Advertisement

ರಾಶಿಗಟ್ಟಲೇ ಕೊಳೆಯುತ್ತಿದೆ ಕಾಯಿಪಲ್ಲೆ

05:02 PM May 24, 2021 | Team Udayavani |

ವರದಿ : ಶಶಿಧರ್‌ ಬುದ್ನಿ

Advertisement

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಹೇರಿರುವ ಕಠಿಣ ನಿಯಮಗಳ ಪರಿಣಾಮ ತರಕಾರಿ ಬೆಳೆದ ರೈತರ ಬಾಳು ಬಾಡಿ ಹೋಗುವಂತಾಗಿದ್ದು, ಹಾಕಿದ ಶ್ರಮಕ್ಕೆ ಪ್ರತಿಫಲ ಸಿಗದಂತಾಗಿದೆ.

ಹೌದು. ಶನಿವಾರ-ರವಿವಾರ ಕಠಿಣ ನಿಯಮ ಜಾರಿ ಮಾಡಿದ್ದ ಜಿಲ್ಲಾಡಳಿತ ಹೋಲ್‌ಸೇಲ್‌ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಬೆಳಿಗ್ಗೆ 6:00 ರಿಂದ 8:00 ಗಂಟೆವರೆಗೆ ವ್ಯಾಪಾರಕ್ಕೆ ಅವಧಿ ಸೀಮಿತಗೊಳಿಸಿದ್ದರಿಂದ ಶೇ.70 ವ್ಯಾಪಾರ ಕುಸಿತಗೊಂಡಿದೆ. ಇದರಿಂದ ಮಾರುಕಟ್ಟೆಗೆ ತಂದ ಕಾಯಿಪಲ್ಲೆ ಮಾರಾಟ ಆಗದೇ ಇತ್ತ ಮನೆಗೂ ತೆಗೆದುಕೊಂಡು ಹೋಗಲಾಗದೇ ಮಾರುಕಟ್ಟೆಯಲ್ಲಿ ಹಾಗೆ ಬಿಟ್ಟು ಹೋಗುವಂತಾಗಿದೆ. ಹೀಗಾಗಿ ರಾಶಿಗಟ್ಟಲೇ ಕಾಯಿಪಲ್ಲೆ ಮಾರುಕಟ್ಟೆ ಆವರಣದಲ್ಲೇ ಬೀಳುತ್ತಿದ್ದು, ಕೊಳೆಯುತ್ತಿರುವ ಕಾಯಿಪಲ್ಲೆ ಬಿಡಾಡಿ ದನಗಳ ಪಾಲಾಗುವಂತಾಗಿದೆ.

ಈ ಹಿಂದೆ ಬೆಳಿಗ್ಗೆ 6:00 ರಿಂದ 10:00 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಆ ಅವಧಿಯಲ್ಲಿಯೇ ಶೇ.40 ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಈಗ ಕಳೆದೆರಡು ದಿನಗಳ ವಾರಾಂತ್ಯದ ಕಠಿಣ ನಿಯಮದಿಂದ ಬರೀ ಎರಡು ತಾಸು ನೀಡಿದ ಪರಿಣಾಮ ಈ ದುಸ್ಥಿತಿ ಬಂದಿದೆ. ಇದೀಗ ಜೂ.6ರವರೆಗೂ ಇದೇ ಕಠಿಣ ನಿಯಮಗಳನ್ನೇ ಜಿಲ್ಲಾಡಳಿತ ಮುಂದುವರಿಸಿದ್ದು, ಇದರಿಂದ ರೈತರ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಕೇಳಿದಷ್ಟು ದರಕ್ಕೆ ವ್ಯಾಪಾರ: ಧಾರವಾಡ ಹೊಸ ಎಪಿಎಂಸಿಗೆ ಧಾರವಾಡ, ಕಲಘಟಗಿ ತಾಲೂಕಿನಿಂದ ತರಕಾರಿ ಬರುತ್ತದೆ. ಕರ್ಫ್ಯೂ ಜಾರಿಯಲ್ಲಿರುವುದರಿಂದ ಎಪಿಎಂಸಿಗಳಲ್ಲಿ ಬೆಳಗ್ಗೆ 6ರಿಂದ 8:00 ಗಂಟೆವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ದೂರದ ಹಳ್ಳಿಗಳಿಂದ ತರಕಾರಿಯನ್ನು ಮಾರುಕಟ್ಟೆಗೆ ತಂದು ಮಾರಲು ರೈತರಿಗೆ ಸಾಧ್ಯವಾಗುತ್ತಿಲ್ಲ. 8:00 ಗಂಟೆಯಾಗುತ್ತಲೇ ವ್ಯಾಪಾರ ಬಂದ್‌ ಮಾಡುತ್ತಿರುವುದರಿಂದ ಕ್ವಿಂಟಲ್‌ಗ‌ಟ್ಟಲೆ ವಿವಿಧ ತರಕಾರಿ ಮಾರಾಟವಾಗದೆ ಉಳಿಯುತ್ತಿದೆ. ಹೀಗಾಗಿ ರೈತರು, ವ್ಯಾಪಾರಸ್ಥರು ಕೇಳಿದಷ್ಟು ದರಕ್ಕೆ ಕೊಟ್ಟು ಹೋಗುವಂತಾಗಿದೆ.

Advertisement

ಧಾರವಾಡ ತಾಲೂಕಿನ ತರಕಾರಿ ಬೆಳಗಾವಿ, ಗದಗ ಮತ್ತು ವಿವಿಧ ತಾಲೂಕುಗಳು ಸೇರಿದಂತೆ ಹಲವೆಡೆ ಹೋಗುತ್ತದೆ. ಆದರೆ, ಕರ್ಫ್ಯೂ ಇರುವುದರಿಂದ ಹೊರ ಜಿಲ್ಲೆ, ತಾಲೂಕುಗಳಿಗೆ ತರಕಾರಿ ಹೋಗುತ್ತಿಲ್ಲ. ಹೀಗಾಗಿ ರೈತರು ಸ್ಥಳೀಯ ಎಪಿಎಂಸಿಗಳಲ್ಲಿ ತರಕಾರಿ ಮಾರಾಟದ ಬೇಡಿಕೆಯನ್ನೇ ನೆಚ್ಚಿಕೊಂಡಿದ್ದಾರೆ. ಇದರಿಂದ ರೈತರು ಎಪಿಎಂಸಿ ಆವರಣದಲ್ಲಿ ರಾತ್ರಿಯೇ ತರಕಾರಿ ತಂದು ಇಳಿಸುತ್ತಿದ್ದಾರೆಂದು ತರಕಾರಿ ವ್ಯಾಪಾರಸ್ಥರು ಹೇಳುತ್ತಾರೆ.

ಕೊಳೆಯುತ್ತಿದೆ ತರಕಾರಿ: ಮಾರುಕಟ್ಟೆಗೆ ಹಸಿಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಅಪಾರ ಪ್ರಮಾಣದಲ್ಲಿ ಬರುತ್ತದೆ. ಅದರಲ್ಲೂ ಹಸಿಮೆಣಸಿನಕಾಯಿ ದೊಡ್ಡ ಪ್ರಮಾಣದಲ್ಲಿ ಬರುತ್ತಿರುವುದರಿಂದ ಎಪಿಎಂಸಿಯಲ್ಲೇ ಕೊಳೆಯುವಂತಾಗಿದೆ. ಉಳಿದಂತೆ ಬದನೆಕಾಯಿ, ಟೊಮೆಟೋ, ಚವಳಿಕಾಯಿ, ದೊಣ್ಣ ಮೆಣಸಿನಕಾಯಿ, ಹಾಗಲಕಾಯಿ, ವಿವಿಧ ಜಾತಿಯ ಸೊಪ್ಪು ಸೇರಿದಂತೆ ಇತರೆ ತರಕಾರಿಗಳು ವ್ಯಾಪಾರವಾಗದೇ ಉಳಿಯುತ್ತಿವೆ. ಅದರಲ್ಲೂ ಸೊಪ್ಪು ಮತ್ತು ಕಡಿಮೆ ಸಮಯ ಉಳಿಯುವ ತರಕಾರಿ ಇದ್ದರೆ ರೈತರು ಅದನ್ನು ಅಲ್ಲೇ ತಿಪ್ಪಗೆ ಹಾಕಿ ಹೋಗುತ್ತಿದ್ದಾರೆ. ಬೇಡಿಕೆಗಿಂತ ಹೆಚ್ಚು ತರಕಾರಿ ಬರುತ್ತಿರುವುದರಿಂದ ಬಹುತೇಕ ಎಲ್ಲ ತರಕಾರಿಗಳ ಬೆಲೆ ಕುಸಿತ ಕಂಡಿವೆ. ಹಸಿಮೆಣಸು ಬಹು ದೊಡ್ಡ ಪ್ರಮಾಣದಲ್ಲಿ ಉಳಿಯುವಂತಾಗಿ ದರವೂ ಕುಸಿದಿದೆ.

ಚಿಲ್ಲರೆ ದರ ಕಡಿಮೆಯಾಗಿಲ್ಲ : ಇನ್ನು ಸ್ಥಳೀಯ ವ್ಯಾಪಾರಸ್ಥರು ಎಪಿಎಂಸಿಯಿಂದ ತರಕಾರಿ ಖರೀದಿಸಿ ಸಾಗಿಸಲು ಸರಿಯಾದ ವಾಹನದ ವ್ಯವಸ್ಥೆ ಇಲ್ಲದೇ ಹೆಚ್ಚು ತರಕಾರಿ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಹೇಗೋ ತೆಗೆದುಕೊಂಡು ಹೋದರೂ ಅದನ್ನು ಅವರು ಅಡ್ಡಾಡಿ ಮಾರಬೇಕು. ಹೀಗಾಗಿ ಖರೀದಿಗೆ ಹಿಂದೇಟು ಹಾಕಿದ್ದಾರೆ. ಮಾರುಕಟ್ಟೆಯಲ್ಲಿ ತರಕಾರಿ ದರ ಕುಸಿತ ಕಂಡರೂ ಚಿಲ್ಲರೆ ಖರೀದಿಯಲ್ಲಿ ಮಾತ್ರ ದರ ಕಡಿಮೆಯಾಗಿಲ್ಲ. ಬಹುತೇಕ ವ್ಯಾಪಾರಸ್ಥರು ಮೊದಲಿನ ದರದಲ್ಲಿಯೇ ತರಕಾರಿ ಮಾರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next