ತುಮಕೂರು: ಅಧಿಕಾರಕ್ಕಾಗಿ ಒಟ್ಟುಗೂಡಿದ್ದ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ವೀರಶೈವ, ಲಿಂಗಾಯತರು ತಮ್ಮ ಉಸಿರು ಇರುವವರೆಗೂ ಸಮಾಜವನ್ನು ಒಡೆಯಲು ಬಿಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಸಿದ್ಧಗಂಗಾ ಮಠದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಡಾ. ಶಿವಕುಮಾರ ಮಹಾಸ್ವಾಮೀಜಿಯವರಿಗೆ 111ನೇ ಗುರುವಂದನೆ ಹಾಗೂ ವೀರಶೈವ ಲಿಂಗಾಯತ ನೌಕರರ 9ನೇ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾರು ಏನೇ ನಿರ್ಣಯ ಕೈಗೊಂಡರೂ ಅದು ಊರ್ಜಿತವಾಗಲ್ಲ. ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವುದು ಒಂದು ಷಡ್ಯಂತ್ರ. ನಾವೆಲ್ಲರೂ ಅದನ್ನು ವಿಫಲಗೊಳಿಸಬೇಕಿದೆ. ವೀರಶೈವ ಲಿಂಗಾಯತ ಧರ್ಮ ಒಂದೇ ಎಂದು ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗಳು, ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಈಗಾಗಲೇ ಹೇಳಿದ್ದಾರೆ. ಆದರೂ ಸಮಾಜವನ್ನು ಒಡೆಯುವ ಕುತಂತ್ರ ನಡೆಯುತ್ತಿದೆ ಎಂದು ಹೇಳಿದರು.
ಇಂದಿನ ಸರಕಾರದಲ್ಲಿ ಲಿಂಗಾಯತ ಮತ್ತು ವೀರಶೈವ ಸಮಾಜಕ್ಕೆ ಸೇರಿದ ನೌಕರರು ಅಯಕಟ್ಟಿನ ಹುದ್ದೆಗಳಲ್ಲಿಲ್ಲ. ಅವರನ್ನು ತೀರ ನಿಕೃಷ್ಟವಾಗಿ ಈ ಸರ್ಕಾರ ಕಾಣುತ್ತಿದೆ. ಸಮಾಜದ ಐಎಎಸ್, ಐಪಿಎಸ್ ಅಧಿಕಾರಿಗಳು ಯಾವುದೋ ಮೂಲೆಯಲ್ಲಿ ಕೆಲಸ ಮಾಡುವಂತಾಗಿದೆ. ಇಂತಹ ಪರಿಸ್ಥಿತಿಯಿಂದ ನಾವೆಲ್ಲರೂ ಹೊರಬರಬೇಕಾದರೆ ನೀವೆಲ್ಲರೂ ಕೈಜೋಡಿಸಬೇಕು ಎಂದರು. ಮೇ 20ರ ನಂತರ ಬರುವ ಸರ್ಕಾರ ನಮ್ಮ ಸರ್ಕಾರ ಅಲ್ಲ. ಅದು ನಿಮ್ಮ ಸರ್ಕಾರ. ನಿಮ್ಮ ಅಪೇಕ್ಷೆಯಂತೆ ಕೆಲಸ ಮಾಡುವ ಸರ್ಕಾರವಾಗಿದೆ. ನಿಮಗೆ ವಿಧಾನ ಸೌಧ, ನನ್ನ ಮನೆ ಸದಾ ತೆರೆದಿರುತ್ತದೆ ಎಂದು ಯಡಿಯೂರಪ್ಪ ಹೇಳಿದರು.