ಕೋಲಾರ: ಹಣ್ಣು ತರಕಾರಿಗಳ ಬೆಲೆ ಒಂದು ವಾರದಿಂದ ಗಗನಕ್ಕೇರುತ್ತಿದ್ದು, ಕೊಳ್ಳುವ ಗ್ರಾಹಕರ ಕೈಕಚ್ಚುವಂತಾಗಿದ್ದರೆ, ಸಮಸ್ಯೆಗಳ ನಡುವೆಯೂ ಧೈರ್ಯ ಮಾಡಿ ಹಣ್ಣು ತರಕಾರಿ ಬೆಳೆದ ರೈತರ ಕೈಗೆ ಅಲ್ವಸ್ವಲ್ಪ ಹಣ ಸೇರುವಂತಾಗಿದೆ.
ರೋಗ ಬಾಧೆ, ಧಾರಣೆ ಕುಸಿತದ ಭೀತಿಯಿಂದಾಗಿ ಬಹಳಷ್ಟು ರೈತರು ಹಣ್ಣು ತರಕಾರಿ ಬೆಳೆಯುವುದಕ್ಕೆ ಹಿಂದೇಟು ಹಾಕಿದ್ದ ಪರಿಣಾಮ ಉತ್ಪಾದನೆ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ಧಾರಣೆ ದುಪ್ಪಟ್ಟು,, ತ್ರಿಪಟ್ಟು ಹೆಚ್ಚುವಂತಾಗಿದೆ.
ತರಕಾರಿ ಬೇಸಾಯಕ್ಕೆ ಹಿಂದೇಟು: ಇತ್ತೀಚಿಗೆ ಹೆಚ್ಚುತ್ತಿರುವ ಉಷ್ಣಾಂಶ, ಅಕಾಲಿಕ ಮಳೆಯ ಕಾರಣ ಕೈಗೆ ಬರಬೇಕಾಗಿದ್ದ ಉತ್ಪನ್ನಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಉತ್ಪಾದನೆಯಲ್ಲಿ ಕುಂಠಿತವಾಗಿದೆ. ತರಕಾರಿ, ಹಣ್ಣುಗಳ ಪೂರೈಕೆ ಕಡಿಮೆಯಾದ ಕಾರಣ ಬೇಡಿಕೆ ಜತೆ ಬೆಲೆ ಕೂಡ ಬಾರಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಸಾಮಾನ್ಯವಾಗಿ ಕೊಂಚ ಮಳೆ ಬಂದರೂ ಅದನ್ನು ಸದುಪಯೋಗಿಸಿಕೊಂಡು ನೀರಿಗೆ ತಕ್ಕಂತೆ ಬೇಸಾಯ ಮಾಡುವುದರಲ್ಲಿ ಕೋಲಾರ ಜಿಲ್ಲೆಯ ರೈತರು ಹೆಸರುವಾಸಿ. ಆದರೆ, ಕಳೆದ ಐದಾರು ತಿಂಗಳುಗ ಳಿಂದಲೂ ಟೊಮೆಟೋ ಸೇರಿದಂತೆ ಬೆಳೆದ ಯಾವುದೇ ಬೆಳೆಗೆ ಸೂಕ್ತ ಧಾರಣೆ ಸಿಗುತ್ತಿಲ್ಲ. ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಬೇಸಾಯ ಮಾಡಲು ಮುಂದಾ ದರೆ ಕ್ರಿಮಿ ಕೀಟ, ವೈರಸ್‌ಗಳ ಕಾಟ, ಬೆಳೆದ ಬೆಳೆಯೂ ಉತ್ತಮ ಗುಣಮಟ್ಟದಲ್ಲಿ ಸಿಗುತ್ತಿಲ್ಲ. ಇವೆಲ್ಲಾ ಕಾರಣಗಳಿಂದಾಗಿ ರೈತಾಪಿ ವರ್ಗ ಹಣ್ಣು ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಇದರ ನೇರ ಪರಿಣಾಮ ಉತ್ಪಾದನೆಯ ಮೇಲೆ ಬೀಳುವಂತಾಗಿದೆ.
ಶೇ.50 ಉತ್ಪಾದನೆ ಕುಸಿತ: ಕೋಲಾರ ಜಿಲ್ಲೆಯಲ್ಲಿ ಒಂದು ಅಂದಾಜಿನ ಪ್ರಕಾರ ಶೇ.60 ರಿಂದ 70 ರಷ್ಟು ರೈತರು ಇತ್ತೀಚಿನ ತಿಂಗಳುಗಳಲ್ಲಿ ಹಣ್ಣು ತರಕಾರಿ ಬೆಳೆಯುವುದರಿಂದ ತಟಸ್ಥರಾಗಿದ್ದಾರೆ. ಇದರ ಪರಿಣಾಮ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ನಿತ್ಯವೂ 600 ರಿಂದ 700 ಲಾರಿ ಲೋಡ್‌ಗಳಷ್ಟು ಟೊಮೆಟೋ ಆವಕವಾಗುತ್ತಿದ್ದುದು ಇದೀಗ ಹತ್ತಿಪ್ಪತ್ತು ಸಂಖ್ಯೆಯ ಲೋಡ್‌ಗಳಿಗೆ ಇಳಿದಿದೆ. ಕೋಲಾರ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಜಿಲ್ಲೆ ತಾಲೂಕುಗಳಲ್ಲಿಯೂ ಇತ್ತೀಚಿಗೆ ಉತ್ತಮವಾಗಿ ಹಣ್ಣು ತರಕಾರಿ ಬೆಳೆದು ಅವುಗಳನ್ನು ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದರು. ಆದರೆ, ಆಂಧ್ರಪ್ರದೇಶದಲ್ಲಿ ಉಷ್ಣಾಂಶ ವಿಪರೀತವಾಗಿ ಹೆಚ್ಚಾಗಿದ್ದರ ಪರಿಣಾಮ ಇಳುವರಿಯ ಮೇಲೆ ಹೊಡೆತ ಬಿದ್ದಿದೆ. ಒಟ್ಟಾರೆ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿರುವ ಹಣ್ಣು ತರಕಾರಿಗಳ ಪ್ರಮಾಣದಲ್ಲಿ ಶೇ.50 ರಷ್ಟು ಕಡಿತಗೊಂಡಿದೆಯೆಂದು ಮಾರುಕಟ್ಟೆ ಮೂಲಗಳು ಹೇಳುತ್ತಿವೆ.
ಗಗನಕ್ಕೇರುತ್ತಿರುವ ಧಾರಣೆ: ಕಳೆದ 15 ದಿನಗಳಿಂದ ತರಕಾರಿ, ಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ತರಕಾರಿ ಖರೀದಿಗೆ ಮಾರುಕಟ್ಟೆಗೆ ಹೋಗುವ ಗ್ರಾಹಕರು ಜೇಬಿನ ತುಂಬಾ ಹಣ ತೆಗೆದುಕೊಂಡು ಹೋಗುವಂತಾಗಿದೆ. ಹಣ್ಣುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ತಿನ್ನಲು ಹಿಂದೆ ಮುಂದೆ ನೋಡುವಂತಾಗಿದೆ. ಕೆಜಿಗೆ 80 ರೂಪಾಯಿಗಳಿದ್ದ ಬೀನ್ಸ್ ದರ ಈಗ 120 ರಿಂದ 200 ರೂಪಾಯಿವರೆವಿಗೂ ತಲುಪಿದೆ. 40 ರೂ ಕ್ಯಾರೆಟ್ ಈಗ 80 ರೂ, 30 ರೂಪಾಯಿ ಟೊಮೊಟೋ 60 ರೂ., 50 ರೂ. ಇದ್ದ ಮೆಣಸಿನ ಕಾಯಿ 80 ರೂಪಾಯಿಗೆ ತಲುಪಿದೆ. ಎಲೆಕೋಸು ಕೆ.ಜಿ. 35-40 ರುಪಾಯಿ, ಹೂ ಕೋಸು 35-40 ರುಪಾಯಿ, ಸಿಹಿ ಕುಂಬಳ 40 ರುಪಾಯಿ, ಟೊಮಾಟೊ 50 ರಿಂದ 60 ರುಪಾಯಿ, ಹೀರೇಕಾಯಿ 50-60 ರುಪಾಯಿ, ಪಡವಲಕಾಯಿ 40-50 ರುಪಾಯಿ, ಆಲೂಗಡ್ಡೆ 35-40 ರುಪಾಯಿ, ಬೀಟ್‌ರೂಟ್ 50-55 ರೂಪಾಯಿ, ನವಿಲು ಕೋಸು 45-50 ರುಪಾಯಿ, ನುಗ್ಗೆಕಾಯಿ 120-130 ರುಪಾಯಿ, ಕ್ಯಾರೆಟ್ 70-80 ರೂಪಾಯಿ, ಹಸಿರು ಮೆಣಸಿನ ಕಾಯಿ 65-70 ರೂ, ಬೆಂಡೆಕಾಯಿ 40-45 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
ಹಣ್ಣು ದುಬಾರಿ: ಹಣ್ಣಿನ ಬೆಲೆಗಳು ಕೂಡ ದುಬಾರಿಯಾಗಿವೆ. ಸಪೋಟಾ 90 ರೂ., ಪಪ್ಪಾಯ 60 ರೂ., ಮೋಸಂಬಿ 60 ರೂ., ದ್ರಾಕ್ಷಿ 80 ರೂ, ಸೇಬು 220, ಅನಾನಸ್ 100 ರೂಪಾಯಿ ಪ್ರತಿ ಕೆ.ಜಿ. ಗೆ ಮಾರಾಟವಾಗುತ್ತಿದೆ. ಆಷಾದ ಮಾಸ ಬರುವುದರೊಳಗಾಗಿ ಶುಭ ಕಾರ್ಯಗಳನ್ನು ಮುಗಿಸಿಕೊಳ್ಳುವ ಧಾವಂತದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣು ಮತ್ತು ತರಕಾರಿಗಳಿಗೆ ಎಷ್ಟೇ ದುಪ್ಪಟ್ಟಿನ ದರವಾದರೂ ಜನ ಅವುಗಳನ್ನು ಖರೀದಿಸಿ ಬಳಕೆ ಮಾಡುತ್ತಿರುವುದು ದರ ಏರಿಕೆಗೆ ಮತ್ತೂಂದು ಕಾರಣವಾಗಿದೆ.
ಕೆಲವೇ ದಿನಗಳಲ್ಲಿ ಆಷಾಢ ಮಾಸ ಬರುತ್ತಿರುವುದರಿಂದ ಒಂದು ತಿಂಗಳ ಕಾಲ ಶುಭ ಕಾರ್ಯಗಳು ಇಲ್ಲವಾಗಿರುವುದರಿಂದ ಕೋಲಾರ ಜಿಲ್ಲೆಯ ಹಣ್ಣು ತರಕಾರಿಗಳ ಆವಕ ಕಡಿಮೆಯಾದರೂ ಒಂದಷ್ಟು ಬೆಲೆ ಇಳಿಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆಷಾಢ ಮಾಸದಲ್ಲಿ ನೆರೆಯ ತಮಿಳುನಾಡಿನಲ್ಲಿ ಹೆಚ್ಚು ಶುಭ ಕಾರ್ಯಗಳು ನಡೆಯುವುದರಿಂದ ಅಲ್ಲಿಂದಲೂ ಬೇಡಿಕೆ ಬಂದರೆ ಹಣ್ಣು ತರಕಾರಿ ಧಾರಣೆ ಇದೇ ಪ್ರಕಾರವಾಗಿ ಏರುತ್ತಲೇ ಇರುತ್ತದೆ ಎನ್ನಲಾಗುತ್ತಿದೆ.
ಕೋಳಿ ಮಾಂಸದ ಧಾರಣೆಯೂ ಹೆಚ್ಚಳ!: ಹಣ್ಣು ತರಕಾರಿಗಳ ಬೆಲೆ ಹೆಚ್ಚುತ್ತಲೇ ಇರುವಾಗಲೇ ಮಾಂಸ ಮಾರುಕಟ್ಟೆಯ ಧಾರಣೆಗಳು ಹೆಚ್ಚಾಗುತ್ತಿರುವುದು ಗ್ರಾಹಕರಿಗೆ ಒಂದೇ ಬಾರಿಗೆ ಎರಡರೇಟು ಬೀಳುವಂತಾಗಿದೆ. ಹದಿನೈದು ದಿನಗಳ ಹಿಂದೆ ಪ್ರತಿ ಕೆಜಿ 180-200 ರೂ ಮಾರಾಟವಾಗುತ್ತಿದ್ದ ಕೋಳಿ ಮಾಂಸದ ಬೆಲೆ ಈಗ 260 ರಿಂದ 280 ಕ್ಕೆ ತಲುಪಿದೆ. ಕುರಿ ಮೇಕೆ ಮಾಂಸದ ಬೆಲೆಯನ್ನು ಮಾರಾಟಗಾರರು 650 ರಿಂದ 700 ಅಥವಾ 750 ಕ್ಕೇರಿಸಿಬಿಟ್ಟಿದ್ದಾರೆ. ಕೊಂಚ ಹೇರಳ ಪ್ರಮಾಣದಲ್ಲಿ ಮೀನು ಸಿಗುತ್ತಿದ್ದು, ಮೀನು ಪ್ರಿಯರು ಕೊಂಚ ನಿರಾಳರಾಗಿದ್ದಾರೆ. ಮೀನಿನ ಧಾರಣೆ ವಿಪರೀತ ಅಲ್ಲವಾದರೂ ಹತ್ತಿಪ್ಪತ್ತು ರೂಪಾಯಿಗಳ ಹೆಚ್ಚಳ ಕಂಡು ಬಂದಿದೆ.
ರೋಗ ಬಾಧೆ, ಕ್ರಿಮಿ ಕೀಟ ಬಾಧೆಯಿಂದಾಗಿ ರೈತರು ಗುಣಮಟ್ಟದ ಬೆಳೆ ತೆಗೆಯಲು ಹೈರಾಣುತ್ತಿದ್ದಾರೆ. ಐದಾರು ತಿಂಗಳುಗಳಿಂದ ಧಾರಣೆ ಕುಸಿತವಾಗಿದ್ದರಿಂದ ರೈತರು ಹಣ್ಣು ತರಕಾರಿ ಬೆಳೆಯಿಂದ ವಿಮುಖರಾಗಿದ್ದರು. ಧೈರ್ಯದಿಂದ ಹಣ್ಣು ತರಕಾರಿ ಬೆಳೆದ ಕೆಲವೇ ಮಂದಿ ರೈತರ ಮಾಲಷ್ಟೇ ಮಾರುಕಟ್ಟೆಗೆ ಬರುತ್ತಿರುವುದರಿಂದ ಆವಕ ಕುಸಿದು ಬೆಲೆ ಹೆಚ್ಚುವಂತಾಗಿದೆ.
● ಕೆ.ಶ್ರೀನಿವಾಸಗೌಡ, ಜಿಲ್ಲಾ ಸಂಚಾಲಕ, ರೈತ ಸಂಘ, ಕೋಲಾರ.
ಎಪಿಎಂಸಿ ಮಾರುಕಟ್ಟೆಯ ಆವಕ ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಶೇ.50 ರಷ್ಟು ಕುಸಿದಿದೆ. ಸಾಮಾನ್ಯವಾಗಿ 60 ಕ್ವಿಂಟಾಲ್‌ಗಿಂತ ಹೆಚ್ಚು ಆವಕವಾಗುತ್ತಿದ್ದ ಬೀನ್ಸ್ ಈಗ ಕೇವಲ 8 ರಿಂದ 9 ಕ್ವಿಂಟಾಲ್ ಸಿಗುತ್ತಿದೆ. ಮಾರುಕಟ್ಟೆಗೆ ಆವಕವಾಗುತ್ತಿರುವ ಹಣ್ಣು ತರಕಾರಿಗಳ ಗುಣಮಟ್ಟವೂ ಸಮರ್ಪಕವಾಗಿಲ್ಲದಿರುವುದರಿಂದ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಹಣ್ಣು ತರಕಾರಿ ಬೆಲೆ ದುಪ್ಪಟ್ಟಾಗುವಂತಾಗಿದೆ.
● ವಿಜಯಲಕ್ಷ್ಮಿ, ಕಾರ್ಯದರ್ಶಿ ಎಪಿಎಂಸಿ ಮಾರುಕಟ್ಟೆ
– ಕೆ.ಎಸ್.ಗಣೇಶ್