Advertisement

ವೀರಪ್ಪನ್‌ ಸಹಚರ ಸೈಮನ್‌ ಸಾವು

12:35 PM Apr 16, 2018 | Team Udayavani |

ಬೆಂಗಳೂರು: ಕಾಡುಗಳ್ಳ ವೀರಪ್ಪನ್‌ ಸಹಚರ ಮತ್ತು ಪಾಲಾರ್‌ ಬಾಂಬ್‌ ಸ್ಫೋಟದ ಆರೋಪಿ ಸೈಮನ್‌ (60) ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Advertisement

ಜೀವಾವಧಿ ಶಿಕ್ಷೆಗೊಳಗಾಗಿ ಮೈಸೂರು ಜೈಲಿನಲ್ಲಿದ್ದ ಸೈಮನ್‌, ಕಿಡ್ನಿ ಸೇರಿದಂತೆ ಬಹು ಅಂಗಾಗ ವೈಫ‌ಲ್ಯದಿಂದ ಬಳಲುತ್ತಿದ್ದ. ಕೆಲ ದಿನಗಳಿಂದ ಆರೋಗ್ಯ ಏರುಪೇರಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿತ್ತು.

ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ಮುಕ್ತಾಯಗೊಳಿಸಿ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಾರ್ತಳ್ಳಿ ಗ್ರಾ.ಪಂ ವ್ಯಾಪ್ತಿಯ ವಡ್ಡರಹಟ್ಟಿ ನಿವಾಸಿ ಸೈಮನ್‌, 1994ರಲ್ಲಿ ಬಂಧಿತನಾಗಿ 23 ವರ್ಷ 2 ತಿಂಗಳು ಜೈಲು ವಾಸ ಅನುಭವಿಸಿದ್ದಾನೆ. ಇಲ್ಲಿನ ಪಾಲಾರ್‌ ಸೇತುವೆ ಸ್ಫೋಟದ ಪ್ರಮುಖ ರೂವಾರಿಯಾಗಿದ್ದ ಸೈಮನ್‌ ಕೃತ್ಯದಿಂದ ಐಪಿಎಸ್‌ ಅಧಿಕಾರಿ ಗೋಪಾಲಕೃಷ್ಣ, ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿ ಸೇರಿದಂತೆ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ಈ ಸಂಬಂಧ ಬಂಧನಕ್ಕೊಳಗಾಗಿದ್ದ ಸೈಮನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಮನ್‌ ಅಲ್ಲದೆ 43 ಹೆಣ್ಣು ಮಕ್ಕಳು ಸೇರಿ 176 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯ ಸೈಮನ್‌, ಜ್ಞಾನಪ್ರಕಾಶ್‌ ಮತ್ತು ಮೀಸೆಕಾರ ಮಾದಯ್ಯ, ಬೆಲವೇಂದ್ರನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಇನ್ನುಳಿದವರನ್ನು ಬಿಡುಗಡೆ ಮಾಡಿತ್ತು.

Advertisement

ಇದನ್ನು ಪ್ರಶ್ನಿಸಿ ಸರ್ಕಾರ ಇನ್ನಷ್ಟು ಕಠಿಣ ಶಿಕ್ಷೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಇದೊಂದು ಗಂಭೀರ ಪ್ರಕರಣ. ವೀರಪ್ಪನ್‌ ಎಂಬ ಕುಖ್ಯಾತ ವ್ಯಕ್ತಿಯಿಂದ 26 ಮಂದಿ ಸಾವಿಗೆ ಕಾರಣ ಆಗಿದ್ದಾನೆ ಎಂದು ಈ ನಾಲ್ವರಿಗೆ ಗಲ್ಲು ಶಿಕ್ಷೆಗೆ ಅರ್ಹರೆಂದು ತೀರ್ಪು ನೀಡಿತ್ತು. ಆದರೆ, ಗಲ್ಲು ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠ, ಗಲ್ಲು ಶಿಕ್ಷೆಯನ್ನು ಮತ್ತೆ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತ್ತು.

ಆರಂಭದಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿದ್ದ ಸೈಮನ್‌ನನ್ನು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠದ ಆದೇಶದಂತೆ ಗಲ್ಲು ಶಿಕ್ಷೆ ರದ್ದಾಗಿದ್ದರಿಂದ ಮೈಸೂರು ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. 2014ರಿಂದಲೂ ಮೈಸೂರು ಜೈಲಿನಲ್ಲಿದ್ದ ಸೈಮನ್‌ಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲೆಂದೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆತರಲಾಗಿತ್ತು.

26 ಮಂದಿಯ ಬಲಿ ಪಡೆದಿದ್ದ!: ಒಂದೂವರೆ ದಶಕಗಳ ಹಿಂದೆ ಚಾಮರಾಜನಗರ ಹಾಗೂ ತಮಿಳುನಾಡಿನ ಸತ್ಯಮಂಗಲ ಕಾಡಿನಲ್ಲಿ ಕಾಡುಗಳ್ಳ ವೀರಪ್ಪನ್‌ ಅಟ್ಟಹಾಸ ಹೆಚ್ಚಾಗಿತ್ತು. ಆಗ ಅಂದಿನ ಸೇಲಂ ಜಿಲ್ಲೆಯ ಎಸ್ಪಿ ಗೋಪಾಲಕೃಷ್ಣ ಮತ್ತು ವೀರಪ್ಪನ್‌ ನಡುವೆ ಜಟಾಪಟಿಯೇ ನಡೆದಿತ್ತು. ಅಲ್ಲದೆ, ದೂರವಾಣಿ ಮೂಲಕ ಏಕವಚನದಲ್ಲಿಯೇ ಪರಸ್ಪರ ಹತ್ಯೆಗೈಯುವ ಮಟ್ಟಿಗೆ ಪಣ ತೊಟ್ಟಿದ್ದರು.

ಇದರಿಂದ ಕೆರಳಿದ ವೀರಪ್ಪನ್‌ ಹಾಗೂ ಸಹಚರ ಸೈಮನ್‌ 1993ರಲ್ಲಿ ಎಸ್ಪಿ ಗೋಪಾಲಕೃಷ್ಣ ಹಾಗೂ ಇತರೆ ಅಧಿಕಾರಿಗಳು ಚಲಿಸುತ್ತಿದ್ದ ವಾಹನ ಪಾಲಾರ್‌ ಸೇತುವೆ ಬಳಿ ಬರುತ್ತಿದ್ದಂತೆ ಬಾಂಬ್‌ ಸ್ಫೋಟಿಸಿ, ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲಕೃಷ್ಣ ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದರು. ಇವರೊಂದಿಗೆ ಒಟ್ಟು 26 ಮಂದಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next