Advertisement

ವೀರಶೈವ ಎಂದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗದು

12:28 PM Aug 09, 2017 | |

ಧಾರವಾಡ: ವೀರಶೈವವು ಹಿಂದೂ ಧರ್ಮದ ಒಂದು ಅಂಗವೆಂದು ಭಾವಿಸುವುದಾದರೆ, ಲಿಂಗಾಯತ ಪ್ರತ್ಯೇಕ ಧರ್ಮ ಆಗಲಾರದು ಎಂದು ಹಿರಿಯ ಸಾಹಿತಿ ಡಾ| ವೀರಣ್ಣ ರಾಜೂರ ಹೇಳಿದರು. ನಗರದ ಮುರುಘಾ ಮಠದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ಚಿಂತನ ಸಭೆಯಲ್ಲಿ ಅವರು ಮಾತನಾಡಿದರು. 

Advertisement

ಹಿಂದೂ ಎಂಬುದು ದೇಶವ್ಯಾಪ್ತಿ ಪದವಾದರೆ ನಾವೆಲ್ಲ ಹಿಂದೂಗಳೇ. ಅದೇ ಅದು ಧರ್ಮವಾದರೆ ನಾವ್ಯಾರೂ ಹಿಂದೂಗಳಲ್ಲ. ಏಕೆಂದರೆ ಹಿಂದೂ ಎಂಬುದು ಒಂದು ಧರ್ಮವಲ್ಲ. ಕನ್ನಡಿಗರು ಕಟ್ಟಿದ ಏಕೈಕ ಧರ್ಮ ಲಿಂಗಾಯತವಾಗಿದ್ದು, ಇದಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕಾದರೆ ಲಿಂಗಾಯತ ಪದ ಬಳಕೆಯೇ ಸೂಕ್ತ ಎಂದರು. 

ಲಿಂಗಾಯತಕ್ಕೂ ವೀರಶೈವಕ್ಕೂ ಸಂಬಂಧವೇ ಇಲ್ಲ. ವೀರಶೈವ ಇತಿಹಾಸವನ್ನೇ ಖ್ಯಾತ ಸಂಶೋಧಕ ಡಾ| ಎಂ.ಎಂ. ಕಲಬುರ್ಗಿ ಅವರು ತಮ್ಮ ಪುಸ್ತಕಗಳಲ್ಲಿ ಬಿಚ್ಚಿಟ್ಟಿದ್ದಾರೆ. ವೀರಶೈವ ಹಿಂದೂ ಧರ್ಮದ ಒಂದು ಭಾಗವಷ್ಟೆ. ಅದನ್ನು ಹಿಡಿದು ಸಾಗಿದರೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಎಂದಿಗೂ ಸಿಗಲಾರದು ಎಂದು ಅಭಿಪ್ರಾಯಪಟ್ಟರು. 

ಲಿಂಗಾಯತದಿಂದ ಹಾನಿಯಿಲ್ಲ: ಸಾಹಿತಿ ಡಾ| ರಂಜಾನ ದರ್ಗಾ ಮಾತನಾಡಿ, ಮೀಸಲಾತಿ ಧರ್ಮಕ್ಕಲ್ಲ, ಜಾತಿಗೆ ಸಂಬಂಧಿಸಿದೆ. ಹೀಗಾಗಿ ಲಿಂಗಾಯತಕ್ಕೆ ಧರ್ಮದ ಮಾನ್ಯತೆ ನೀಡಿದರೆ ಹಾನಿ ಇಲ್ಲ. ಲಾಭವೇ ಆಗಲಿದೆ. ಜಾತೀಯತೆ, ವರ್ಣಾಶ್ರಮ ಇಲ್ಲದ ಲಿಂಗಾಯತ ಅವೈದಿಕ ಧರ್ಮವಾಗಿದೆ.

ವೇದ ನಂಬದ ಜೈನ, ಬೌದ್ಧ ಸೇರಿದಂತೆ 6 ಧರ್ಮಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಲಭಿಸಿರುವಾಗ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಲಭಿಸುವ ನಿಟ್ಟಿನಲ್ಲಿ ಹೋರಾಟ ಆಗಬೇಕಿದೆ ಎಂದರು. ಡಾ| ಎನ್‌.ಜಿ. ಮಹಾದೇವಪ್ಪ ಮಾತನಾಡಿ, ವೇದ-ಆಗಮ ಕಲಿತವರು ಲಿಂಗಾಯತರಲ್ಲ. 

Advertisement

ವೀರಶೈವರೇ ಬೇರೆ, ಲಿಂಗಾಯತರೇ ಬೇರೆ. ವೀರಶೈವದ ಬೆನ್ನು ಹತ್ತಿದರೆ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗದು. ಹೀಗಾಗಿ ಲಿಂಗಾಯತ ಧರ್ಮದಿಂದ ವೀರಶೈವವನ್ನು ದೂರವಿಡುವುದೇ ಒಳಿತು ಎಂದು ಅಭಿಪ್ರಾಯಪಟ್ಟರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹಾಗೂ ಧಾರವಾಡ ವಕೀಲರ ಸಂಘದ ಅಧ್ಯಕ್ಷ ರಾಜು ಬೆಳ್ಳಕ್ಕಿ ಮಾತನಾಡಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಕ್ಕಾಗಿ ಹೋರಾಟ ಅವಶ್ಯ. 

ವೀರಶೈವ ಪ್ರತ್ಯೇಕ ಧರ್ಮಕ್ಕಾಗಿ ಸಲ್ಲಿಸಿದ ಪ್ರಸ್ತಾವನೆ ತಿರಸ್ಕೃತಗೊಂಡಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯ ಹೋರಾಟವೇ ಸೂಕ್ತವಾಗಿದೆ ಎಂದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಗುರುಸಿದ್ದ ಸ್ವಾಮೀಜಿ, ಮಹಾಂತ ಸ್ವಾಮೀಜಿ, ನಿಜಗುಣ ಶಿವಯೋಗಿ ಸ್ವಾಮೀಜಿ, ಲಿಂಗಾಯತ ಒಳಪಂಗಡಗಳ ಮುಖಂಡರಾದ ಎಂ.ವಿ. ಗೊಂಗಡಶೆಟ್ಟರ್‌, 

-ಈರಣ್ಣ ಹೊಸಕುಂಬಾರ, ಜಿ.ವಿ. ಕೊಂಗವಾಡ, ಗಂಗಾಧರ ಸಾದರಹಳ್ಳಿ, ಬಸವರಾಜ ಬಡಗೇರ, ಬಸಪ್ಪ ಬೈಲಗಾಣಗೇರ, ಡಾ|ಎಂ.ಎಂ. ನುಚ್ಚಿ, ರಾಜು ಮರಳಪ್ಪನವರ, ಸಿದ್ರಾಮಣ್ಣ ನಡಕಟ್ಟಿ. ಶಶಿಕಲಾ ಶಾಸ್ತ್ರಿಮಠ, ಶಾಂತಾ ಕುಸುಗಲ್‌, ನಾಗರಾಜ ಪಟ್ಟಣಶೆಟ್ಟಿ., ಶಿವಶರಣ ಕಲಬಶೆಟ್ಟರ್‌, ಶಿವಣ್ಣ ಬೆಲ್ಲದ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next