ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ತೀರ್ಥಹಳ್ಳಿ ಉಡುಪಿ ಮಂಗಳೂರು ತಲುಪುವ ಹೆದ್ದಾರಿಯ ಸಂಪರ್ಕ ಕೊಂಡಿಯಾದ ಆಗುಂಬೆ ಘಾಟಿ ಪ್ರೇಕ್ಷಣಿಯ ಸ್ಥಳವಾದ ಸೂರ್ಯಸ್ಥಮಾನ ವೀಕ್ಷಿಸುವ ಜಾಗದ ಸಮೀಪ ಘಾಟಿ ರಸ್ತೆ ಕಿರಿದಾದ ರಸ್ತೆಯಿದ್ದು ಈ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ವಾಹನಗಳನ್ನು ನಿಲ್ಲಿಸುವ ಅವಕಾಶ ಇಲ್ಲ.(ನೊ ಪಾರ್ಕಿಂಗ್ ಬೊರ್ಡ್) ವಾಹನ ನಿಲುಗಡೆ ನಿಷೇಧದ ಸ್ಥಳ ಎಂದು ನಾಮಫಲಕ ಸಹ ಹಾಕಲಾಗಿದೆ .
ಒಂದು ವೇಳೆ ಸೂರ್ಯಸ್ಥಮಾನ ನೋಡುವುದಾದರೆ ವಾಹನ ಸವಾರರು ಆಗುಂಬೆ ಪಾರೆಸ್ಟ್ ಗೇಟ್ ಪಕ್ಕ ಮೇಲ್ಭಾಗದಲ್ಲಿ ಪಾರ್ಕಿಂಗ್ ಮಾಡಬಹುದು. ಇಲ್ಲಿ ಸ್ಥಳಾವಕಾಶ ಇದೆ ಆದರೆ ಕೆಲವು ವಾಹನ ಸವಾರರು ಸೂರ್ಯಸ್ಥಮಾನ ನೋಡುವ ಕಿರಿದಾದ ಜಾಗದಲ್ಲೇ ವಾಹನ ಪಾರ್ಕಿಂಗ್ ಮಾಡಿ ಘಾಟಿಯಲ್ಲಿ ಓಡಾಡುವ ನೂರಾರು ವಾಹನಗಳಿಗೆ ನಿತ್ಯ ತೊಂದರೆ ಕೊಡುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಸಮಸ್ಯೆಯಿಂದ ಪ್ರತಿದಿನ ವಾಹನ ಸವಾರರು ಘಾಟಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿಂದ ಗಂಟೆ ಗಟ್ಟಲೆ ಪರದಾಡುವಂತಾಗಿದೆ.
ಇಲ್ಲಿ ಪೊಲೀಸ್ ಚೌಕಿ ಮತ್ತು ಪೊಲೀಸರ ವ್ಯವಸ್ಥೆ ಇದ್ದರೂ ಕೂಡ ಪೊಲೀಸರ ಎದುರಲ್ಲೇ ರಾಜರೋಷವಾಗಿ ವಾಹನ ಪಾರ್ಕಿಂಗ್ ಮಾಡಿದರೂ ಕೂಡ ಅಲ್ಲಿರುವ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
ಪಾರ್ಕಿಂಗ್ ನಿಷೇಧಿಸಿದೆ ಎಂಬ ಫಲಕದ ಮುಂದೆ ವಾಹನವನ್ನು ನಿಲ್ಲಿಸಿ ಕೆಲವು ಪ್ರಯಾಣಿಕರು ಸೂರ್ಯಸ್ಥಮಾನ ವೀಕ್ಷಣೆಗೆ ತೆರಳುತ್ತಾರೆ. ಇದರ ಬಗ್ಗೆ ಸ್ಥಳದಲ್ಲಿರುವ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಈ ರಸ್ತೆಯಲ್ಲಿ ಸಂಚರಿಸುವ ಅನೇಕ ವಾಹನ ಸವಾರರು ತಿಳಿಸಿದ್ದಾರೆ.
ಈ ಕಿರಿದಾದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಕಿಮೀಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದ್ದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿದಿನ ಓಡಾಟ ನಡೆಸುವ ವಾಹನ ಚಾಲಕರು ಮತ್ತು ಪ್ರಯಾಣಿಕರು ಆಗ್ರಹಿಸಿದ್ದಾರೆ.