ದಾವಣಗೆರೆ: ಕ್ಯಾರೆಟ್ ಕೆಜಿಗೆ 100 ರೂ., ಈರುಳ್ಳಿ 70-80 ರೂ., ಬೀನ್ಸ್ 50-60 ರೂ., ಇವು ಸದ್ಯ ಮಾರುಕಟ್ಟೆಯಲ್ಲಿರುವ ತರಕಾರಿ ಬೆಲೆ. ತರಕಾರಿ ತರಲು ಮಾರುಕಟ್ಟೆಗೆ ಹೋಗುವವರು ಸಣ್ಣ ಚೀಲ ತೆಗೆದುಕೊಂಡು ಹೋಗಿ ಪರ್ಸ್ ಕಾಲಿ ಮಾಡಿಕೊಂಡು ಬರುವಂತಹ ಸ್ಥಿತಿ ಇದೆ. ಕೆಜಿ ಗಟ್ಟಲೇ ಖರೀದಿ ಮಾಡುತ್ತಿದ್ದವರು 1/4ಕೆಜಿ, 1/2 ಕೆಜಿ ಖರೀಸುತ್ತಿದ್ದಾರೆ. ಟೊಮೊಟೊ, ಬದನೆಕಾಯಿ,
ಮೆಣಸಿನಕಾಯಿ, ಆಲೂಗೆಡ್ಡೆ ಬಿಟ್ಟು ಬಹುತೇಕ ತರಕಾರಿ ಬೆಲೆ 50ರ ಗಡಿ ದಾಟಿದೆ.
ಕ್ಯಾರೆಟ್ ಬೆಲೆಯಂತೂ ಗಗನಮುಖೀಯಾಗಿದೆ. ಗುಣಮಟ್ಟದ ಕ್ಯಾರೆಟ್ ಬೆಲೆ ಕೆಜಿಗೆ 120 ರೂ. ಇದೆ. ಇನ್ನು ಈರುಳ್ಳಿ
ಬೆಲೆ ಹೇಳುವಂತಿಲ್ಲ. ಈರುಳ್ಳಿಗೆ ಈಗಿರುವ ಬೆಲೆ ಕೇಳಿದರೆ ಹಚ್ಚುವಾಗ ಕಣ್ಣಲ್ಲಿ ನೀರು ಬರುವ ಬದಲು ಕೊಳ್ಳುವಾಗಲೇ ಬರುವಂತಿದೆ. ಕೆಲ ದಿನಗಳ ಹಿಂದಷ್ಟೇ ಬೆಲೆ ಇಳಿದು, ರೈತರನ್ನು ಕಂಗಾಲು ಮಾಡಿದ್ದ ಈರುಳ್ಳಿ, ಈಗ 100 ರೂ. ಸಮೀಪ ಬಂದಿದೆ. ಉತ್ತಮ ಬೆಳೆ ಗೆಡ್ಡೆ ಚಿಲ್ಲರೆ ಮಾರುಕಟ್ಟೆಯಲ್ಲಿ 80 ರೂ.ಗೆ ಏರಿದೆ. ಕೊಳಚೆ, ಕೊಂಚ ಪದರ ಕೊಸರಿದ ಗೆಡ್ಡೆಯ ಬೆಲೆ 60-70 ರೂ.ಗೆ ಇದೆ. ಬೆಲೆ ಇಷ್ಟಿರುವುದು ಮಾತ್ರವಲ್ಲ, ಈರುಳ್ಳಿ ಖರೀದಿಸುವಾಗ ಇತರೆ ತರಕಾರಿಗಳಂತೆ ಇವನ್ನು ಆರಿಸಿಕೊಳ್ಳಲು ಅವಕಾಶ ಇಲ್ಲವಾಗಿದೆ. ವ್ಯಾಪಾರಿ ಕೊಟ್ಟ ಹಾಗೆಯೇ ಖರೀದಿಸಬೇಕಿದೆ.
ಹೂ ಕೋಸು ಬೆಲೆ ಸಹ ಏರಿದೆ. ಸಾಮಾನ್ಯವಾಗಿ ಒಂದು ಗೆಡ್ಡೆಗೆ 20-30 ರೂ. ಬಿಕರಿಯಾಗಿರುತ್ತಿದ್ದ ಹೂ ಕೋಸು ಇಂದು 50 ರೂ. ಇದೆ. ಗುಣಮಟ್ಟದ ಹೂ ಕೋಸು 70 ರೂ.ಗೆ ಒಂದರಂತೆ ಮಾರಾಟವಾಗುತ್ತಿದೆ. ಎಲೆ ಕೋಸು ಸಹ 40 ರೂ.ನಿಂದ 45 ರೂ.ವರೆಗೆ ಏರಿಕೆ ಕಂಡಿದೆ. ವರ್ಷಕ್ಕೊಮ್ಮೆ ಬರುವ ಅವರೆ, ತೊಗರಿ ಕಾಯಿ ಸುಗ್ಗಿ ಈ ಬಾರಿ ಕಹಿ ತಂದಿದೆ. ಸಾಮಾನ್ಯವಾಗಿ 20-25 ರೂ.ಗೆ ಕೆಜಿಯಂತೆ ಅವರೆ, ತೊಗರೆ ಮಾರಾಟ ಆಗುತ್ತದೆ. ಆದರೆ, ಇಂದು ಮಾರುಕಟ್ಟೆಯಲ್ಲಿ ಅವರೆ, ತೊಗರಿ ಬೆಲೆ 30-40 ರೂ.ಗೆ ಏರಿದೆ. ಇದೇ ಮಾರ್ಗದಲ್ಲಿ ದೊಡ್ಡ ಮೆಣಸಿನಕಾಯಿ ಸಹ ಇದೆ. ದೊಡ್ಡ ಮೆಣಸಿನ ಕಾಯಿ ಬೆಲೆ 40ರೂ.ಗೆ ಏರಿದೆ.
ಸಮಾಧಾನದ ವಿಷಯ ಅಂದರೆ ಸೊಪ್ಪಿನ ಬೆಲೆ ಅಷ್ಟಾಗಿ ಏರಿಕೆ ಆಗಿಲ್ಲ. ಇನ್ನು ಕರಿಬೇವು, ಕೊತ್ತಂಬರಿ ಸಹ ಕಡಮೆ ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಒಗ್ಗರಣೆಗೆ ಬಳಸುವ ಮೆಣಸಿನ ಕಾಯಿ, ಟೊಟೊಟೊ ಬೆಲೆ ಕೈಗೆಟುಕುವಂತೆ ಇರುವುದು ತುಸು ನೆಮ್ಮದಿ ಅನ್ನಿಸಿದೆ.