತ್ತರ‌ 3.5 ಮೀ.
ಉಜ್ಜೋಡಿಯಲ್ಲಿ ನಿರ್ಮಾಣವಾಗಲಿರುವ ಅಂಡರ್‌ಪಾಸ್‌ 3.5 ಮೀಟರ್‌ ಎತ್ತರ, 7. ಮೀ. ಅಗಲವಿರಲಿದೆ. ತಲಪಾಡಿ ಸಮೀಪದ ಕೆ.ಸಿ. ರೋಡ್‌ ಪೆಟ್ರೋಲ್‌ ಪಂಪ್‌ ಸಮೀಪ ಮಾಡಲಾಗಿರುವ ಅಂಡರ್‌ಪಾಸ್‌ ಮಾದರಿಯಲ್ಲಿಯೇ ಇದು ಕೂಡ ನಿರ್ಮಾಣವಾಗಲಿದೆ. ಅಂಡರ್‌ಪಾಸ್‌ ಕಾಮಗಾರಿ ಸುಮಾರು 2 ತಿಂಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಶ್ರೀ ಮಹಾಂಕಾಳಿ ದೇವಸ್ಥಾನದ ಸಮೀಪದ ರಸ್ತೆಯ ಮೂಲಕ ವೆಲೆನ್ಸಿಯಾ ಭಾಗದ ಜನರಿಗೆ ಹಾಗೂ ಉಜ್ಜೋಡಿ ವ್ಯಾಪ್ತಿಯ ವಾಹನ ಸವಾರರಿಗೆ ಉಪಯೋಗವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next