Advertisement

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

04:08 PM Jun 16, 2024 | Team Udayavani |

ಕಲಬುರಗಿ: ವೀರಶೈವ- ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟದ ವಿಚಾರ ಮತ್ತೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿರುವ ಸಚಿವ ಈಶ್ವರ ಖಂಡ್ರೆ ಹೇಳಿದರು.‌

Advertisement

ನಗರದ ಕೋಟನೂರ ಡಿ ಕುಡಾ ಬಡಾವಣೆಯಲ್ಲಿ ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಿರ್ಮಾಣಗೊಂಡ ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.‌

ಸಮುದಾಯದ ಎಲ್ಲ ಒಳಪಂಗಡಗಳ ಒಳಗೊಂಡಂತೆ ಪ್ರತ್ಯೇಕ ಧರ್ಮದ ಬೇಡಿಕೆ ಬಹಳ ದಿನಗಳಿಂದವಿದೆ. ಆದರೆ ಹೋರಾಟ ಪ್ರಬಲಗೊಂಡ ನಂತರ ಬೇರೆ- ಬೇರೆ ಕಡೆ ವಾಲಿತು.‌ ಆದರೆ ಈಗ ಮತ್ತೆ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟದ ವಿಚಾರ ಮುನ್ನೆಲೆಗೆ ಬರುವಂತಾಗಿದೆ ಎಂದು ಖಂಡ್ರೆ ಹೇಳಿದರು.

ವೀರಶೈವ ಲಿಂಗಾಯತ ಸಮುದಾಯ ಇಂದು ಕವಲು ದಾರಿಯಲ್ಲಿದೆ.‌ ಹೀಗಾಗಿ ನಾವು ಹಿಂದೆಂದೂ ಕಂಡರಿಯದ ಒಗ್ಗಟ್ಟು ನಮ್ಮೆಲ್ಲರಲ್ಲಿ ಮೂಡಬೇಕಿದೆ.‌ ನಮ್ಮಲ್ಲಿನ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಸಮಾಜದ ಒಳಿತಿಗಾಗಿ ಒಗ್ಗಟ್ಟು ಮೂಡಿಸಲೇಬೇಕಿದೆ.‌ ವೀರಶೈವ ಲಿಂಗಾಯತ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಶಿಫಾರಸ್ಸು ಕಳುಹಿಸಲಾಗಿದೆ. ಹೀಗಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಹಾಗೂ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಹೋರಾಟವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಸಚಿವ ಈಶ್ವರ ಖಂಡ್ರೆ ಪ್ರಕಟಿಸಿದರು.

ಎಲ್ಲ ಜಿಲ್ಲೆಯಲ್ಲಿ ಹಾಸ್ಟೆಲ್; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಮಹಾಸಭಾದ ವತಿಯಿಂದ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಕಲಬುರಗಿ, ಬೆಂಗಳೂರು, ಬೆಳಗಾವಿ, ಧಾರವಾಡದಲ್ಲಿ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಯಲ್ಲಿ ಸಮಾಜದ ವಸತಿ ನಿಲಯ ಸ್ಥಾಪಿಸಲಾಗುವುದು ಎಂದು ಖಂಡ್ರೆ ಪುನರುಚ್ಚರಿಸಿದರು.

Advertisement

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಲಿ ಎಂಬುದು ಬಸವಣ್ಣನವರ ಪರಿಕಲ್ಪನೆಯಾಗಿದೆ. ಕಲಬುರಗಿ ಯಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಬಹಳ ಅವಶ್ಯಕತೆ ಇತ್ತು. ಶರಣರು ದಾಸೋಹಕ್ಕೆ ಹೆಚ್ಚು ಪ್ರಾತಿನಿದ್ಯತೆ ನೀಡಿದ್ದಾರೆ. ಹೀಗಾಗಿ ಹಾಸ್ಟೆಲ್ ದಲ್ಲಿ ವಸತಿ ನಿಲಯದಲ್ಲಿ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸುವುದು ಬಹಳ ಅವಶ್ಯಕತೆವಿದೆ ಎಂದರು.

ಸಮುದಾಯದ ವಿದ್ಯಾರ್ಥಿಗಳಿಗಾಗಿ ಸುಮಾರು 500 ವಿದ್ಯಾರ್ಥಿಗಳ ವಸತಿ ನಿಲಯ ಸಹ ಸ್ಥಾಪನೆ ಮಾಡಬೇಕಿದೆ. ಹೀಗಾಗಿ ವಸತಿ ನಿಲಯಕ್ಕಾಗಿ ಎಲ್ಲರೂ ಕೈ ಜೋಡಿಸೋಣ ಎಂದರು.‌

ಸಿಎಂ ಸಲಹೆಗಾರ ಬಿ.ಆರ್.‌ಪಾಟೀಲ್, ಹಳೇ ಮೈಸೂರ ಭಾಗದಲ್ಲಿ ಸಮಾಜದವರು ತಂದೆ- ತಾಯಿ ಹೆಸರಿನಲ್ಲಿ ದಾನ ಧರ್ಮ ಮಾಡುತ್ತಾರೆ.‌ ಅದೇ ನಿಟ್ಟಿನಲ್ಲಿ ಈ ವಸತಿ ನಿಲಯಕ್ಕೂ ಸಮಾಜದವರು ಮುಂದೆ ಬಂದು ದಾನ ನೀಡಿರುವುದು ಮಾದರಿ ಹಾಗೂ ಅರ್ಥ ಪೂರ್ಣವಾಗಿದೆ ಎಂದರು.

ಯುವಕರ ಚಟ ಬಿಡಿಸುವ ಕಾರ್ಯವಾಗಲಿ: ಇಂದು ಸಮಾಜದ ಯುವಕರು ಆತಂಕಕಾರಿ ರೀತಿಯಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮಾಜ ಹಾಗೂ ಅದರಲ್ಲೂ ಮಠಾಧೀಶರು ಮುಂದೆ ನಿಂತು ಜಾಗೃತಿ ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಬಿ. ಆರ್.‌ ಪಾಟೀಲ ಹೇಳಿದರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಒಳ ಪಂಗಡ ಹಾಗೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಕಟ್ಟಡ ಪೂರ್ಣಗೊಂಡ ಈಗ ಸುಂದರ ವಾಗಿ ಕಾಣುತ್ತದೆ. ವಸತಿ ನಿಲಯಕ್ಕಾಗಿ 3.50 ಕೋ.ರೂ ವೆಚ್ಚ ತಗುಲಿದೆ. ಒಟ್ಟಾರೆ ವಸತಿ ನಿಲಯಕ್ಕಾಗಿ 32 ದಾನಿಗಳು ಕೊಟ್ಟಿದ್ದಾರೆ. ಇದರಲ್ಲಿ 27 ಗಣ್ಯರು ಹಾಗೂ ಐದು ಬ್ಯಾಂಕ್ ತಲಾ ಐದು ಲಕ್ಷ ರೂ ನೀಡಿದ್ದು, ಮಹಾಸಭಾದಿಂದ 50 ಲಕ್ಷ ಲೋನ್ ಪಡೆಯಲಾಗಿದೆ ಎಂದರು.

ವಸತಿ ಸಿಗದೇ ಇದ್ದುದ್ದಕ್ಕೆ ಹಲವರು ಶಾಲೆ ಬಿಟ್ಟಿದ್ದ ಉದಹಾರಣೆಗಳಿವೆ.  ಕೆಟ್ಟದ್ದಾಗಲು ಒಬ್ಬರು ಸಾಕು ಆದರೆ ಒಳ್ಳೆಯದಾಗಲಿ ಎಲ್ಲರೂ ಕೈ ಜೋಡಿಸಬೇಕು. ಬದಲಾದ ಪರಿಸ್ಥಿತಿಯಲ್ಲಿ ಎಲ್ಲರ ಕಣ್ಣು ಸಮಾಜದವರ ಮೇಲಿದೆ. ಹೀಗಾಗಿ ನಾವು ಸೂಕ್ಷ್ಮ ತತೆಯಿಂದ ಹೆಜ್ಕೆ ಇಡಬೇಕಿದೆ.  ಸಮಾಜದಲ್ಲಿ ಮೇಲೆ ಬರಲು ಸಮಾಜ ಶ್ರಮಿಸುತ್ತಿದೆ. ಆದರೂ ಆರ್ಥಿಕವಾಗಿ ಹಿಂದುಳಿದವರ ನಾವೂ ಬಡವರನ್ನು ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದರು.

ಶಾಸಕರಾದ ಎಂ.ವೈ ಪಾಟೀಲ್,  ಶಶೀಲ್ ನಮೋಶಿ, ಶರಣಗೌಡ ಕಂದಕೂರು, ಮಾಜಿ ಶಾಸಕ ರಾಜಕುಮಾರ ಪಾಟೀಲ್, ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ,  ಸಮಾಜದ ಅಧ್ಯಕ್ಷ ಶರಣು ಮೋದಿ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next