Advertisement
ಮಂಗಳವಾರ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿವಾಸದಲ್ಲಿ ನಡೆದ ಸಭೆ ಅನೌಪಚಾರಿಕ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಎರಡೂ ಬಣಗಳ ಕಾನೂನು ಪಂಡಿತರು ತಮ್ಮ ವಾದ ಮಂಡಿಸಲು ಎಲ್ಲ ದಾಖಲೆಗಳನ್ನು ತೆಗೆದು ಕೊಂಡು ಬಂದಿದ್ದರೂ, ವಿವರವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅನೌಪಚಾರಿಕ ಚರ್ಚೆ ನಡೆಸಿ, ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಸಭೆ ನಂತರ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಇಂದಿನ ಸಭೆ ಅತ್ಯಂತ ಸೌಹಾರ್ದ ಯುತವಾಗಿ ನಡೆದಿದೆ. ಅ.12 ರ ಅಂತಿಮ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಈಗಾಗಲೇ ಸಾಕಷ್ಟು ಮುಂದೆ ಹೋಗಿದ್ದು, ಪತ್ರಿಕೆಗಳಲ್ಲಿ ಎರಡೂ ಸಮುದಾಯ ಭಿನ್ನ ಎನ್ನುವಂತೆ ಜಾಹೀರಾತು ನೀಡಿದ್ದರಿಂದ ಅವರೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಲಿಂಗಾಯತ ಹೋರಾಟ ಸಮಿತಿ ಸದಸ್ಯರೇ ಹೊಂದಾಣಿಕೆಯ ಬಗ್ಗೆ ಆಸಕ್ತಿ ವಹಿಸುತ್ತಿರುವುದರಿಂದ ಮತ್ತೂಂದುಸುತ್ತಿನ ಮಾತುಕತೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.