Advertisement

ವೀಣಾವಾದಿನಿಯ ತ್ರಿದಿನ ಸಂಗೀತೋತ್ಸವ

06:00 AM Mar 16, 2018 | Team Udayavani |

ಕಾಸರಗೋಡು ಸಮೀಪದ ಬಳ್ಳಪದವಿನಲ್ಲಿ 1999ರಲ್ಲಿ ಸ್ಥಾಪನೆಯಾದ “ವೀಣಾವಾದಿನಿ’ ಸಂಗೀತ ವಿದ್ಯಾಪೀಠವು ಫೆ. 16, 17 ಹಾಗೂ 18ರಂದು ವಾರ್ಷಿಕ ಸಂಗೀತೋತ್ಸವವನ್ನು ಆಚರಿಸಿಕೊಂಡಿತು. ಸಂಗೀತ ಕಲಿಯುವ ವಿದ್ಯಾರ್ಥಿಗಳೊಂದಿಗೆ, ಸುತ್ತಮುತ್ತಲಿನ ಸಂಗೀತ ಪ್ರೇಮಿ ಸಭಿಕರನ್ನೂ ಸಿದ್ಧಗೊಳಿಸುತ್ತ 18 ವರ್ಷಗಳ ಕಲಾ ಪಯಣದಲ್ಲಿ “ವೀಣಾವಾದಿನಿ’ಯು ಸಾಂಸ್ಕೃತಿಕವಾಗಿ ಕರ್ನಾಟಕ ಮತ್ತು ಕೇರಳವನ್ನು ಬೆಸೆಯುತ್ತಿದೆ. 

Advertisement

ಆರಂಭದ ಹಂತದಲ್ಲಿ ತಿರುವನಂತಪುರದ ಮಹಾರಾಜರ ಕುಲದವರಾದ ಸಂಗೀತ ಕಲಾವಿದ ಅಶ್ವತೀ ತಿರುನಾಳ್‌ ರಾಮವರ್ಮ ಅವರು ಯೋಗೀಶ ಶರ್ಮ ಅವರೊಂದಿಗೆ ಈ ಸಂಸ್ಥೆಯ ನಿರ್ಮಾಣಕ್ಕಾಗಿ ದುಡಿದರು. ಅನಂತರ ತಿರುವನಂತಪುರದ ಸ್ವಾತಿ ತಿರುನಾಳ್‌ ಸಂಗೀತ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಪ್ರೊ| ಕೆ. ವೆಂಕಟರಮಣ ಮತ್ತು ಬಳ್ಳಪದವು ರಾಧಾಕೃಷ್ಣ ಭಟ್‌ ಮೊದಲಾದವರ ಮಾರ್ಗದರ್ಶನದಲ್ಲಿ ಬಳ್ಳಪದವು ಯೋಗೀಶ ಶರ್ಮ ಸಂಸ್ಥೆಯನ್ನು ಬೆಳೆಸತೊಡಗಿದರು. ಕಳೆದ ಐದಾರು ವರ್ಷಗಳಿಂದ ವಾರ್ಷಿಕೋತ್ಸವದ ರೂಪದಲ್ಲಿ ಭಿನ್ನವಾಗಿ ದೊಡ್ಡಮಟ್ಟದಲ್ಲಿ ಸಂಗೀತೋತ್ಸವವನ್ನು ನಡೆಸಲಾಗುತ್ತಿದೆ. 

ಫೆ. 16 ರಂದು ವೈದ್ಯರಾದ ಡಾ| ಯು.ಬಿ.ಕುಣಿಕುಳ್ಳಾಯ, ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್‌ ನಂಬೂದಿರಿ ಮತ್ತು ವೈಕಮ್‌ ಪ್ರಸಾದ್‌ ಮೊದಲಾದವರ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿತು. ಅನಂತರ ಪ್ರೊ| ಕೆ. ವೆಂಕಟರಮಣ ಮತ್ತು ವೀಣಾವಾದಿನಿ ವಿದ್ಯಾರ್ಥಿಗಳ ತಂಡದಿಂದ ನವಗ್ರಹ ಕೃತಿಗಳ ಪ್ರಸ್ತುತಿ ಏರ್ಪಟ್ಟಿತು. ಮುಲ್ಲಪಳ್ಳಿ ಕೃಷ್ಣನ್‌ ನಂಬೂದಿರಿ ಅವರ ನೇತೃತ್ವದಲ್ಲಿ ಮಹಾಶ್ರೀಚಕ್ರ ನವಾವರಣ ಪೂಜೆ ನಡೆಯುತ್ತಿದ್ದಂತೆ ವೀಣಾವಾದಿನಿಯ ವಿದ್ಯಾರ್ಥಿಗಳಿಂದ ನವಾವರಣ ಕೃತಿಗಳ ಗಾಯನ ನಡೆಯಿತು.ಮಹಾಶ್ರೀಚಕ್ರ ಪೂಜೆ ಕರಾವಳಿ ಭಾಗದಲ್ಲಿ ನಡೆಯುವುದು ತೀರ ಅಪೂರ್ವ. ಸುಮಾರು 140 ಚದರ ಅಡಿ ಪ್ರದೇಶದಲ್ಲಿ ಒಂದು ದಿನ ಪೂರ್ತಿ ಮಂಡಲ ಬಿಡಿಸಿ ಹೂಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ ಆರಂಭಗೊಂಡ ಪೂಜೆ ನವಾವರಣ ಕೃತಿಗಳು ಪ್ರಸ್ತುತಗೊಳ್ಳುತ್ತಿರುವಂತೆ ರಾತ್ರಿ ಸಂಪನ್ನಗೊಂಡಿತು. “ನಾರಾಯಣೀಯಮ…’ನಲ್ಲಿ ಕಳೆದ ಐದು ವರ್ಷಗಳಿಂದ ಉತ್ಸವ ಸಂದರ್ಭದಲ್ಲಿ ಮಹಾ ಶ್ರೀಚಕ್ರ ಪೂಜೆ ನಡೆಯುತ್ತಿದೆ. ಸತತವಾಗಿ ಒಂಬತ್ತು ವರ್ಷಗಳ ಕಾಲ ನಡೆಸುವುದು ಅತ್ಯಂತ ಪುಣ್ಯಪ್ರದ ಕಾರ್ಯವೆಂದು ಹೇಳಲಾಗಿದ್ದು, ಒಂಬತ್ತು ವರ್ಷಗಳ ಕಾಲ ನಡೆಸಬೇಕೆಂಬ ಸಂಕಲ್ಪವನ್ನು ಯೋಗೀಶ ಶರ್ಮ ಹೊಂದಿದ್ದಾರೆ.

ಎರಡನೆಯ ದಿನ “ಮುರಳೀರವಮ…’ ಎಂಬ ಹೆಸರಿನಲ್ಲಿ ಬಾಲಮುರಳಿಕೃಷ್ಣ ರಚಿಸಿದ 72 ಮೇಳಕರ್ತ ರಾಗಗಳ ಕೀರ್ತನೆಗಳನ್ನು “ವೀಣಾವಾದಿನಿ’ಯ ವಿದ್ಯಾರ್ಥಿಗಳು ಪೂರ್ವಾಹ್ನ ಮತ್ತು ಅಪರಾಹ್ನ ಎರಡು ಹಂತಗಳಲ್ಲಿ ತಲಾ ನಾಲ್ಕು ಗಂಟೆಗಳ ಕಾಲ ಪ್ರಸ್ತುತಪಡಿಸಿದರು. ದಿನವಿಡೀ ಜರಗಿದ ಇದೊಂದು ಹೊಸ ಅನುಭವ ನೀಡಿತು. ಇಂತಹ ಸಾಹಸವೊಂದು ಇದೇ ಮೊದಲ ಬಾರಿಗೆ ನಡೆಯಿತೆಂದು ಹೇಳಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಗುರುಗಳಾದ ಯೋಗೀಶ ಶರ್ಮ ಅವರು ವಿದ್ಯಾರ್ಥಿಗಳನ್ನು ಕಳೆದ ಎಂಟು ತಿಂಗಳಿನಿಂದ ತರಬೇತುಗೊಳಿಸುತ್ತ ಬಂದಿದ್ದರು. ಸಂಜೆ ಕೊನೆಯ ಹತ್ತು ಮೇಳಕರ್ತ ರಾಗಗಳ ಕೀರ್ತನೆಗಳು ಪ್ರಸ್ತುತಗೊಳ್ಳುತ್ತಿರುವಂತೆ ವರ್ಣಚಿತ್ರ ಕಲಾವಿದೆಯೂ ಆಗಿರುವ ಭರತನಾಟ್ಯಪಟು ಲೀಜಾ ದಿನೂಪ್‌ ಅವರು ಭರತನಾಟ್ಯ ಮಾಡುತ್ತಲೇ ಬಾಲಮುರಳಿಕೃಷ್ಣ ಅವರ ವರ್ಣಚಿತ್ರವನ್ನು ಬಿಡಿಸಿದ್ದು ವಿಶೇಷವಾಗಿತ್ತು. ಇದೊಂದು ಅಪೂರ್ವ ಅನುಭವವಾಗಿ ಪ್ರೇಕ್ಷಕರ ಮನದಲ್ಲಿ ನೆಲೆ ನಿಂತಿತು. ಅದೇ ದಿನ ರಾತ್ರಿ ಬಾಲಮುರಳಿಯವರ ಸಂಸ್ಮರಣ ಕಾರ್ಯಕ್ರಮದಲ್ಲಿ ಉಣ್ಣಿಕೃಷ್ಣನ್‌ ಮಾಂಜೂರ್‌ ಅತಿಥಿಗಳಾಗಿ ಭಾಗವಹಿಸಿದರು.

ಕೊನೆಯ ದಿನ ಪ್ರೊ| ಕೆ. ವೆಂಕಟರಮಣ ಅವರೊಂದಿಗೆ ವೀಣಾವಾದಿನಿಯ ವಿದ್ಯಾರ್ಥಿಗಳು ಭಾಗವಹಿಸಿ ಪಂಚರತ್ನ ಕೀರ್ತನೆಗಳನ್ನು ಹಾಡಿದರು. ಬಳಿಕ ವೀಣಾವಾದಿನಿಯ ಬಳ್ಳಪದವು, ಪೆರ್ಲ, ಮಂಗಳೂರು ಹಾಗೂ ಮಧೂರಿನ ವಿದ್ಯಾರ್ಥಿಗಳಿಂದ “ನಾದೋಪಾಸನೆ’ ಎಂಬ ಹೆಸರಿನಲ್ಲಿ ಕಛೇರಿಗಳು ಜರಗಿದವು. ಸಂಜೆ ಜರಗಿದ ಸಭಾ ಕಾರ್ಯಕ್ರಮದಲ್ಲಿ ಸಂಗೀತಜ್ಞ ಡಾ| ಶಂಕರರಾಜ್‌ ಆಲಂಪಾಡಿ ಅವರಿಗೆ “ವೀಣಾವಾದಿನಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ವೀಣಾವಾದಿನಿಯ ಮೊದಲ ವಿದ್ವತ್‌ ಪದವಿ ಪಡೆದ ವಿದುಷಿ ಸ್ವರ್ಣಗೌರಿ ಪೆರ್ಲ ಅವರನ್ನು ಮತ್ತು ಬಾಲಮುರಳಿಯವರ 72 ಮೇಳಕರ್ತ ಕೃತಿಗಳಿಗೆ ಸ್ವರಪ್ರಸ್ತಾರ ಹಾಕಿದ ವಿದ್ಯಾರ್ಥಿನಿ ಡಾ| ಮಾಧವಿ ಭಟ್‌ ಅವರನ್ನು ಪುರಸ್ಕರಿಸಲಾಯಿತು. ಅತಿಥಿಗಳಾಗಿ ಕವಿ, ಸಾಹಿತಿ ಡಾ| ವಸಂತಕುಮಾರ ಪೆರ್ಲ, ಪ್ರೊ| ಕೆ. ವೆಂಕಟರಮಣ ಮತ್ತು ಬಳ್ಳಪದವು ರಾಧಾಕೃಷ್ಣ ಭಟ್‌ ಭಾಗವಹಿಸಿದ್ದರು.

Advertisement

ಕೊನೆಯಲ್ಲಿ ಚೆನ್ನೈಯ ವಿಷ್ಣುದೇವ ನಂಬೂದಿರಿ ಅವರ ಸಂಗೀತ ಕಛೇರಿ ನಡೆಯಿತು. ಅವರಿಗೆ ಪಕ್ಕವಾದ್ಯದಲ್ಲಿ ಸಂಪತ್‌ ಎನ್‌. ತಿರುವನಂತಪುರ (ಪಿಟೀಲು), ಬಾಲಕೃಷ್ಣ ಕಾಮತ್‌, ಎರ್ನಾಕುಲಮ್‌ (ಮೃದಂಗ) ಮತ್ತು ಉಣ್ಣಿಕೃಷ್ಣನ್‌ ಮಾಂಜೂರ್‌ (ಘಟ) ಸಹಕಾರ ನೀಡಿದರು. ಮೂರು ದಿನ ಜರಗಿದ ಬೇರೆ ಬೇರೆ ಕಛೇರಿಗಳಿಗೆ ರಂಜಿತ್‌ ಮಾಂಜೂರ್‌, ಪ್ರಭಾಕರ ಕುಂಜಾರು, ಜಗದೀಶ ಕೊರೆಕ್ಕಾನ, ಪ್ರಸಾದ್‌ ವೈಕಮ…, ಉಣ್ಣಿಕೃಷ್ಣನ್‌ ಕಲ್ಲೇಕುಲಂಗರ ಮತ್ತು ಶ್ರೀಧರ ಭಟ್‌ ಬಡಕ್ಕೇಕೆರೆ ಪಕ್ಕವಾದ್ಯ ಸಹಕಾರ ನೀಡಿದರು. ವಿದುಷಿ ಅರ್ಥಾ ಪೆರ್ಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕೆ. ಶೈಲಾಕುಮಾರಿ

Advertisement

Udayavani is now on Telegram. Click here to join our channel and stay updated with the latest news.

Next