Advertisement

ಮಧುಮೇಹ ನಿಯಂತ್ರಣಕ್ಕೆ ಸಸ್ಯಜನ್ಯ ಥೆರಪಿ

09:49 AM Jul 20, 2019 | Suhan S |

ಹುಬ್ಬಳ್ಳಿ: ಮಧುಮೇಹ ನಿಯಂತ್ರಣಕ್ಕೆ ಮಾತ್ರೆ, ಇನ್ಸುಲಿನ್‌ ಪಡೆಯುವುದು ಕಡ್ಡಾಯವಾಗಿದೆ. ಆದರೆ ಇದಕ್ಕೆ ಪರ್ಯಾಯ ಎನ್ನುವಂತೆ ಸಸ್ಯಜನ್ಯ ಆಧಾರಿತ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಮಧುಮೇಹವನ್ನು ಯಾವುದೇ ಮಾತ್ರೆ-ಇನ್ಸುಲಿನ್‌ ಇಲ್ಲದೆ ನಿಯಂತ್ರಣದಲ್ಲಿಡುವ ಯತ್ನವೊಂದು ಹುಬ್ಬಳ್ಳಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಸದ್ದಿಲ್ಲದೆ ನಡೆಯುತ್ತಿದೆ.

Advertisement

ಪುಣೆಯ ಫ್ರೀಡಂ ಫ್ರಾಮ್‌ ಡಯಾಬಿಟಿಕ್‌ ಸಂಸ್ಥೆ ಮಾರ್ಗದರ್ಶನದೊಂದಿಗೆ ಇಲ್ಲಿನ ಸ್ಪಿಂಗ್‌ ಆಫ್ ಹೆಲ್ತ್ ಸಂಸ್ಥೆ ಉತ್ತರ ಕರ್ನಾಟಕದ ಮೊದಲ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿದೆ. ಅನೇಕರು ಇದರ ಪ್ರಯೋಜನ ಪಡೆದು ಮಾತ್ರೆ-ಇನ್ಸುಲಿನ್‌ ಇಲ್ಲದೆ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಈ ಪದ್ಧತಿ ಅನುಕರಣೆ ನಂತರ ಮಧುಮೇಹ ರಿವರ್ಸ್‌ ಆಗಿದೆ ಎಂಬುದು ಕೆಲವರ ಅಭಿಮತ.

ದೇಹದಲ್ಲಿ ಆಮ್ಲ ವಾತಾವರಣ ಉಂಟಾದರೆ ದೇಹದೊಳಗಿನ ಜೀವಕೋಶಗಳು ಉಬ್ಬಿಕೊಳ್ಳುತ್ತವೆ. ಇದು ಕೂಡ ಮಧುಮೇಹಕ್ಕೆ ಕಾರಣವಾಗಬಹುದಾಗಿದೆ. ಅದೇ ರೀತಿ ಇನ್ಸುಲಿನ್‌ ಲೈಕ್‌ ಗ್ರೋಥ್‌ ಫ್ಯಾಕ್ಟರ್‌(ಐಜಿಎಫ್), ದೇಹದಲ್ಲಿನ ಕೊಬ್ಬು, ಲಘು ಪೋಷಕಾಂಶಗಳ ಕೊರತೆ, ಲಸಿಕೆ, ಮಾನಸಿಕ ಒತ್ತಡ ಕಾರಣಗಳಿಂದ ಮಧುಮೇಹ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಮಾತ್ರೆ-ಇನ್ಸುಲಿನ್‌ ಅಲ್ಲದೆ ಅನೇಕ ಕ್ರಮಗಳು ಇವೆ. ಅದರಲ್ಲಿ ಸಸ್ಯಜನ್ಯ ಆಧಾರಿತ ಪದ್ಧತಿಯೂ ಒಂದಾಗಿದೆ.

ಆ್ಯಪ್‌ ಮೂಲಕ ನಿರ್ವಹಣೆ: ಮಧುಮೇಹ ನಿಯಂತ್ರಣ ಕುರಿತಾಗಿ ಎರಡು ತಾಸಿನ ಬೇಸಿಕ್‌ ತರಬೇತಿ ಅಲ್ಲದೆ ಒಂದು ವರ್ಷದ ತರಬೇತಿಯನ್ನು ನೀಡಲಾಗುತ್ತದೆ. ಡಯಟ್, ವ್ಯಾಯಾಮ, ಮಾನಸಿಕ ಒತ್ತಡ ನಿರ್ವಹಣೆ, ವೈದ್ಯಕೀಯ ದಾಖಲೆಗಳಿಗೆ ಒತ್ತು ನೀಡಲಾಗುತ್ತದೆ. ಊಟದ ಮೊದಲು ಇನ್ಸುಲಿನ್‌ ಸೇರಿದಂತೆ ಸುಮಾರು 14 ಮಾದರಿ ಪರೀಕ್ಷೆ ಮಾಡಿಸಲಾಗುತ್ತದೆ. ಆರಂಭದ ನಾಲ್ಕು ತಿಂಗಳು ನಾಲ್ಕು ಬಾರಿ ಬರಬೇಕಾಗುತ್ತದೆ. ಸಕ್ಕರೆ ಪ್ರಮಾಣವನ್ನು ನಿತ್ಯವೂ ನಾಲ್ಕು ಬಾರಿ ಮನೆಯಲ್ಲಿ ಪರೀಕ್ಷೆ ಮಾಡಿಕೊಂಡು ಇದಕ್ಕಾಗಿ ಆರಂಭಿಸಿರುವ ಆ್ಯಪ್‌ನಲ್ಲಿ ಹಾಕಬೇಕಾಗುತ್ತದೆ. ಇದರ ಆಧಾರದಲ್ಲಿ ವೈದ್ಯರು ಮಾತ್ರೆ-ಇನ್ಸುಲಿನ್‌ ಪ್ರಮಾಣ ಕಡಿಮೆಗೊಳಿಸುವ ಮಾಹಿತಿ ನೀಡುತ್ತಾರೆ. ವಾಟ್ಸ್‌ಆ್ಯಪ್‌ ಮೂಲಕವೂ ಮಾಹಿತಿ, ಸಲಹೆ ನೀಡಲಾಗುತ್ತದೆ. ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ತರಬೇತಿಗೆ ಆಗಮಿಸಬೇಕಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬಂದ ನಂತರ ತರಕಾರಿ ರಸ ಸೇವನೆಯೊಂದಿಗೆ ಒಂದು ದಿನ ಉಪವಾಸ, ನಂತರ 16 ತಾಸು ಉಪವಾಸ, 24-34 ತಾಸು ಉಪವಾಸ ಮಾಡಿಸಲಾಗುತ್ತದೆ.
ಏನಿದು ಸಸ್ಯಜನ್ಯ ಥೆರಪಿ?: ಮಧುಮೇಹದಿಂದ ಬಳಲುವವರಿಗೆ ಕೆಲವೊಂದು ಸರಳ ವ್ಯಾಯಾಮ, ಪ್ರಾಣಿಜನ್ಯ ಆಹಾರ ಸೇವನೆಯಿಂದ ಜೀವಕೋಶಗಳ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಸ್ಪಿಂಗ್‌ ಆಫ್ ಹೆಲ್ತ್ ಸಂಸ್ಥೆಯಲ್ಲಿ ತಿಳಿಸಿಕೊಡಲಾಗುತ್ತದೆ. ಜತೆಗೆ ಸಸ್ಯಜನ್ಯ ಆಹಾರ ಸೇವನೆಯಿಂದ ಆಗುವ ಪ್ರಯೋಜನ, ದೇಹಕ್ಕೆ ಲಘು ಪೋಷಕಾಂಶಗಳ ಕೊರತೆಯಿಂದ ಜೀವಕೋಶಗಳ ಮೇಲಾಗುವ ಪರಿಣಾಮಗಳ ಕುರಿತಾಗಿ ಮನವರಿಕೆ ಮಾಡಲಾಗುತ್ತದೆ. ಪ್ರಾಣಿಜನ್ಯ ಆಹಾರದಲ್ಲಿ ಮಾಂಸಾಹಾರ ಅಷ್ಟೇ ಅಲ್ಲ ಮೊಟ್ಟೆ, ಹಾಲಿನ ಉತ್ಪನ್ನಗಳೆಲ್ಲವೂ ಸೇರುತ್ತವೆ. ಇವುಗಳನ್ನು ಸಂಪೂರ್ಣವಾಗಿ ಬಿಡಿಸಲಾಗುತ್ತದೆ. ವಿವಿಧ ಹಸಿರು ಪಲ್ಯಗಳನ್ನು ಬಳಸಿ ತಯಾರಿಸುವ ಜ್ಯೂಸ್‌ನ್ನು ಉಪಹಾರ-ಊಟಕ್ಕಿಂತ ಮೊದಲು ಬೆಳಗ್ಗೆ ಹಾಗೂ ಸಂಜೆ ಸೇವಿಸಬೇಕಾಗಿದೆ. ಒಂದು ಲೀಟರ್‌ವರೆಗೂ ಇದನ್ನು ಸೇವಿಸಬಹುದಾಗಿದೆ. ಮುಖ್ಯವಾಗಿ ಪಾಲಕ್‌, ರಾಜಗಿರಿ, ಪುದಿನಾ, ಇನ್ನಿತರ ಪಲ್ಯ, ಸೈಂದರಲವಣ ಬಳಸಲಾಗುತ್ತದೆ. ಮೆಂತ್ಯೆ ಪಲ್ಯಯನ್ನು ಇದಕ್ಕೆ ಬಳಸುವುದಿಲ್ಲ. ಬೇಕಾದರೆ ಇದಕ್ಕೆ ಅರ್ಧದಷ್ಟು ಸೇಬು ಹಣ್ಣು ಬಳಸಬಹುದಾಗಿದೆ. ಈ ಜ್ಯೂಸ್‌ ಸೇವನೆಯಿಂದ ದೇಹದಲ್ಲಿನ ಆಮ್ಲ ವಾತಾವರಣ ನಿವಾರಣೆ ಆಗಲಿದೆಯಂತೆ. ಆಹಾರದಲ್ಲಿ ಅರ್ಧದಷ್ಟು ಕಚ್ಚಾ ಪದಾರ್ಥ ಅದು ತರಕಾರಿ, ಪಲ್ಯಗಳ ರೂಪದಲ್ಲಿ ಇರಬಹುದು, ಇನ್ನರ್ಧ ಬೇಳೆಯುಕ್ತ ಆಹಾರ ಒಳಗೊಂಡಿರಬೇಕು. ನವಣೆ ಸೇರಿದಂತೆ ಸಿರಿಧಾನ್ಯ ಬಳಸಿ ಮಾಡಿದ ಪದಾರ್ಥ ಇಲ್ಲವೆ ರೊಟ್ಟಿ, ಸಲಾಡ್‌, ಬೇಳೆಯ ಗಟ್ಟಿ ಸಾರು ಸೇವನೆ ಮಾಡಬಹುದಾಗಿದೆ.
6 ಸಾವಿರ ಜನರಿಗೆ ಪರಿಣಾಮ: ಪುಣೆಯ ಫ್ರೀಡಂ ಫಾರ್‌ ಡಯಾಬಿಟಿಕ್‌ ಕೇಂದ್ರದಡಿ ತರಬೇತಿ ಪಡೆದ ಸುಮಾರು 6,000ಕ್ಕೂ ಅಧಿಕ ಜನರು ಯಾವುದೇ ಮಾತ್ರೆ, ಇನ್ಸುಲಿನ್‌ ಇಲ್ಲದೆ ಮಧುಮೇಹ ನಿಯಂತ್ರಣದೊಂದಿಗೆ ಜೀವಿಸುತ್ತಿದ್ದಾರಂತೆ. ಅದೇ ರೀತಿ ಕಳೆದ ಒಂದೂವರೆ ವರ್ಷದಲ್ಲಿ ಹುಬ್ಬಳ್ಳಿಯಲ್ಲಿ ತರಬೇತಿ ಪಡೆದ ಸುಮಾರು 25ಕ್ಕೂ ಹೆಚ್ಚು ಜನರು ಯಾವುದೇ ಮಾತ್ರೆ, ಇನ್ಸುಲಿನ್‌ ಇಲ್ಲದೆ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಪುಣೆಯಲ್ಲಿನ ತರಬೇತಿಗೆ ಒಂದು ವಾರ ಅಲ್ಲಿಯೇ ಉಳಿಯಬೇಕು. ಹುಬ್ಬಳ್ಳಿಯಲ್ಲಿನ ತರಬೇತಿ ಪ್ರತಿ ಗುರುವಾರ ಹಾಗೂ ರವಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯುತ್ತದೆ. ಎರಡು ತಾಸಿನಲ್ಲಿ ಬೇಸಿಕ್‌ ಮಾಹಿತಿ ನೀಡಲಾಗುತ್ತದೆ. ತರಬೇತಿಯಲ್ಲಿ ಹೇಳುವ ಜೀವನಶೈಲಿ, ಆಹಾರಕ್ರಮ ಹಾಗೂ ವ್ಯಾಯಾಮಗಳನ್ನು ಮನೆಗಳಲ್ಲಿ ಮುಂದುವರಿಸಬಹುದಾಗಿದೆ.

ಪುಣೆಯ ಫ್ರೀಡಂ ಫಾರ್‌ ಡಯಾಬಿಟಿಕ್‌ ಕೇಂದ್ರದಿಂದ ತರಬೇತಿ ಪಡೆದು ಹುಬ್ಬಳ್ಳಿಯಲ್ಲಿ ಒಂದೂವರೆ ವರ್ಷದಿಂದ ತರಬೇತಿ ನೀಡುತ್ತಿದ್ದೇನೆ. ಮಧುಮೇಹಕ್ಕೆ ಕಾರಣವಾಗುವ ಅಂಶಗಳನ್ನು ಮನದಟ್ಟು ಮಾಡಿ, ಸಸ್ಯಜನ್ಯ ಆಹಾರ ಹಾಗೂ ವ್ಯಾಯಾಮದಿಂದ ಹೇಗೆ ಮಧುಮೇಹ ನಿಯಂತ್ರಣ ಸಾಧ್ಯ ಎಂಬ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಅನೇಕರು ಮಾತ್ರೆ-ಇನ್ಸುಲಿನ್‌ ಇಲ್ಲದೆ ಮಧುಮೇಹ ನಿಯಂತ್ರಣದೊಂದಿಗೆ ಜೀವಿಸುತ್ತಿದ್ದಾರೆ.• ವೀರನಾರಾಯಣ ಕುಲಕರ್ಣಿ,ಸ್ಪಿಂಗ್‌ ಆಫ್ ಹೆಲ್ತ್ ಸಂಸ್ಥಾಪಕ

(ಮಾಹಿತಿಗೆ ಮೊ: 98455 88781)

Advertisement

 

 

•ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next