ಹುಮನಾಬಾದ: ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಭಕ್ತರ ಝೇಂಕಾರ, ಸಾಂಸ್ಕೃತಿಕ ಕಲಾ ತಂಡಗಳ ಮೆರಗಿನಲ್ಲಿ ಸಾವಿರಾರು ಭಕ್ತರ ಮಧ್ಯೆ ವೀರಭದ್ರಸ್ವಾಮಿಯ ಅದ್ಧೂರಿ ರಥೋತ್ಸವ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳ, ನೇರೆ ರಾಜ್ಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಂದ ಜಾತ್ರೆಗೆ ಬಂದಿದ್ದ ಭಕ್ತರು ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡು ಕೃತಾರ್ಥ ಭಾವ ಮೆರೆದರು.
ರಥೋತ್ಸವ ನಿಮಿತ್ತ ಮಂಗಳವಾರ ರಾತ್ರಿ 8:30ಗಂಟೆಗೆ ದೇವಸ್ಥಾನದಿಂದ ಹೊರಟ ವೀರಭದ್ರ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ 10:30ಕ್ಕೆ ತೇರು ಮೈದಾನಕ್ಕೆ ತಲುಪಿತ್ತು. ಒಂದು ಕಿ.ಮೀ. ಉದ್ದದ ವರೆಗೆ ಭಕ್ತರು ದೂರದಲ್ಲಿ ನಿಂತು ವೀರಭದ್ರಸ್ವಾಮಿಯ ದರ್ಶನ ಪಡೆದರು.
ಇತಿಹಾಸ ಮರು ಸೃಷ್ಟಿ: ಕಳೆದ ನಾಲ್ಕು ದಶಕಗಳ ಹಿಂದೆ ವೀರಭದ್ರೇಶ್ವರ ರಥೋತ್ಸವ ಜನವರಿ 26ರಂದು ನಡೆಯುತ್ತಿತ್ತು. ಭಕ್ತ ಸಂಖ್ಯೆ ಹೆಚ್ಚಾದಂತೆ ವಿಳಂಬ ಆಗಲು ಆರಂಭಿಸಿತ್ತು. ಕೆಲ ವರ್ಷಗಳ ಇತಿಹಾಸ ನೋಡಿದರೆ ಜ.26ರಂದು 8ಗಂಟೆಗೆ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಉತ್ಸವ ಒಂದು ಕಿ.ಮೀ. ಕ್ರಮಿಸಲು 13 ಗಂಟೆ ಸಮಯ ತೆಗೆದುಕೊಂಡಿತ್ತು. ಆ.27ರಂದು ಮಧ್ಯಾಹ್ನ ಅದ್ಧೂರಿ ರಥೋತ್ಸವ ನಡೆಯುತ್ತಿತ್ತು. ಆದರೆ, ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ದೇವರಿಗೆ ಶಾಲು ಹೊದಿಸುವ ಕಾರ್ಯಕ್ಕೆ ನಿಷೇಧ ಹಾಕಿದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ತೆರಳಿದ ದೇವರ ಮೆರವಣಿಗೆ ನೇರವಾಗಿ ತೇರು ಮೈದಾನಕ್ಕೆ ಆಗಮಿಸಿತ್ತು. ಒಂದು ಗಂಟೆಗಳ ಕಾಲ ತೇರು ಎಳೆಯುವ ಕಾರ್ಯಕ್ರಮ ಜರುಗಿತು.
ಪಟ್ಟಣದ ಹಿರೇಮಠ ಸಂಸ್ಥಾನದ ರೇಣುಕ ವೀರ ಗಂಗಾಧರ ಸ್ವಾಮಿಗಳನ್ನು ರಥದಲ್ಲಿ ಕೂರಿಸಿ, ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಜಿಪಂ ಮಾಜಿ ಸದಸ್ಯ ವೀರಣ್ಣಾ ಪಾಟೀಲ, ತಹಶೀಲ್ದಾರ್ ನಾಗಯ್ನಾ ಹಿರೇಮಠ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ, ಬಸವರಾಜ ಆರ್ಯ, ಮಹಾಂತಯ್ನಾ ತೀರ್ಥಾ ಸೇರಿದಂತೆ ಇತರೆ ಗಣ್ಯರು ರಥ ಎಳೆಯುಲು ಚಾಲನೆ ನೀಡಿದರು.
ನಂತರ ಭಕ್ತ ಮಂಡಳಿ ರಥವನ್ನು ಬಸವಣ್ಣ ಕಟ್ಟೆಯ ವೆರೆಗೆ ಎಳೆದರು. ನಂತರ ರಥದಲ್ಲಿದ್ದ ಗಂಗಾಧರ ಶಿವಾಚಾರ್ಯರು ಬಾಳೆ ಹಣ್ಣು, ದುಡ್ಡು, ಖಾರಿಕಗಳು ಭಕ್ತರ ಕಡೆಗೆ ಎಸೆದು ಆಶೀರ್ವದಿಸಿದರು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಘಟಿಸದಂತೆ ಡಿವೈಎಸ್‌ಪಿ ಶೀವಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ್, ಪಿಎಸ್‌ಐ ರವಿಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.