ಮಡಿಕೇರಿ :ಇತ್ತೀಚಿನ ದಿನಗಳಲ್ಲಿ ಮಡಿಕೇರಿ ನಗರದೆಡೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ವಾಹನ ದಟ್ಟಣೆಯಿಂದ ನಗರದ ರಸ್ತೆಗಳಲ್ಲಿ ನಡೆದಾಡುವುದೇ ದುಸ್ತರವಾಗಿ ಪರಿಣಮಿಸಿದೆ. ಮಾತ್ರವಲ್ಲದೇ ವಾಹನ ಸಂಚಾರವನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ವಾರಾಂತ್ಯ ಮತ್ತು ಸಾಲು ಸಾಲು ರಜಾದಿನಗಳಲ್ಲಿ ನಗರದ ರಸ್ತೆಗಳೆಲ್ಲಾ ವಾಹನಗಳಿಂದಲೇ ತುಂಬುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಜಿಲ್ಲಾಡಳಿತ ನಗರದ ಕೆಲವು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲು ಚಿಂತನೆ ನಡೆಸಿದೆ. ನಗರದ ಮೇಜರ್ ಮಂಗೇರಿರ ಮುತ್ತಣ್ಣ ಸರ್ಕಲ್ ಬಳಿ ಅತೀ ಹೆಚ್ಚಿನ ಟ್ರಾಪಿಕ್ ಕಂಡು ಬರುತ್ತಿದ್ದು, ಇಲ್ಲಿ ಪ್ರವಾಸೀ ವಾಹನಗಳ ದಟ್ಟಣಯೇ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಈ ವೃತ್ತದಲ್ಲಿ ಮೊದಲಿಗೆ ಟ್ರಾಪಿಕ್ ಸಿಗ್ನಲ್ ಅಳವಡಿಸಲು ಜಿಲ್ಲಾಡಳಿತ ಮುಂದಾಗಿದ್ದು, ವಾಹನಗಳ ಸಂಖ್ಯೆಯನ್ನು ಸಮೀಕ್ಷ ನಡೆಸಲು ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆ ಮೊದಲ ಹಂತದ ಗಣತಿ ಕಾರ್ಯ ಆರಂಭಿಸಿದ್ದು, ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ಪ್ರತಿ ದಿನ 500 ನಾಲ್ಕು ಚಕ್ರದ ವಾಹನ, 49 ಬಸ್‌ಗಳು, 60 ಜೀಪು, 300 ದ್ವಿಚಕ್ರ, 70 ಪಿಕ್‌ಅಪ್, 21 ಟ್ರಕ್, 40 ಟ್ರಾವೆಲರ್ ಗಳು ಬರುತ್ತಿವೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಅಷ್ಟು ಮಾತ್ರವಲ್ಲದೇ, ಶನಿವಾರ, ಭಾನುವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ ಇವುಗಳ ಪ್ರಮಾಣ ಮತ್ತಷ್ಟು ಏರಿಕೆಯಾಗುತ್ತದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಇದು ಕೇವಲ ಮಡಿಕೇರಿ ನಗರ ಪ್ರವೇಶಿಸುವ ವಾಹನಗಳ ಸಂಖ್ಯೆಯಾದರೆ, ಮಡಿಕೇರಿ ಮೂಲಕ ಮಂಗಳೂರು, ವಿರಾಜಪೇಟೆ, ಕುಶಾಲನಗರ ಸಿದ್ದಾಪುರ ಕಡೆಗೆ ತೆರಳುವ ವಾಹನಗಳನ್ನು ಲೆಕ್ಕ ಹಾಕಿದರೆ ಇವುಗಳ ಸಂಖ್ಯೆ ಗಂಟೆಗೆ 2 ಸಾವಿರವನ್ನು ಮೀರುತ್ತವೆ ಎಂದು ಅಂದಾಜಿಸಲಾಗಿದೆ.
ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸುವ ಅಗತ್ಯದ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿ ಬಳಿಕ ಸಿಗ್ನಲ್ ಅಳವಡಿಸಲಾಗುತ್ತದೆ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತ, ರಾಜಾಸೀಟು, ಜೀವ ವಿಮಾ ನಿಗಮ ರಸ್ತೆಯ ಮೂಲಕ ಖಾಸಗಿ ಬಸ್‌ಗಳು ಸಂಚಾರವನ್ನೂ ನಡೆಸಲಿದ್ದು, ಟ್ರಾಫಿಕ್ ಸಿಗ್ನಲ್ ಅಳವಡಿಸುವುದು ಅತ್ಯಗತ್ಯ ಹೀಗಾದಲ್ಲಿ ನಗರದ ಹೃದಯ ಭಾಗದಲ್ಲಿ ವಾಹನ ದಟ್ಟಣೆಯ ಕಿರಿಕಿರಿಗೆ ಒಂದಷ್ಟು ಮುಕ್ತಿ ಸಿಗಲಿದೆ ಎಂದು ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ.
ವಾಹನ ದಟ್ಟಣೆ
ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ಹಲವು ಸಂಪರ್ಕ ರಸ್ತೆಗಳ ಮೂಲಕ ವಾಹನಗಳು ಆಗಮಿಸುತ್ತಿದ್ದು, ಇದರಿಂದಾಗಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗೆ ವಾಹನ ದಟ್ಟಣೆಯನ್ನು ಸಮೀಕ್ಷೆ ಮಾಡಲು ತಿಳಿಸಲಾಗಿದೆ.
ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರುಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ವಾರದ ದಿನ ಮತ್ತು ರಜಾ ದಿನಗಳಲ್ಲಿ ವಾಹನ ಸಂಖ್ಯೆಯನ್ನು ಸಮೀಕ್ಷೆ ಮಾಡಿ ಅದನ್ನು ಸರಕಾರಕ್ಕೆ ತಿಳಿಸಿ, ಟ್ರಾಫಿಕ್ ಸಿಗ್ನಲ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ಸುರಕ್ಷತೆಯ ದೃಷ್ಟಿಯಿಂದಲೂ ಇದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾಯ್ ತಿಳಿಸಿದ್ದಾರೆ.