Advertisement

ತಡೆಗೋಡೆ ಇಲ್ಲದೆ ತೋಟಕ್ಕೆ ಬೀಳುವ ವಾಹನ 

12:25 PM Aug 08, 2018 | Team Udayavani |

ಜಾಲ್ಸೂರು : ಕಾಸರಗೋಡು ರಸ್ತೆಯ ಜಾಲ್ಸೂರು ಗೇಟ್‌ನಿಂದ ಮುಂದೆ ದೊಡ್ಡ ತಿರುವುಗಳಿದ್ದು, ಅಪಘಾತಗಳು ನಡೆಯುತ್ತಿವೆ. ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಕಾರು, ಬೈಕ್‌ಗಳು ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬೀಳುವುದು ಸಾಮಾನ್ಯ. ಹತ್ತು ವರ್ಷಗಳಿಂದ ಮನವಿ ಮಾಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Advertisement

ಅಪಘಾತಗಳು ಸತತವಾಗಿ ನಡೆಯುತ್ತಿದ್ದರೂ ಇಲ್ಲಿ ಪ್ರಯಾಣಿಕರ ಗಮನಕ್ಕೆ ರಸ್ತೆ ಬದಿಯಲ್ಲಿ ಅಪಘಾತ ವಲಯ ಎಂಬ ಫ‌ಲಕವನ್ನೂ ಅಳವಡಿಸಿಲ್ಲ. ಮಳೆಗಾಲದಲ್ಲಿ ಮಣ್ಣು ಕುಸಿಯುತ್ತಿದ್ದರೂ ಅಧಿಕಾರಿಗಳು ಭರವಸೆ ಕೊಟ್ಟು ಮತ್ತೆ ಆ ಕಡೆ ತಿರುಗಿ ನೋಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ಧದಲ್ಲೆ  ನಿಂತ ಕಾಮಗಾರಿ
ತಡೆಗೋಡೆ ನಿರ್ಮಿಸಲು ಆರಂಭಿಸಿದರೂ ಕಾಮಗಾರಿ ಅರ್ಧದಲ್ಲೆ  ನಿಲ್ಲಿಸಲಾಗಿದೆ. ಅಧಿಕಾರಿಗಳು ಅನುದಾನದ ಕೊರತೆ ಕಾರಣ ನೀಡಿ ಹಲವು ವರ್ಷಗಳೇ ಕಳೆದಿವೆ. ತಡೆಗೋಡೆ ನಿರ್ಮಿಸಲು ಆರಂಭಿಸಿದ ದಿನಾಂಕದ ಮಾಹಿತಿ ಗ್ರಾ.ಪಂ. ಗೂ ಇಲ್ಲ. ಈ ಸಮಸ್ಯೆಯನ್ನು ಗ್ರಾಮ ಸಭೆಯಲ್ಲಿ ಪ್ರಸ್ತಾವಿಸಿದ್ದರೂ ಅಧಿಕೃತ ತೀರ್ಮಾನ ಇನ್ನೂ ಹೊರಬಿದ್ದಿಲ್ಲ. ಇಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸಿ ವಾಹನಗಳು ನಜ್ಜುಗುಜ್ಜಾಗಿವೆ, ಸವಾರರು – ಪ್ರಯಾಣಿಕರು ಗಾಯಗೊಂಡಿದ್ದಾರೆ.

ಅದೃಷ್ಟವಶಾತ್‌ ಇದುವರೆಗೆ ಪ್ರಾಣಹಾನಿ ಸಂಭವಿಸಿಲ್ಲ. ಅಧಿಕಾರಿಗಳು ಆದಷ್ಟು ಬೇಗನೆ ಎಚ್ಚೆತ್ತು ಇಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಬೇಕು. ತಡೆಬೇಲಿಯನ್ನೂ ನಿರ್ಮಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಮಾಹಿತಿ ಇದೆ,  ಚರ್ಚಿಸಿ, ಕ್ರಮ
ತಡೆಗೋಡೆ ನಿರ್ಮಾಣ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿಯಿದೆ. ಈ ವಿಚಾರವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇನೆ.
– ಎಸ್‌. ಅಂಗಾರ,
ಶಾಸಕರು, ಸುಳ್ಯ

Advertisement

ವಿಚಾರಿಸಿ ಕ್ರಮ
ರಸ್ತೆ ತಿರುವಿನಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾವಿಸಲಾಗಿದೆ. ಸಂಬಂಧಪಟ್ಟವರಲ್ಲಿ ವಿಚಾರಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ.
– ದಿನೇಶ್‌ ಅಡ್ಕಾರು, ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷ

 ಬೇಗನೆ ಮುಗಿಸಿ
ಹತ್ತು ವರ್ಷಗಳಿಂದ ರಸ್ತೆ ಬದಿಯ ತಡೆಗೋಡೆ ಮತ್ತು ತಡೆಬೇಲಿ ನಿರ್ಮಾಣಕ್ಕಾಗಿ ದೂರು ಕೊಡುತ್ತಿದ್ದೇವೆ. ಇನ್ನೂ ಫ‌ಲ ಸಿಕ್ಕಿಲ್ಲ. ಕಾಮಗಾರಿಯನ್ನು ಬೇಗನೆ ಪೂರ್ತಿಗೊಳಿಸಬೇಕು. 
– ಶೇಖರ್‌ ಕಾಳಮನೆ,
ಜಾಲ್ಸೂರು ಗ್ರಾಮಸ್ಥ

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next