Advertisement

ತರಕಾರಿ ಬೆಲೆ ಗಗನಕ್ಕೆ

01:15 PM May 14, 2019 | Team Udayavani |

ಶಿರಹಟ್ಟಿ: ತಾಲೂಕಿನಲ್ಲಿ ಬರಗಾಲ ಮುಂದುವರೆದಿದ್ದು, ಬಿರು ಬೇಸಿಗೆಯಿಂದ ತಾಪಮಾನ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ತರಕಾರಿ ಬೆಲೆಯೂ ಏರಿಕೆಯಾಗುತ್ತಿವೆ. ಗ್ರಾಹಕರಿಗೆ ಇದರ ಬಿಸಿ ತಟ್ಟಿದೆ.

Advertisement

ತಾಲೂಕು ಬಹುತೇಕ ಕೃಷಿ ಚಟುವಟಿಕೆಯಿಂದ ಕೂಡಿದ್ದು, ಅದರಲ್ಲೂ ಹೆಚ್ಚು ಮಳೆಯಾಶ್ರಿತವಾಗಿದೆ. ಆದರೆ ಸರಕಾರದ ಯೋಜನೆಗಳಾದ ಕೆರೆಗಳಿಗೆ ನದಿ ನೀರು ತುಂಬಿಸುವುದು ಹಾಗೂ ಏತ ನೀರಾವರಿ ಯೋಜನೆ ಅಲ್ಲದೆ ಅನೇಕ ರೈತರು ಕೊಳವೆ ಬಾವಿಗಳ ಮೂಲಕ ನೀರು ಪಡೆದು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ತಾಲೂಕು ಎಂಬ ಹೆಗ್ಗಳಿಕೆ ಪಡೆದಿರುವ ಹಳೆಯ ಶಿರಹಟ್ಟಿಯಲ್ಲಿ ಒಟ್ಟು 6850 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇನ್ನೂ ಇದರಲ್ಲಿ ಕೇವಲ 78 ಹೆಕ್ಟೇರ್‌ ಪ್ರದೇಶದಲ್ಲಿ ಹೆಚ್ಚಾಗಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಟೊಮೆಟೊ, ಬದನೆಕಾಯಿ, ಹಸಿ ಮೆಣಸಿನಕಾಯಿ, ಈರುಳ್ಳಿ ಮುಂತಾದವುಗಳು ಪ್ರಮುಖ ಬೆಳೆಗಳಾಗಿವೆ.

ಬೆಳೆಗೆ ನೀರಿನ ಸಮಸ್ಯೆ: ಸತತ ಬರಗಾಲ ಹಾಗೂ ವರುಣನ ಅವಕೃಪೆಯಿಂದ ಕೆರೆಗೆ ನೀರು ತುಂಬಿಸಬೇಕಾದ ನದಿಗಳಲ್ಲಿಯೇ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಬೇಸಿಗೆಯಲ್ಲಿ ಜನರು ಗರಿಷ್ಠ 41 ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಂಡಿದ್ದಾರೆ. ಈ ಹೆಚ್ಚಿದ ಉಷ್ಣಾಂಶ ರೈತರಿಗೆ ಆಸರೆಯಾಗಿದ್ದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯಲು ಕಾರಣವಾಗಿದೆ. ನಿತ್ಯ ನೀರು ಹಾಯಿಸಬೇಕಾದ ತರಕಾರಿ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗಿರುವುದರಿಂದ ಬೆಳೆಗಳು ಬಾಡುತ್ತಿವೆ.

ಇದರ ಪರಿಣಾಮ ಸ್ಥಳೀಯವಾಗಿ ಲಭಿಸುವ ತರಕಾರಿಗಳ ಆವಕ ಕಡಿಮೆಯಾಗುತ್ತಿದೆ ಎನ್ನುತ್ತಾರೆ ವರ್ತಕರು. ಇದರಿಂದ ಸಹಜವಾಗಿ ಬೇರೆಡೆಯಿಂದ ಆಮುದು ಮಾಡಿಕೊಳ್ಳಲಾಗುತ್ತಿದೆ. ಸಾರಿಗೆ ವೆಚ್ಚ, ಹಮಾಲಿ ವೆಚ್ಚಗಳಿಂದಾಗಿ ಕೆಲವಾರು ತರಕಾರಿಗಳ ಬೆಲೆಗಳು ಹೆಚ್ಚಾಗಿವೆ ಎಂಬುವುದು ವರ್ತಕರ ಮಾತು.

Advertisement

ಮಳೆಯಿಲ್ಲದ ಕಾರಣ ಕಳೆದ ಬಾರಿಗೆ ಹೋಲಿಸಿದರೆ ಕೊಂಚ ಬೆಲೆ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯಿಂದ ಕಾಯಿ ಪಲ್ಲೆಗಳನ್ನು ತರಲಾಗುತ್ತಿದೆ. ಸ್ಥಳೀಯವಾಗಿ ಬೆಳೆ ಕಡಿಮೆಯಾಗಿದ್ದು, ಬೇರೆಡೆಯಿಂದ ತರಿಸಲಾಗುತ್ತಿರುವ ಕಾರಣ ಇದು ನೇರವಾಗಿ ಗ್ರಾಹಕರಿಗೆ ಬಿಸಿ ತಟ್ಟುತ್ತಿದೆ.

ಪ್ರಕಾಶ ಶಿ. ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next