ಆಹಾರದಲ್ಲಿ ತರಕಾರಿಗಳ ಸೇವನೆ ಅತೀ ಅಗತ್ಯ. ಹೆಚ್ಚಿನ ಎಲ್ಲ ತರಕಾರಿಗಳಲ್ಲಿ ಬೇರೆ ಬೇರೆಯದ್ದಾದ ವಿಟಮಿನ್ ಹಾಗೂ ಪ್ರೊಟೀನ್ ಅಂಶಗಳಿದ್ದು ಇದು ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹದಲ್ಲಿ ಮುಖ್ಯವಾಗಿ ಬೇಕಾಗಿರುವ ಪ್ರೊಟೀನ್‌ಗಳಲ್ಲಿ ಕಬ್ಬಿಣಾಂಶವೂ ಒಂದು. ಅದರ ಕೊರತೆಯಿಂದ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ಸುಸ್ತು, ತಲೆನೋವು, ಬಳಲಿಕೆ, ಕೂದಲು ಉದುರುವುದು, ಚರ್ಮದ ಕಾಂತಿ ಕಡಿಮೆಯಾಗುವುದು, ನಿಶ್ಶಕ್ತಿ ಈ ಮೊದಲಾದ ರೋಗಗಳು ಉಂಟಾಗಲು ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ಮುಖ್ಯಕಾರಣ. ತರಕಾರಿಗಳಲ್ಲಿ ಕಬ್ಬಿಣಾಂಶವು ಅಧಿಕವಾಗಿದ್ದು ಅವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗಗಳಿಂದ ಮುಕ್ತಿ ಪಡೆಯಬಹುದು.
ದವಸ-ಧಾನ್ಯ: ಬಟಾಣಿ, ಕಡ್ಲೆ, ಪಚ್ಚೆಹೆಸರು ಮೊದಲಾದ ದವಸದಾನ್ಯಗಳಲ್ಲಿ ಕಬ್ಬಿಣಾಂಶವು ಅಧಿಕವಾಗಿದ್ದು, ಅವುಗಳನ್ನು ಬೆಳಗ್ಗೆ ಎದ್ದು ಸೇವಿಸುವುದಂದ ಆರೋಗ್ಯ ಹೆಚ್ಚಿಸಿಕೊಳ್ಳಬಹುದು. ದವಸದಾನ್ಯಗಳನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಹಾಗೆಯೇ ಸೇವಿಸಬಹುದು. ಅಥವಾ ಅದನ್ನು ಬೇಯಿಸಿಕೊಂಡು ಸೇವಿಸಬಹುದು.
ಬದನೆ: ಕಬ್ಬಿಣಾಂಶವಿರುವ ಮತ್ತೂಂದು ತರಕಾರಿ ಬದನೆ. ಇದನ್ನು ಗೊಜ್ಜು ಮಾಡಿಕೊಂಡು ಅಥವಾ ಸುಟ್ಟ ಬದನೆಯ ಚಟ್ನಿ ಮಾಡಿಕೊಂಡು ಸೇವಿಸಬಹುದು. ಬೀನ್ಸ್: ಬೇಯಿಸಿದ ಒಂದು ಕಪ್ ಬೀನ್ಸ್‌ನಲ್ಲಿ 4.4ರಿಂದ 6.3 ಮಿಲಿ ಗ್ರಾಂನಷ್ಟು ಕಬ್ಬಿಣಾಂಶವಿರುತ್ತದೆ. ಇದನ್ನು ತಿಂಡಿಯ ಜತೆಗೆ ಅಥವಾ ಇತರ ಕೆಲವು ಖಾದ್ಯ, ಸೂಪ್‌ನಲ್ಲಿ ಹಾಕಿಕೊಂಡು ಸೇವಿಸಬಹುದು.
ಟೊಮೇಟೊ:ಹೆಚ್ಚಿನ ಎಲ್ಲ ಅಡುಗೆಗಳಲ್ಲಿಯೂ ಟೊಮೇಟೊ ಇದ್ದೇ ಇರುತ್ತದೆ. ಅದರಲ್ಲೂ ಧಾರಾಳವಾಗಿ ಕಬ್ಬಿಣಾಂಶವಿದ್ದು, ಸೂಪ್ ಅಥವಾ ಚಪಾತಿಯ ಜತೆಗೆ ಇದನ್ನು ಸೇವಿಸಬಹುದು. ಇದರಲ್ಲಿ 3.9 ಮಿಲಿಗ್ರಾಂನಷ್ಟು ಕಬ್ಬಿಣದ ಅಂಶವಿರುತ್ತದೆ. ಹೀಗೆ ಹೆಚ್ಚಿನ ಎಲ್ಲ ತರಕಾರಿಗಳಲ್ಲಿ ಕಬ್ಬಿಣಾಂಶವು ಅಧಿಕವಾಗಿರುತ್ತದೆ. ದಿನನಿತ್ಯ ಸೇವನೆ ಮಾಡುವುದರಿಂದ ರೋಗಗಳಿಂದ ದೂರವಿರಬಹುದು.
ಸೊಪ್ಪು
ಬಸಳೆ, ಹರಿವೆ ಮೊದಲಾದ ಸೊಪ್ಪುಗಳಲ್ಲಿ ಅಧಿಕ ವಿಟಮಿನ್‌ಗಳಿವೆ. ಇವುಗಳು ಎಲ್ಲ ಕಡೆ ಬೆಳೆಯುವುದರಿಂದ ಅದಕ್ಕೆ ಬಳಸುವ ಕೀಟನಾಶಕದ ಪ್ರಮಾಣವೂ ಕಡಿಮೆ ಇರುತ್ತದೆ. ಇವುಗಳನ್ನು ಸೂಪ್ ಮಾಡಿ ಕುಡಿಯುವುದರಿಂದ ದೇಹಕ್ಕೆ ಒಳಿತು.
– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು