Advertisement

Devanahalli: ದೇವನಹಳ್ಳಿಯಲ್ಲಿ ವಾಹನ “ಗುಜರಿ ಅಂಗಡಿ”

07:23 AM Aug 11, 2023 | Team Udayavani |

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ವಾರಗಳಲ್ಲಿ ರಾಜ್ಯದ ಮೊದಲ “ನೋಂದಾಯಿತ ವಾಹನಗಳ ಗುಜರಿ ಅಂಗಡಿ’ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರದಲ್ಲಿ ತಲೆಯೆತ್ತಲಿದೆ. ಇದರೊಂದಿಗೆ ರಾಜ್ಯದಲ್ಲಿರುವ ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯಲಿದೆ.

Advertisement

ಮಹೀಂದ್ರ ಸಿರೊ ಕೇಂದ್ರದ ಸಾರ್ವಜನಿಕ ಉದ್ದಿಮೆ ಎಂಎಸ್‌ಟಿಸಿ ಲಿ., ಸಹಯೋಗದಲ್ಲಿ ಸುಮಾರು ಮೂರು ಎಕ್ರೆ ಜಾಗದಲ್ಲಿ ವಾಹನಗಳ ಗುಜರಿ ಕೇಂದ್ರ ತಲೆಯೆತ್ತಲಿದೆ. ಸರಕಾರದ ಮಟ್ಟದಲ್ಲಿ ಈ ಸಂಬಂಧದ ಬಹುತೇಕ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಕೆಲವು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಕಂಪೆನಿಗೆ ಸೂಚಿಸಲಾಗಿದೆ. ಒಟ್ಟಾರೆ ಇನ್ನೊಂದು ತಿಂಗಳಲ್ಲಿ ಈ ಕೇಂದ್ರ ಅಸ್ತಿತ್ವಕ್ಕೆ ಬರಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರದ ಗುಜರಿ ನೀತಿಯನ್ನು ಜಾರಿಗೊಳಿಸಲು ರಾಜ್ಯವೂ ಮುಂದಾಗಿದೆ. ಅದರಂತೆ 15 ವರ್ಷ ಮೀರಿದ ಎಲ್ಲ ಪ್ರಕಾರದ ನೋಂದಾಯಿತ ವಾಹನಗಳನ್ನು ಗುಜರಿಗೆ ಹಾಕುವ ಪೂರಕ ಸೌಲಭ್ಯ ಕೇಂದ್ರ ತೆರೆಯಲು ಆನ್‌ಲೈನ್‌ ಮೂಲಕ ಸಾರಿಗೆ ಇಲಾಖೆ ಈ ಹಿಂದೆಯೇ ಅರ್ಜಿ ಆಹ್ವಾನಿಸಿತ್ತು. ಮೂರು ಕಂಪೆನಿಗಳು ಮುಂದೆ ಬಂದಿವೆ. ಈ ಪೈಕಿ ಮಹೀಂದ್ರ ಸಿರೊ ಈಗಾಗಲೇ ಬಹುತೇಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಿತ್ಯ ಸುಮಾರು 500 ವಾಹನಗಳನ್ನು ಗುಜರಿಗೆ ಹಾಕುವ ಸಾಮರ್ಥ್ಯ ಹೊಂದಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಪ್ರವರ್ತನ) ಸಿ. ಮಲ್ಲಿಕಾರ್ಜುನ “ಉದಯವಾಣಿ’ಗೆ ತಿಳಿಸಿದರು.

ವರ್ಷಾಂತ್ಯದಲ್ಲಿ 3 ಕೇಂದ್ರಗಳು ಅಸ್ತಿತ್ವಕ್ಕೆ?
ಕೇಂದ್ರದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಅಂದಾಜು 16 ಲಕ್ಷ ಅವಧಿ ಮೀರಿದ ನೋಂದಾಯಿತ ವಾಹನಗಳಿವೆ. ಇದರಲ್ಲಿ ಸರಕಾರಿ ವಾಹನಗಳು ಅಂದಾಜು 15 ಸಾವಿರ ಇದ್ದು, ಹಂತಹಂತವಾಗಿ ಗುಜರಿಗೆ ಹಾಕುವ ಪ್ರಕ್ರಿಯೆ ನಡೆಯಲಿದೆ. ಉತ್ತರ ಭಾರತದಲ್ಲಿ ಈಗಾಗಲೇ ಗುಜರಿ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ. ದಕ್ಷಿಣ ಭಾರತದಲ್ಲಿ ಬಹುಶಃ ಆಂಧ್ರಪ್ರದೇಶದ ಬಳಿಕ ಕರ್ನಾಟಕವೇ ಎರಡನೇ ಕೇಂದ್ರ ಆಗಲಿದೆ ಎಂದು ಅವರು ಹೇಳಿದರು.

ಕಡ್ಡಾಯ ಅಲ್ಲ
15 ವರ್ಷ ಮೀರಿದ ವಾಹನಗಳನ್ನು ಸ್ಕ್ರಾಪ್‌ಗೆ ಹಾಕುವುದು ಕಡ್ಡಾಯ ಅಲ್ಲ. ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಇಚ್ಛಿಸಿದಲ್ಲಿ ಅದರಲ್ಲಿರುವ ಸ್ಟ್ರೀಲ್‌ ಭಾಗಗಳನ್ನು ತೂಕದ ಲೆಕ್ಕದಲ್ಲಿ ಪಡೆದು, ವಾಹನ ಮಾಲಕರಿಗೆ ಹಣ ಪಾವತಿಸಲಾಗುತ್ತದೆ. ಜತೆಗೆ ಠೇವಣಿ ಪ್ರಮಾಣಪತ್ರ ನೀಡಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಅದನ್ನು ತೋರಿಸಿದರೆ, ಹಳೆಯ ವಾಹನದ ತೆರಿಗೆಯಲ್ಲಿ ಸಾರಿಗೆಯೇತರ ವಾಹನಕ್ಕೆ ಶೇ. 25ರಷ್ಟು ಹಾಗೂ ಸಾರಿಗೆ ವಾಹನಕ್ಕೆ ಶೇ. 15ರಷ್ಟು ವಿನಾಯಿತಿ ದೊರೆಯಲಿದೆ.
ಗುಜರಿಗೆ ಹಾಕುವ ವಾಹನಗಳ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣ ಇರಬಾರದು, ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿ ಇರಬಾರದು ಎಂಬ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಗುಜರಿಗೆ ಹಾಕಿದ ವಾಹನದ ಚೇಸಿಸ್‌ ಸಂಖ್ಯೆಯನ್ನು ಆರು ತಿಂಗಳ ಕಾಲ ಇಡಲಾಗುತ್ತದೆ. ಜತೆಗೆ ಸಾðéಪ್‌ ಆದ ವಾಹನಗಳ ಭೌತಿಕ ದಾಖಲೆಗಳನ್ನು ಎರಡು ವರ್ಷಗಳ ಮಟ್ಟಿಗೆ ಇಟ್ಟುಕೊಳ್ಳಲಾಗುತ್ತದೆ. ಬಳಿಕ ಅವೆಲ್ಲವೂ ಡಿಜಿಟಲೀಕರಣಗೊಳ್ಳಲಿವೆ.

Advertisement

ಕೊಪ್ಪಳ, ಕೊರಟಗೆರೆಯಲ್ಲೂ ಸ್ಥಾಪನೆ
ಮುಂದಿನ ಮೂರು ತಿಂಗಳಲ್ಲಿ ತುಮಕೂರಿನ ಕೊರಟಗೆರೆ ಹಾಗೂ ಕೊಪ್ಪಳದಲ್ಲಿ ಕೂಡ ಗುಜರಿ ಕೇಂದ್ರಗಳು ಬರಲಿವೆ. ಈ ಸಂಬಂಧದ ಪ್ರಸ್ತಾವನೆಗಳು ಸರಕಾರದ ವಿವಿಧ ಹಂತಗಳಲ್ಲಿವೆ. ಸದ್ಯಕ್ಕೆ ಇವೆರಡಕ್ಕೂ ಪ್ರಾಥಮಿಕ ಅನುಮತಿ ನೀಡಿದ್ದು, ಇದರಿಂದ ಕಂಪೆನಿಗಳು ಅಗತ್ಯ ಯಂತ್ರೋಪಕರಣಗಳನ್ನು ಹಾಕಿಕೊಳ್ಳಲು ಅನುಕೂಲ ಆಗಲಿದೆ ಎಂದು ಸಿ. ಮಲ್ಲಿಕಾರ್ಜುನ ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next