Advertisement

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

03:59 AM Jan 15, 2025 | Team Udayavani |

ಬೆಂಗಳೂರು: ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ದುಷ್ಕೃತ್ಯ ನಡೆದಿದೆ. ಈ ಬಗ್ಗೆ ಇಡೀ ವೀರಶೈವ ಲಿಂಗಾಯತ ಸಮುದಾಯ ಎಚ್ಚೆತ್ತು ಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Advertisement

ಬೆಂಗಳೂರಿನಲ್ಲಿ ನೊಳಂಬ ಲಿಂಗಾಯತ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಗುರು ಸಿದ್ಧರಾಮೇಶ್ವರರ 852ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ ನಮ್ಮ ಸಮಾಜ ಕವಲು ದಾರಿಯಲ್ಲಿ ಸಾಗುತ್ತಿರುವ ವೇಳೆ ಸಮಾಜ-ಸಮಾಜಗಳ ನಡುವೆ ವಿಷ ಬೀಜ ಬಿತ್ತುವ ಮುಖೇನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಂತ ದುಷ್ಕೃತ್ಯಗಳು ನಡೆಯುತ್ತಿವೆ.

ವೀರಶೈವ ಲಿಂಗಾಯ ಸಮುದಾಯದ ಎಲ್ಲ ಉಪ ಪಂಗಡಗಳು ಕೂಡ ಒಗ್ಗಟ್ಟಾಗಬೇಕು. ಪಕ್ಕದ ಮನೆಗೆ ಬೆಂಕಿ ಹಚ್ಚಿದರೂ ನಮ್ಮ ಮನೆಗೆ ಬೆಂಕಿ ಹಚ್ಚಿಲ್ಲ ಎಂದು ಕಣ್ಮುಚ್ಚಿ ಕುಳಿತುಕೊಂಡಿದ್ದೇವೆ. ವೀರಶೈವ ಲಿಂಗಾಯತ ಸಮಾಜಗಳು ತಮ್ಮ, ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಕೇವಲ ರಾಜಕೀಯ ಕಾರಣಕ್ಕೆ ಅಷ್ಟೇ ಅಲ್ಲ ಈ ನಾಡಿನ ಅಭಿವೃದ್ದಿ, ಏಳ್ಗೆ ದೃಷ್ಟಿಯಿಂದ ಒಗ್ಗಟ್ಟಾಗಬೇಕಾಗಿದೆ ಎಂದರು.

ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವೆ:
ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಆಡಳಿತ ಅವಧಿಯಲ್ಲಿ ಎಲ್ಲ ಸಮುದಾಯಕ್ಕೂ ಕೊಡುಗೆ ನೀಡಿದ್ದಾರೆ. ಸಮುದಾಯದ ಶ್ರೀಗಳು ಸೇರಿದಂತೆ ಶಿಕಾರಿಪುರ ಕ್ಷೇತ್ರದ ಜನತೆ ಆಶೀರ್ವಾದದಿಂದಾಗಿ ಶಾಸಕನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೇನೆ. ಏನೇ ಅಡೆತಡೆ ಬಂದರೂ ಎಲ್ಲವನ್ನೂ ಮೆಟ್ಟಿನಿಂತು ಯಡಿಯೂರಪ್ಪ ಅವರು ಯಾವ ರೀತಿಯಲ್ಲಿ ರಾಜಕಾರಣ ಮಾಡಿದರೋ ಅದೇ ರೀತಿಯಲ್ಲಿ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಸಮಾಜದ ದ್ವನಿಯಾಗಿ ಕೆಲಸ ಮಾಡುತ್ತೇನೆ. ಇಡೀ ವೀರಶೈವ ಲಿಂಗಾಯ ಸಮುದಾಯ ಹೆಮ್ಮೆಯಿಂದ ಕಾಣುವ ನಿಟ್ಟಿನಲ್ಲಿ ದುಡಿಯುತ್ತೇನೆ ಎಂದು ತಿಳಿಸಿದರು.

1 ದಿನದ ಆಚರಣೆಗೆ ಸೀಮಿತವಾಗಬಾರದು:
ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಸಾಧಕರ ಜಯಂತಿಗಳು ಒಂದು ದಿನ ಆಚರಣೆಗಳಿಗೆ ಸೀಮಿತವಾಗಬಾರದು. ಸಾಧು-ಶರಣರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳಡಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಈ ವೇಳೆ ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿ, ಗೋಡೇಕೆರೆ ಶ್ರೀ ಮೃತ್ಯುಂಜಯ ದೇಶೀ ಕೇಂದ್ರ ಶ್ರೀಗಳು, ಪರಮಪೂಜ್ಯ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಶ್ರೀಗಳು, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ನೊಳಂಬಲಿಂಗಾಯತ ಸಂಘದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್‌, ಶಾಸಕ ಗೋಪಾಲಯ್ಯ, ಜ್ಯೋತಿಗಣೇಶ್‌, ಎಸ್‌.ಆರ್‌. ವಿಶ್ವನಾಥ್‌, ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಬೆಳ್ಳಿ ಪ್ರಕಾಶ್‌, ಮಾಜಿ ಶಾಸಕ ಡಿ.ಎಸ್‌.ಸುರೇಶ್‌, ಅಖೀಲ ಭಾರತ ಖೋಖೋ ಫೆಡರೇಷನ್‌ ಉಪಾಧ್ಯಕ್ಷ ಲೋಕೇಶ್ವರ್‌, ವೀರಶೈವ ವಿಧ್ಯಾಭಿವೃದ್ದಿ ಸಂಘದ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ, ವೈ.ಎಸ್‌. ಸಿದ್ಧರಾಮೇಗೌಡ ಸೇರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next