Advertisement

ವಾಹನ ಮಾದರಿ ಸಮೀಕ್ಷೆಗೆ ಸೂಚನೆ

10:01 AM Mar 14, 2019 | Team Udayavani |

ಕಲಬುರಗಿ: ಜಿಲ್ಲೆಯಾದ್ಯಂತ ರಸ್ತೆಗಳ ಗುಣಮಟ್ಟ ಅಭಿವೃದ್ಧಿಯಾದರೂ ವಾಹನ ಅಪಘಾತದಲ್ಲಿ ಮರಣ ಹೊಂದುವವರ ಸಂಖ್ಯೆ ಕಡಿಮೆಯಾಗಿಲ್ಲ. ಆದ್ದರಿಂದ ಹೆಚ್ಚಾಗಿ ಅಪಘಾತಕ್ಕೆ ಒಳಗಾಗುತ್ತಿರುವ ವಾಹನಗಳ ಮಾದರಿ ಸಮೀಕ್ಷೆ ಕೈಗೊಂಡು ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದ್ವಿಚಕ್ರವಾಹನ ಸವಾರರು ಹೆಲ್ಮೆಟ್‌ ಧರಿಸದೇ ಇರುವುದು ಸಾವಿಗೆ ಮುಖ್ಯ ಕಾರಣವಾಗಿದೆ. ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡುವವರಿಗೆ ಕಡ್ಡಾಯವಾಗಿ ದಂಡ ವಿಧಿಸಿ ಎಂದು ಹೇಳಿದರು.

ನಿರಂತರವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸದೇ ಇರುವವರನ್ನು ಪತ್ತೆ ಹಚ್ಚಲು ಡಾಟಾಬೇಸ್‌ ಸಿದ್ಧಪಡಿಸಬೇಕು. ಡಾಟಾಬೇಸ್‌ನಲ್ಲಿ ವಾಹನಗಳ ಸಂಖ್ಯೆ, ಸವಾರರ ಮಾಹಿತಿ, ವಾಹನ ಚಾಲನಾ ಪರವಾನಿಗೆ ಪತ್ರಗಳ ಮಾಹಿತಿ ಒಳಗೊಂಡಿರಬೇಕು. ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಆನ್‌ಲೈನ್‌ ಮೂಲಕ ಪ್ರಕರಣಗಳು ದಾಖಲಿಸುವ ವ್ಯವಸ್ಥೆ ಇದ್ದು, ಈ ಮಾಹಿತಿ ಆಧರಿಸಿ ಡಾಟಾಬೇಸ್‌ ಸಿದ್ಧಪಡಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಿಂದ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕ್ಕೆ
ಸಾಫ್ಟವೇರ್‌ ಸಿದ್ಧಪಡಿಸಲು ಎಚ್‌.ಕೆ.ಆರ್‌ .ಡಿ.ಬಿ.ಗೆ ಪ್ರಸ್ತಾವನೆ ಸಲ್ಲಿಸಬೇಕು. ಸಾಫ್ಟವೇರ್‌ ನಿಂದ ಪದೇ ಪದೇ ತಪ್ಪು ಮಾಡುವವರನ್ನು ಗುರುತಿಸಿ ವಾಹನ ಸವಾರರ ಪರವಾನಿಗೆ ರದ್ದುಪಡಿಸುವುದು ಅಥವಾ ವಾಹನದ ಪರವಾನಿಗೆ ರದ್ದುಪಡಿಸುವ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
 
ಉಪಸಾರಿಗೆ ಆಯುಕ್ತೆ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ. ಶೋಭಾ ಮಾತನಾಡಿ, ಜಿಲ್ಲೆಯಲ್ಲಿ 2016ರಲ್ಲಿ 327, 2017ರಲ್ಲಿ 327 ಹಾಗೂ 2018ರಲ್ಲಿ 373 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅಪಘಾತಗಳನ್ನು ತಪ್ಪಿಸಲು ಪೊಲೀಸ್‌ ಇಲಾಖೆಯಿಂದ ಬ್ಲಾಕ್‌ ಸ್ಪಾಟ್‌ ಗಳನ್ನು ಗುರುತಿಸಲಾಗಿದೆ. ಪೊಲೀಸ್‌ ಇಲಾಖೆಯಿಂದ ಹೆಲ್ಮೆಟ್‌ ಧರಿಸದೇ ಇರುವ 2824 ಪ್ರಕರಣಗಳನ್ನು ದಾಖಲಿಸಿ 2.82 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ ಎಂದು ತಿಳಿಸಿದರು.

ಐಎಎಸ್‌ ಪ್ರೊಬೇಷನರಿ ಅಧಿಕಾರಿ ಸ್ನೇಹಲ್‌ ಸುಧಾಕರ ಲೋಖಂಡೆ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next