Advertisement

ವೀರಶೈವ ಲಿಂಗಾಯತ ಸಮಾಜ ಹೆಮ್ಮರ

02:49 PM Apr 05, 2022 | Team Udayavani |

ಹುನಗುಂದ: ವೀರಶೈವ ಲಿಂಗಾಯತ ಧರ್ಮ ವಿವಿಧ ಜಾತಿ, ಉಪಜಾತಿಗಳಿಂದ ಕೂಡಿದ ಬೃಹತ್‌ ಹೆಮ್ಮರ. ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಆ ಹೆಮ್ಮರದ ರಂಬೆ-ಕೊಂಬೆ ಕಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.

Advertisement

ಪಟ್ಟಣದ ಗಚ್ಚಿನಮಠದಲ್ಲಿ ವೀರಮಾಹೇಶ್ವರ (ಬೇಡ ಜಂಗಮ) ಸಮಾಜ ಮತ್ತು ಗಚ್ಚಿನಮಠದ ಸದ್ಭಕ್ತರ ಸಹಯೋಗದಲ್ಲಿ ನಡೆದ ಜಗದ್ಗುರು ಶ್ರೀ ರೇಣುಕಾಚಾರ್ಯ, ಬಸವೇಶ್ವರ ಹಾಗೂ ಹಾನಗಲ್ಲ ಕುಮಾರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಾಗಿರಬೇಕು. ಇದನ್ನು ಒಡೆಯಲು ಪ್ರಯತ್ನಿಸುವರಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚು. ಬೇಡ ಜಂಗಮ ಪ್ರಮಾಣಪತ್ರ ಪಡೆಯುವ ಬೇಡಿಕೆ ಇಟ್ಟಕೊಂಡು ಹೋರಾಟ ಮಾಡುತ್ತಿರುವುದು ಅದು ನಿಮ್ಮ ಜನ್ಮ ಸಿದ್ಧ ಹಕ್ಕು. ಹೋರಾಟ ಮಾಡಿ ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ವೀರಶೈವ ಲಿಂಗಾಯತ ಸಮಾಜಕ್ಕೆ ಆದಿ ರೇಣುಕಾಚಾರ್ಯರ ಮಾರ್ಗದರ್ಶನ ಅಪಾರವಾಗಿದೆ. ವೀರಶೈವ ಧರ್ಮದ ಸಂಪ್ರದಾಯದಲ್ಲಿ ಬೆಳೆದ ನಾವುಗಳು ಇಂದು ಆ ಧರ್ಮದ ಆಚಾರ-ವಿಚಾರ ಮರೆಯುತ್ತಿದ್ದೇವೆ. ವೀರಶೈವ ಧರ್ಮದ ಅನೇಕ ಒಳಪಂಗಡಗಳ ಹಲವು ಬೇಡಿಕೆ ಸರ್ಕಾರದ ಮುಂದಿವೆ. ಜಂಗಮ ಸಮಾಜಕ್ಕೆ ಮೀಸಲಾತಿ ಬೇಕು.ನಮ್ಮ ಪಾಲಿನ ಹಕ್ಕು ಪಡೆಯಲು ಹೋರಾಟ ಅನಿವಾರ್ಯ. ತುಳಿತಕ್ಕೆ ಒಳಗಾದ ಸಮಾಜಕ್ಕೆ ನ್ಯಾಯ ಒದಗಿಸುವ ವ್ಯವಸ್ಥೆ ಸಂವಿಧಾನದಲ್ಲಿದೆ ಎಂದರು.

Advertisement

ಎಸ್‌.ಆರ್‌. ನವಲಿಹಿರೇಮಠ ಮಾತನಾಡಿ, ಜಂಗಮ ಸಮಾಜ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಜಂಗಮರ ಸ್ಥಿತಿ ಚಿಂತಾಜನಕವಾಗಿದೆ. ಶೇ.85 ಜನಾಂಗ ಆರ್ಥಿಕವಾಗಿ ಹಿಂದುಳಿದಿದೆ. ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಅತ್ಯಂತ ಕಡು ಬಡವ ಜಂಗಮ ಸಮಾಜದವರನ್ನು ಕಾಣಬಹುದು. ಪ್ರತಿಯೊಂದು ಸರ್ಕಾರ ಈ ಸಮಾಜವನ್ನು ಕಡೆಗಣಿಸಿವೆ. ಸಂವಿಧಾನದ ಜಾತಿ ಪಟ್ಟಿಯಲ್ಲಿ ಜಂಗಮ ಎನ್ನುವ ಪದ ಬಳಕೆಯಿಲ್ಲ.ಬೇಡ ಜಂಗಮ ಎಂಬುವುದು ಎಸ್‌ಸಿ ಪಟ್ಟಿಯಲ್ಲಿದೆ. ಆದರೆ ಅಧಿಕಾರಿಗಳು ಮಾತ್ರ ಬೇಡ ಜಂಗಮರು ನೀವಲ್ಲ ಅವರು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನಾಂಗ ಮಾವು ಸಾಗರು. ಅವರು ಆಂಧ್ರಪ್ರದೇಶದಲ್ಲಿ ಮಾತ್ರ ಇದ್ದಾರೆ. ಕರ್ನಾಟಕದ ಯಾವ ಜಿಲ್ಲೆಯಲ್ಲಿಯೂ ಬೇಡ ಜಂಗಮರಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಸರ್ಕಾರ ಈ ಸಮಾಜಕ್ಕೆ ಸೂಕ್ತ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.

ಐ.ವಿ. ಹಿರೇಮಠ ಮಾತನಾಡಿದರು. ಗಚ್ಚಿನಮಠದ ಅಮರೇಶ್ವರ ದೇವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬಸವೇಶ್ವರ ಬ್ಯಾಂಕಿನ ನೂತನ ನಿರ್ದೇಶಕರನ್ನು ಜಂಗಮ ಸಮಾಜದಿಂದ ಸನ್ಮಾನಿಸಲಾಯಿತು.

ಈ ವೇಳೆ ತಾಳಿಕೋಟಿ ಅನ್ನದಾನೇಶ್ವರ ಸಂಸ್ಥಾನ ಮಠದ ಜಯಸಿದ್ದೇಶ್ವರ ಶಿವಾಚಾರ್ಯರು, ಕೂಡಲಸಂಗಮದ ಸಾರಂಗಮಠದ ಜಾತವೇದ ಶಿವಾಚಾರ್ಯರು, ನಂದವಾಡಗಿಯ ಡಾ| ಚನ್ನಬಸವದೇವರು ಹಿರೇಮಠ, ವೀರಭದ್ರಯ್ಯ ಸರಗಣಾಚಾರಿ, ಪುರಸಭೆ ಸದಸ್ಯೆ ಗಿರಿಜಮ್ಮ ಮಠ, ಮಹಾಂತಯ್ಯ ಗಚ್ಚಿನಮಠ ಸೇರಿದಂತೆ ಇತರರಿದ್ದರು.

ಶಿವಶಕ್ತಿ ಘಂಟಿಮಠ ಸ್ವಾಗತಿಸಿದರು. ವಿಶ್ವರಾಧ್ಯ ಹಿರೇಮಠ ವೇದ ಪಠಣ ಮಾಡಿದರು.ವಿರೂಪಾಕ್ಷಯ್ಯ ಹಿರೇಮಠ ನಿರೂಪಿಸಿದರು. ಮಹಾಂತೇಶ ಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next