ಶಹಾಪುರ: ಹೃದಯಾಘಾತದಿಂದ ವಿಧಿವಶರಾದ ತಾಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠದ ಪೀಠಾಧಿಪತಿಯಾಗಿದ್ದ ಶ್ರೀ ವೀರಮಹಾಂತ ಶಿವಾಚಾರ್ಯರರ ಅಂತ್ಯ ಸಂಸ್ಕಾರವು ಅಪಾರ ಭಕ್ತರ ಶೋಕಸಾಗರದ ನಡುವೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಂಜೆ ಗೋಧೂಳಿ ಸಮಯದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಶ್ರೀಮಠದ ಆವರಣದಲ್ಲಿ ಗುರುವಾರ ಜರುಗಿತು.
ದೋರನಹಳ್ಳಿ ಶ್ರೀಮಠದ ಹೊರವಲಯದಲ್ಲಿರುವ ಮಹಾಂತೇಶ್ವರ ಗುಡ್ಡದ ದೇವಸ್ಥಾನದ ಆವರಣದಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ದರ್ಶನಕ್ಕೆ ವಿವಿಧ ಮಠಾಧೀಶರು ಸೇರಿದಂತೆ ನಗರ, ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಗಳ ದರ್ಶನ ಪಡೆದರು.
ಸಂಜೆ 4 ಗಂಟೆ ಸುಮಾರಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಅಲಂಕರಿಸಿದ್ದ ವಾಹನದ ಮೇಲಿಟ್ಟು ಮೆರವಣಿಗೆ ಮೂಲಕ ಗ್ರಾಮದ ಶ್ರೀಮಠಕ್ಕೆ ತರಲಾಯಿತು. ಗೋಧೂಳಿ ಸಮಯದಲ್ಲಿ ಅಂತಿಮ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನದಂತೆ ಶ್ರೀಮಠದ ಸಂಪ್ರದಾಯದಂತೆ ನೆರವೇರಿಸಲಾಯಿತು.
ಇದನ್ನೂ ಓದಿ: ನಿಲ್ಲದ ಚಿರತೆ ಕಾಟ…;ಕಂಗಾಲಾದ ಕೊರಟಗೆರೆ ತಾಲೂಕಿನ ಜನತೆ