Advertisement

ಹಳೇ ಪೈಪಿನಿಂದ ತರಕಾರಿ ಚಪ್ಪರ

08:40 PM Sep 10, 2018 | |

ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಮುಕ್ಕಾಗದೆ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು.

Advertisement

ತೊಂಡೆ, ಹೀರೆ, ಮುಳ್ಳುಸೌತೆ, ಪಡುವಲ ಮೊದಲಾದ ತರಕಾರಿಗಳ ಬಳ್ಳಿ, ನೆಲದಲ್ಲಿ ಹರಡಿದರೆ ಒಳ್ಳೆಯ ಗುಣಮಟ್ಟದ ಕಾಯಿಗಳು ಸಿಗುವುದಿಲ್ಲ, ಎಲೆ, ಕಾಯಿಗಳೆಲ್ಲವೂ ಮುದುಡುತ್ತವೆ. ಬಳ್ಳಿ ಸಲೀಸಾಗಿ ಹರಡಿದರೆ ಮಾತ್ರ ಗುಣಮಟ್ಟದ ಕಾಯಿ ಸಿಗುತ್ತದೆ. ಹೀಗೆ ಹರಡಲು ಅನುಕೂಲವಾದ ಚಪ್ಪರವೊಂದು ಬೇಕೇ ಬೇಕು ಅಲ್ಲವೇ? ಇಲ್ಲಿದೆ ಅದಕ್ಕೆ ಐಡಿಯಾ.  ಹಿಂದಿನ ಕಾಲದಲ್ಲಿ ಇಂತಹ ಚಪ್ಪರ ನಿರ್ಮಿಸಲು ಕಷ್ಟವಿರಲಿಲ್ಲ. ಕಾಡಿಗೆ ಹೋಗಿ ಕಂಬ, ಗೂಟಗಳನ್ನು ಕಡಿದು ತಂದು ಗಟ್ಟಿಯಾದ ಚಪ್ಪರಗಳನ್ನು ಹಾಕಬಹುದಿತ್ತು. ರಬ್ಬರ್‌ ಕೃಷಿ ವಿಸ್ತರಿಸಿದ ಬಳಿಕ ಕಾಡುಗಳು ಮಾಯವಾಗಿವೆ.  ಚಪ್ಪರ ಹಾಕಲು ಬೇಕಾದ ಸಲಕರಣೆಗಳು ಸಿಗುವುದಿಲ್ಲವೆಂಬುದು ತರಕಾರಿ ಬೆಳೆಗಾರರ ಪಾಲಿಗೆ ತಲೆನೋವಾಗಿದೆ. 

    ಇಂಥ ಸಮಸ್ಯೆಗಳಿಗೆ ಬಹು ಸುಲಭವಾಗಿ ಉತ್ತರ ಹುಡುಕಿದ್ದಾರೆ ವೆಂಕಟರಮಣ ಎಡಪಡಿತ್ತಾಯರು. ಶಾಲಾ ಶಿಕ್ಷಕರಾಗಿ ಕೆಲವು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ, ಮಂಗಳೂರು ತಾಲೂಕಿನ ಮೂಡು ಕೊಣಾಜೆಯಲ್ಲಿ ಕೃಷಿ ಜಾಗ ಖರೀದಿಸಿ ಅಡಿಕೆ, ತೆಂಗುಗಳ ಜೊತೆಗೆ ವೈವಿಧ್ಯಮಯವಾದ ತರಕಾರಿಗಳನ್ನೂ ಅವರು ಬೆಳೆಯುತ್ತಿದ್ದಾರೆ. ಬೇಸಗೆಯಲ್ಲಿ ಬೇರೆ, ಮಳೆಗಾಲದಲ್ಲಿ ಬೇರೆ ಬಗೆಯ ತರಕಾರಿಗಳ ಕೃಷಿ ಮಾಡಿ ಮನೆಗೆ ಬೇಕಾದಷ್ಟು ತಾಜಾ ಕಾಯಿಪಲ್ಲೆ ಪಡೆಯುತ್ತಿದ್ದಾರೆ.

    ಹೀಗೆ ಬೆಳೆಯುವ ತರಕಾರಿ ಬಳ್ಳಿಗಳಿಗೆ ಚಪ್ಪರ ಹಾಕಲು ಎಡಪಡಿತ್ತಾಯರಿಗೆ ಸನಿಹದಲ್ಲಿ ಕಾಡು ಇಲ್ಲ. ಕಂಬಗಳನ್ನು ಕಡಿದು ತಂದು ಕೆಲಸ ಮಾಡಲು ಶಕ್ತಿಯೂ ಇಲ್ಲ. ಅದಕ್ಕಾಗಿ ಅವರು ಸುಲಭವಾದ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಅದು ನಿರರ್ಥಕವೆಂದು ಮೂಲೆಗೆಸೆದ ಪಿಸಿ ಪೈಪುಗಳಿಂದ ಸರಳವಾಗಿ ನಿರ್ಮಿಸುವ ಚಪ್ಪರ. ತುಂಡಾದ ಪೈಪುಗಳು, ಜೋಡಣೆಗಳು, “ಟಿ’ಗಳು ಇದನ್ನೆಲ್ಲ ಬಳಸಿ ಸಿದ್ಧವಾಗುವ ಚಪ್ಪರವದು. ಕಂಬದ ಬದಲಿಗೆ ಸ್ವಲ್ಪ ದಪ್ಪವಿರುವ ಪೈಪುಗಳನ್ನು ನಾಲ್ಕು ಮೂಲೆಗಳಲ್ಲಿ ಹೂಳುತ್ತಾರೆ. ಜೋಡಣೆಗಳನ್ನು ಉಪಯೋಗಿಸಿ ಮೇಲ್ಭಾಗದ ತೋಳುಗಳನ್ನು ಬೆಸೆದಿದ್ದಾರೆ. ಒಂದಿಂಚಿನ ತುಂಡು ಪೈಪುಗಳನ್ನು ಮೇಲೆ ಹರಡಿ ಇದರ ಮೇಲೆ ತೊಂಡೆ, ಹೀರೆ ಮೊದಲಾದ ತರಕಾರಿಗಳ ಬಳ್ಳಿಗಳನ್ನು ಹಬ್ಬಲು ಬಿಡುತ್ತಾರೆ.

    ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಮುಕ್ಕಾಗದೆ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು. ತರಕಾರಿ ಬೆಳೆಗಾರರ ಪಾಲಿಗೆ ಖರ್ಚಿಲ್ಲದ ಚಪ್ಪರ ಪೇಟೆಯಲ್ಲಿ ಹಿತ್ತಿಲಿನಲ್ಲಿ ತರಕಾರಿ ಬೆಳೆಯುವವರಿಗೂ ಅನುಕೂಲವಾಗಬಹುದು.

Advertisement

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next