ಕುಂದಾಪುರ: ಅಕ್ಟೋಬರ್, ನವೆಂಬರ್‌ನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಿಂದ ಕರಾವಳಿಗೆ ನಿರೀಕ್ಷಿತ ಮಟ್ಟದಲ್ಲಿ ತರಕಾರಿ ಪೂರೈಕೆಯಾಗದಿರುವ ಕಾರಣ ತರಕಾರಿ ದರ ಮತ್ತೆ ಹೆಚ್ಚಳವಾಗಿದೆ. ಟೊಮೇಟೊ ಹೊರತುಪಡಿಸಿ, ಉಳಿದೆಲ್ಲ ತರಕಾರಿ ಬೆಲೆ ಏರಿಕೆಯಾಗಿದೆ.
ಟೊಮೇಟೊ ಕೆ.ಜಿ.ಗೆ 80 ರೂ. ಇದ್ದುದು ಈಗ 50 ರೂ.ಗೆ ಇಳಿದಿದೆ. ನಾಸಿಕ್‌ನಿಂದ ಯಥೇಚ್ಛವಾಗಿ ಟೊಮೇಟೊ ಪೂರೈಕೆಯಾಗು ತ್ತಿರುವುದರಿಂದ ಬೆಲೆ ಇಳಿಕೆಯಾಗುತ್ತಿದೆ. 70 – 80 ರೂ. ಇದ್ದ ಬೀನ್ಸ್ 90-100 ರೂ., 40-50 ರೂ. ಇದ್ದ ಸೌತೆಕಾಯಿ 70 -80 ರೂ., 60-70 ರೂ. ಇದ್ದ ಅಲಸಂಡೆ 90-100 ರೂ.ಗೆ ಏರಿಕೆಯಾಗಿದೆ. 30- 40 ರೂ. ಇದ್ದ ಹೂಕೋಸು 70 ರೂ., 60-70 ರೂ. ಇದ್ದ ತೊಂಡೆಕಾಯಿ 100 ರೂ., 35-40 ರೂ. ಇದ್ದ ಈರುಳ್ಳಿ 50-60 ರೂ., 40 ರೂ. ಇದ್ದ ಹಸಿಮೆಣಸಿಗೆ 100 ರೂ., 30-40 ರೂ. ಇದ್ದ ಬಿಟ್ರೋಟ್, ಕ್ಯಾಬೇಜ್ 70-80 ರೂ. ಆಗಿದೆ. ಮೂಲಂಗಿ 70-80 ರೂ., ಕ್ಯಾರೆಟ್ 80-100 ರೂ. ಆಸುಪಾಸಿನಲ್ಲಿದೆ. 25-30 ರೂ. ಇರುವ ಆಲೂಗಡ್ಡೆ ಮಾತ್ರ ಯಥಾಸ್ಥಿತಿಯಿದೆ. 140-150 ರೂ. ಇದ್ದ ನುಗ್ಗೆಕಾಯಿ ದರ ಭಾರೀ ಏರಿಕೆಯಾಗಿದ್ದು, 300ರ ಆಸುಪಾಸಿನಲ್ಲಿದೆ. ಊರಿನ ಗುಳ್ಳ (ಬದನೆ) 70-80 ರೂ. ದರವಿದೆ.
ಒಂದೆಡೆ ಮಳೆಯಿಂದಾಗಿ ತರಕಾರಿ ಅಭಾವ, ಮತ್ತೂಂದೆಡೆ ಹೆಚ್ಚು ಪೂಜೆ, ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳು, ಮದುವೆ, ಗೃಹಪ್ರವೇಶದಂತಹ ಶುಭ ಸಮಾರಂಭಗಳು ನಡೆಯುವ ಸಮಯ ವಾಗಿರುವುದರಿಂದ ತರಕಾರಿಗೆ ಬೇಡಿ ಕೆಯೂ ಹೆಚ್ಚಾಗಿರುವುದರಿಂದ ತರಕಾರಿ ಬೆಲೆಯಲ್ಲಿ ಏರಿಕೆ ಯಾಗುತ್ತಿದೆ.
ತಿಂಗಳ ಕಾಲ ಇಳಿಕೆ ಅಸಾಧ್ಯ? :
ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತಿತರ ಕಡೆಗಳಿಂದ ಮಂಗಳೂರು, ಉಡುಪಿ, ಕುಂದಾಪುರ ಭಾಗಗಳಿಗೆ ಪೂರೈಕೆಯಾಗುತ್ತಿದ್ದ ತರಕಾರಿ ಮಳೆಗೆ ಹಾನಿಯಾಗಿದ್ದು, ಕೆಲವೆಡೆ ಈಗಷ್ಟೇ ತರಕಾರಿ ಬೆಳೆ ಬೆಳೆಯಲಾಗಿದ್ದು, ಹಾಗಾಗಿ ಅದು ಪೂರೈಕೆಯಾಗುವವರೆಗೆ ಅಂದರೆ ಇನ್ನು ಒಂದು ತಿಂಗಳ ಕಾಲ ತರಕಾರಿ ದರ ಇಳಿಕೆಯಾಗುವುದು ಅನುಮಾನ. ಉತ್ತರ ಕರ್ನಾಟಕ ಭಾಗದಿಂದ ಹಾಗೂ ಊರಿನ ತರಕಾರಿ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗಲು ಆರಂಭವಾದರೆ ಬೆಲೆ ಇಳಿಕೆಯಾಗಬಹುದು ಎನ್ನುತ್ತಾರೆ ಕುಂದಾಪುರದ ತರಕಾರಿ ವ್ಯಾಪಾರಿ ಗಣೇಶ್.