ಹುಬ್ಬಳ್ಳಿ: ಸಾವಿರ ಕೋಟಿ ರೂ. ವೆಚ್ಚದ ಬಿಆರ್‌ಟಿಎಸ್ ಯೋಜನೆಗೆ ವಾಹನ ದಟ್ಟಣೆ ಸವಾಲೊಡ್ಡಿದೆ. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿರುವ ಅಧಿಕಾರಿಗಳ ಕಸರತ್ತಿಗೆ ಅಗತ್ಯ ರಸ್ತೆಗಳು ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ನಗರದ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿರುವ ದೂರದೃಷ್ಟಿ ಬಗ್ಗೆ ಪ್ರಶ್ನೆ ಮೂಡಿಸಿದೆ.
ಕಳೆದ ಮೂರು ದಿನಗಳಿಂದ ಬಿಎಸ್ಸೆನ್ನೆಲ್ ಕಚೇರಿಯಿಂದ ಉಣಕಲ್ಲನ ಶ್ರೀನಗರ ಕ್ರಾಸ್‌ವರೆಗೆ ಬಿಆರ್‌ಟಿಎಸ್ ಬಸ್ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವಾಹನ ದಟ್ಟಣೆ ಸುಗಮ ಸಂಚಾರಕ್ಕೆ ದೊಡ್ಡ ಸಮಸ್ಯೆ ತಂದೊಡ್ಡಿದ್ದು, ಐದು ಬಸ್‌ಗಳಿಗೆ ಇಂತಹ ಪರಿಸ್ಥಿತಿಯಾದರೆ ಮುಂದೆ 130 ಬಸ್‌ಗಳ ಸಂಚಾರ ಹೇಗೆ ಎನ್ನುವ ಪ್ರಶ್ನೆ ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಬಿಆರ್‌ಟಿಎಸ್ ಅಧಿಕಾರಿಗಳಲ್ಲಿ ಮೂಡಿದೆ. ಬಿಎಸ್ಸೆನ್ನೆಲ್ ಕಚೇರಿಯಿಂದ ಹಳೇ ಬಸ್ ನಿಲ್ದಾಣಕ್ಕೆ 6-7 ನಿಮಿಷದಲ್ಲಿ ತಲುಪಬೇಕಾದ ಬಿಆರ್‌ಟಿಎಸ್ ಬಸ್ 15-16 ನಿಮಿಷ ಆಗುತ್ತಿದೆ.
ಸಮರ್ಪಕ ರಸ್ತೆಯಿಲ್ಲ: ಹಳೇ ಬಸ್‌ನಿಲ್ದಾಣದಿಂದ ಸುಮಾರು 3700 ಮಾರ್ಗಗಳಲ್ಲಿ ಬಸ್‌ಗಳು ಸಂಚಾರ ಮಾಡುತ್ತಿವೆ. ಚನ್ನಮ್ಮ ವೃತ್ತದ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಇಲ್ಲಿನ ಸುಮಾರು 1500 ಬಸ್ ಕಾರ್ಯಾಚರಣೆಯನ್ನು ಹೊಸೂರು ಬಸ್‌ನಿಲ್ದಾಣಕ್ಕೆ ಸ್ಥಳಾಂತರಿಸಲು ಚಿಂತನೆ ನಡೆದಿದೆ. ಆದರೆ ಇಷ್ಟೊಂದು ಬಸ್ ಗಳ ಓಡಾಟಕ್ಕೆ ಪೂರಕವಾದ ಸಮರ್ಪಕ ರಸ್ತೆ ಇಲ್ಲದಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಹೊಸ ಕೋರ್ಟ್ ರಸ್ತೆಯನ್ನು ಒನ್‌ವೇ ಮಾಡುವ ಚಿಂತನೆ ನಡೆದಿದೆ. ಕೋರ್ಟ್ ಹತ್ತಿರದ ರಸ್ತೆಯ ಮೂಲಕ ತತ್ವದರ್ಶ ಆಸ್ಪತ್ರೆ ಮುಂಭಾಗದಿಂದ ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಮೂಲಕ ಗೋಕುಲ ರಸ್ತೆಗೆ ಸಂಪರ್ಕ ಕಲ್ಪಿಸುವುದಕ್ಕೆ ಚರ್ಚೆ ನಡೆದಿದೆ.
ಮರೆತ ಜಂಕ್ಷನ್ ಅಭಿವೃದ್ಧಿ: ವಾಯವ್ಯ ಸಾರಿಗೆ ಬಸ್‌ಗಳು ಸಂಚರಿಸಲು ಪ್ರಮುಖವಾಗಿ ಹೊಸೂರು, ವಾಣಿ ವಿಲಾಸ ವೃತ್ತ ಹಾಗೂ ವಿಭಾಗೀಯ ಕಚೇರಿ ಬಳಿಯ ಜಂಕ್ಷನ್‌ಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಇಷ್ಟೊಂದು ಬಸ್‌ಗಳ ಓಡಾಟಕ್ಕೆ ಈ ಮೂರು ಜಂಕ್ಷನ್‌ಗಳು ಸದ್ಯಕ್ಕೆ ಯೋಗ್ಯವಾಗಿಲ್ಲ. ಇರುವ ಸ್ಥಿತಿಯಲ್ಲಿ ಬಸ್ ಗಳನ್ನು ಓಡಿಸುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾದರೆ ಸ್ಥಳೀಯರಿಂದ ಸಾಕಷ್ಟು ವಿರೋಧ ಎದುರಿಸಬೇಕಾಗುತ್ತದೆ. ಆದರೆ, ಚನ್ನಮ್ಮ ವೃತ್ತದ ಸಮಸ್ಯೆಯನ್ನು ಈ ಮೂರು ಜಂಕ್ಷನ್ ಗಳಿಗೆ ಹಂಚಿದಂತಾಗುತ್ತದೆ ಎನ್ನುವುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.
ದೂರದೃಷ್ಟಿ ಕೊರತೆ: ಬಿಆರ್‌ಟಿಎಸ್ ಯೋಜನೆಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಸಂಚಾರ ದಟ್ಟಣೆ ನಿವಾರಣೆಗೆ ನೀಡದ್ದರಿಂದ ‘ತ್ವರಿತ ಸಾರಿಗೆ’ ಈಡೇರದ ಪರಿಸ್ಥಿತಿ ಎದುರಾಗಲಿದೆ. ರಸ್ತೆ ಅಗಲೀಕರಣ ಮಾಡಿ ಮನೆ ಕಳೆದುಕೊಂಡವರಿಗೆ ಇತರೆಡೆ ಆಶ್ರಯಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನುತ್ತಲೇ ಸ್ಥಳೀಯ ಜನಪ್ರತಿನಿಧಿಗಳು ಕಾಲಹರಣ ಮಾಡಿದ್ದಾರೆ. ಸಿಆರ್‌ಎಫ್ ಹಾಗೂ ಬಿಆರ್‌ಟಿಎಸ್ ಪಾಲುದಾರಿಕೆಯಲ್ಲಿ ಕೋರ್ಟ್ ರಸ್ತೆ ಅಭಿವೃದ್ಧಿ ಪಡಿಸುವ ಭರವಸೆ ನೀಡಿದ್ದರಾದರೂ ಭೂ ಸ್ವಾಧೀನ ಸುಲಭವಲ್ಲ. ಒಟ್ಟಾರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದೂರದೃಷ್ಟಿ ಕೊರತೆ ಎದ್ದುಕಾಣುತ್ತಿದೆ.
ಪ್ರವೇಶ-ನಿರ್ಗಮನಕ್ಕೆ ಒಂದೇ ಗೇಟ್!
ಹೊಸೂರಿನ ಪ್ರಾದೇಶಿಕ ಬಸ್‌ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನಕ್ಕೆ ಇಕ್ಕಟ್ಟಾದ ಒಂದೇ ಗೇಟ್ ಮಾಡಿದ್ದು, ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಂಚಾರ ವ್ಯವಸ್ಥೆ ಜ್ಞಾನವಿಲ್ಲದ ಅಧಿಕಾರಿಗಳಿಂದ ಇಂತಹ ಎಡವಟ್ಟು ಉಂಟಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಹೊಸೂರು ಬಸ್‌ನಿಲ್ದಾಣಕ್ಕೆ ಬಸ್‌ಗಳನ್ನು ಸ್ಥಳಾಂತರಿಸುವುದರಿಂದ ರಸ್ತೆ ಸಮಸ್ಯೆ ಉಂಟಾಗಲಿದೆ. ಭೂಸ್ವಾಧೀನ, ರಸ್ತೆ ನಿರ್ಮಾಣಕ್ಕೆ ಕನಿಷ್ಠ 6 ತಿಂಗಳಾದರೂ ಬೇಕು. ಹೀಗಾಗಿ ಏಕಮುಖ ಸಂಚಾರಕ್ಕೆ ಯೋಚನೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಎರಡು ರಸ್ತೆಗಳನ್ನು ಗುರುತಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಜತೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು.
. ರಾಜೇಂದ್ರ ಚೋಳನ್, ಎಂಡಿ, ಬಿಆರ್‌ಟಿಎಸ್
ಬಸ್‌ಗಳನ್ನು ಸ್ಥಳಾಂತರ ಮಾಡುವುದರಿಂದ ಕಿತ್ತೂರು ಚನ್ನಮ್ಮ ವೃತ್ತ ಹಾಗೂ ಹಳೇ ಬಸ್‌ನಿಲ್ದಾಣ ಭಾಗದಲ್ಲಿ ಶೇ.60 ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಆಗ ಬಿಆರ್‌ಟಿಎಸ್ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸ್ಥಳಾಂತರಿಸಿದ ಬಸ್‌ಗಳ ಓಡಾಟಕ್ಕೆ ಅಗತ್ಯ ರಸ್ತೆ ಕಲ್ಪಿಸುವುದು ಅಗತ್ಯವಾಗಿದೆ.
.ಬಿ.ಎಸ್. ನೇಮಗೌಡ, ಡಿಸಿಪಿ
ಹೇಮರಡ್ಡಿ ಸೈದಾಪುರ