Advertisement

ವೀರಶೈವ-ಲಿಂಗಾಯತ ಒಂದೇ: ಡಾ|ಸಂಗನಬಸವ ಸ್ವಾಮೀಜಿ

01:26 PM Aug 18, 2017 | |

ಹೊಸಪೇಟೆ: ವೀರಶೈವ-ಲಿಂಗಾಯತ ಆಚಾರ-ವಿಚಾರಗಳು ಒಂದೇ ಆಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸುವುದು ಸರಿಯಾದ ಕ್ರಮವಲ್ಲ ಎಂದು ಸ್ಥಳೀಯ ಶ್ರೀಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ| ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

Advertisement

ಸ್ಥಳೀಯ ಕೊಟ್ಟೂರುಸ್ವಾಮಿ ಮಠದ ಶ್ರೀಹಾನಗಲ್ಲ ಕುಮಾರೇಶ್ವರ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ 1133ನೇ ಮಾಸಿಕ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವೀರಶೈವ ಮತ್ತು ಲಿಂಗಾಯತರ ಆಚರ-ವಿಚಾರಗಳು ಒಂದೇ ಆಗಿರುವುದರಿಂದ ಅವೆರಡು ಪ್ರತ್ಯೇಕವಲ್ಲ. ಅದನ್ನು ಪ್ರತ್ಯೇಕ ಮಾಡುವ ಕೆಲಸವನ್ನು ಯಾರೂ ಮಾಡಬಾರದು ಎಂದರು.

ವೀರಶೈವ-ಲಿಂಗಾಯತ ಎಂದು ಪ್ರತ್ಯೇಕ ಮಾಡುವುದು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸುವುದು ಸರಿಯಾದ ಕ್ರಮವಲ್ಲ. ಶರಣರ ವಚನಗಳಲ್ಲಿ ಎಲ್ಲಿಯೂ ವೀರಶೈವ-ಲಿಂಗಾಯತರು ಬೇರೆ ಬೇರೆ ಎಂದು ಹೇಳಿಲ್ಲ. ಈ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತರು ಎಂದು ಪ್ರತ್ಯೇಕ 
ಧರ್ಮ ಮಾಡುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದರು. ಮಾತ್ರವಲ್ಲ, ಲಿಂಗಾಯತ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಸಲ್ಲಿಸಿದರೂ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಸರ್ಕಾರ ಪ್ರತ್ಯೇಕ ಧರ್ಮಕ್ಕೆ ಅವಕಾಶ ನೀಡುವುದಿಲ್ಲ.
ಸಂವಿಧಾನದ ಪ್ರಕಾರ ದೇಶದಲ್ಲಿ ಪ್ರತ್ಯೇಕ ಧರ್ಮಕ್ಕೆ ಅವಕಾಶವಿಲ್ಲ. ಲಿಂಗಾಯತ ಧರ್ಮ ರಚನೆಯಾದರೆ ಲಿಂಗಾಯತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತದೆ ಎಂಬುದು ಭ್ರಮೆ ಮಾತ್ರ ಎಂದರು.

ವಿಜಯನಗರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ|ಎಚ್‌.ಎಂ.ಚಂದ್ರಶೇಖರ್‌ ಶಾಸ್ತ್ರಿ, 12ನೇ ಶತಮಾನದ ಶರಣರ ನಡೆ-ನುಡಿಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಗರಗ-ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮಿಗಳು, ನಿವೃತ್ತ ವೈದ್ಯಾಧಿಕಾರಿ ಡಾ| ಜಿ.ಪೊರಪ್ಪ, ಗೌಳೇರಹಟ್ಟಿ ಮೂಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಜಿ.ಎಸ್‌.ವೀರಭದ್ರಪ್ಪ, ಅಕ್ಕನ ಬಳಗದ ಕಾರ್ಯದರ್ಶಿ ಅನ್ನಪೂರ್ಣ ಸದಾಶಿವಮೂರ್ತಿ ಇತರರಿದ್ದರು.

ಸಂಗೀತ ಶಿಕ್ಷಕ ಜಯಣ್ಣ ಅಕ್ಕಸಾಲಿ ಮತ್ತು ವೆಂಕಟೇಶ್‌ ಚಿತ್ರಗಾರ ರಿಂದ ಸಂಗೀತ ಕಾರ್ಯಕ್ರಮ ಜರುಗಿತು. ರಾಣಿ ಚೆನ್ನಮ್ಮ ಪ್ರೌಢಶಾಲೆ ಮುಖ್ಯಗುರು ಸಿ.ಎಸ್‌.ಶರಣಯ್ಯ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next