Advertisement

ಡಿ. 24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ; ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ

03:32 PM Dec 01, 2022 | Team Udayavani |

ಕಲಬುರಗಿ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ 23ನೇ ಮಹಾ ಅಧಿವೇಶನ ಡಿಸೆಂಬರ್ 24, 25 ಹಾಗೂ 26ರಂದು ದಾವಣಗೆರೆಯ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸಮಾವೇಶ ಉದ್ಘಾಟನೆಗೆ ಆಗಮಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಕೂಡಾ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿರುವ ಅಧಿವೇಶನವನ್ನು ಡಿ. 24 ರಂದು ಬೆಳಗ್ಗೆ11.30 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ಮಹಾಸಭಾ ದಾವಣಗೆರೆ ಜಿಲ್ಲಾ ಘಟಕ ಈ ಬಾರಿಯ ಅಧಿವೇಶನದ ಆತಿಥ್ಯ ವಹಿಸಿಕೊಳ್ಳುತ್ತಿದ್ದು, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲಾ ಘಟಕಗಳು ಅಧಿವೇಶನದ ಎಲ್ಲ ಕಾರ್ಯಗಳಲ್ಲಿ ಸಹಕಾರ ನೀಡುತ್ತಿವೆ. ಅಧಿವೇಶನದ ಪ್ರಯುಕ್ತ ಮೂರು ದಿನಗಳ ಕಾಲ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಲಿದ್ದು, ಕೃಷಿ, ಕೈಗಾರಿಕೆ, ವಾಣಿಜ್ಯ, ಮಹಿಳಾ ಸಮಸ್ಯೆಗಳು, ಯುವ ಸಮೂಹದ ಮುಂದಿರುವ ಸಮಸ್ಯೆ ಮತ್ತು ಸವಾಲುಗಳು, ಧಾರ್ಮಿಕ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.

ಇದೇ ಮೊದಲ ಬಾರಿಗೆ ಅಧಿವೇಶನದಲ್ಲಿ ನೌಕರರು ಹಾಗೂ ಮಾಧ್ಯಮ ಕ್ಷೇತ್ರದ ಕುರಿತು ಸಹ ಚರ್ಚೆ ನಡೆಸಲಾಗುತ್ತಿದೆ ಎಂದು ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದರು.

Advertisement

ನೋಂದಣಿಗೆ ಆಹ್ವಾನ:

ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಪ್ರತಿಯೊಬ್ಬರೂ 500 ರೂ. ಶುಲ್ಕದೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದು ವಿವರಿಸಿದರು.

ಅಧಿವೇಶನದಲ್ಲಿ ಯಾವೆಲ್ಲಾ ಅಂಶಗಳ ಕುರಿತು ಚರ್ಚಿಸಬೇಕು ಎಂಬುದರ ಕುರಿತು ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಮಹನೀಯರಿಂದ ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ. ಆಸಕ್ತರು ಡಿಸೆಂಬರ್ 15ರೊಳಗೆ ಈ ನಿಟ್ಟಿನಲ್ಲಿ ತಮ್ಮ ಸಲಹೆಗಳನ್ನು ನೀಡಬಹುದಾಗಿದೆ ಎಂದು ಮನವಿ ಮಾಡಿದರು.

ಸ್ವತಂತ್ರ ಧರ್ಮದ ವಿಚಾರವೇ ಪ್ರಧಾನ:

ಮಹಾ ಅಧಿವೇಶನದಲ್ಲಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ರಚನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದು ಈ ಬಾರಿಯ ಅಧಿವೇಶನದ ಪ್ರಮುಖ ಅಂಶವಾಗಿದೆ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.

ಸ್ವತಂತ್ರ ಧರ್ಮದ ಮಾನ್ಯತೆ ಜತೆಗೆ ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯಗಳನ್ನು ಸೇರ್ಪಡೆ ಮಾಡಬೇಕೆಂದು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಡಿಸೆಂಬರ್ 24 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 23ನೇ ಮಹಾಧಿವೇಶನದಲ್ಲಿ ಸುಮಾರು ಎರಡು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.  -ರೇಣುಕಾ ಪ್ರಸನ್ನ

ದಾವಣಗೆರೆ ನಗರದಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 23ನೇ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಬಯಸುವವರು ಖುದ್ದಾಗಿ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳನ್ನು ನೇರವಾಗಿ ಸಂಪರ್ಕಿಸಬಹುದು. ನೇರವಾಗಿ ಭೇಟಿ ನೀಡಲು ಸಾಧ್ಯವಾಗದೆ ಇದ್ದಲ್ಲಿ httt;//apply. Veerashaivamahasabha.in ಲಿಂಕ್ ಬಳಸಿ ಆನ್‌ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶರಣು ಮೋದಿ, ಉಪಾಧ್ಯಕ್ಷ ರಾಜುಗೌಡ ನಾಗನಹಳ್ಳಿ, ಮಹಾಸಭಾ ಯುವ ಘಟಕದ ಅಧ್ಯಕ್ಷ ಡಾ. ಶಂಭುಲಿಂಗ ಬಳಬಟ್ಟಿ, ಸಿದ್ದುಗೌಡ ಅಫಜಲಪುರ, ಸೋಮಶೇಖರ ಹಿರೇಮಠ, ಉದಯ ಪಾಟೀಲ್, ಭೀಮಾಶಂಕರ ಮಿಟೆಕಾರ್, ಎಂ.ಎಸ್.ಪಾಟೀಲ್ ನರಿಬೋಳ, ಮಹಾಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಮರಗೋಳ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next