Advertisement
ಸಂತೆಕಟ್ಟೆ ನೇಜಾರಿನವರಾದ ವೇದಾವತಿ ಆಚಾರ್ಯ ಜೀವನ ನಿರ್ವಹಣೆಗಾಗಿ ಅವರು ತಮ್ಮ 55 ನೇ ವರ್ಷದ ಬಳಿಕ ಬಡಗಿ ಕೆಲಸ ಶುರುಮಾಡಿದ್ದು ನೆಮ್ಮದಿ ಕಂಡುಕೊಂಡಿದ್ದಾರೆ. 5ನೇ ತರಗತಿ ಓದುತ್ತಿರುವಾಗಲೇ ಸಹೋದರ ಕೃಷ್ಣಯ್ಯ ಆಚಾರ್ಯರಿಂದ ತಕ್ಕಮಟ್ಟಿಗೆ ಬಡಗಿ ಕೆಲಸ ಕಲಿತದ್ದು ಅವರ ಕೈ ಹಿಡಿದಿದೆ. ಊರುಗೋಲಾದ ಕೆಲಸ
ವೇದಾವತಿ 3 ವರ್ಷವಿದ್ದಾಗ ತಂದೆ ಸೋಮಯ್ಯ ಅವರನ್ನು ಕಳೆದುಕೊಂಡಿದ್ದರು. ಕಬ್ಬಿಣ ಕೆಲಸ ಮಾಡುವ ಉಪೇಂದ್ರ ಆಚಾರ್ಯರನ್ನು ವಿವಾಹವಾದ ಬಳಿಕ ಸಂಸಾರ ನಡೆಯುತ್ತಿತ್ತು. ಆದರೆ 10 ವರ್ಷಗಳ ಹಿಂದೆ ಪತಿಗೆ ಆರೋಗ್ಯ ಕೈಕೊಟ್ಟಿದ್ದು, ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಗ ಎದುರಾದ ಆರ್ಥಿಕ ಸಮಸ್ಯೆ ನಿಭಾಯಿಸಲು, ಮಗಳ ಶಿಕ್ಷಣಕ್ಕಾಗಿ ಬಡಗಿ ಕೆಲಸವನ್ನು ಮತ್ತೆ ಆರಂಭಿಸಿದ್ದರು. ಆದರೆ ದುರದೃಷ್ಟವಶಾತ್ ಕಳೆದ ವರ್ಷ ಪುತ್ರಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದು, ಬಡಗಿ ಕೆಲಸವನ್ನೇ ಮಾಡುತ್ತಿದ್ದಾರೆ.
ಸುಂದರ ಪೀಠೊಪಕರಣಗಳು
ವೇದಾವತಿ ಅವರ ಕೈಯಿಂದ ಕುರ್ಚಿ, ದೇವರ ಸ್ಟಾಂಡ್, ಕಾಯಿ ತುರಿಯುವ ಮಣೆ, ಕತ್ತಿಯ ಮಣೆ, ಒರಗುವ ಕುರ್ಚಿ, ಅನ್ನ ಬಾಗುವ ಚಟ್ಟಿ ಇತ್ಯಾದಿ ಸುಂದರವಾಗಿ ರೂಪಪಡೆಯುತ್ತದೆ. ಸಣ್ಣ ಮರದ ತುಂಡುಗಳನ್ನು ತುಂಡುಮಾಡಲು ವಿದ್ಯುತ್ ಕಟ್ಟಿಂಗ್ ಮಷೀನ್, ರಂಧ್ರ ಕೊರೆಯಲು ಡ್ರಿಲ್ ಮಷೀನ್ ಬಳಸುತ್ತಾರೆ. ಉಳಿದಂತೆ ಎಲ್ಲ ಕೆಲಸ ಉಳಿ, ಸುತ್ತಿಗೆಯಲ್ಲಿ ಮಾಡುತ್ತಾರೆ. ಪೀಠೊಪಕರಣಗಳಿಗೆ ಸುಂದರ ಡಿಸೈನ್ ಕೂಡ ಮಾಡುತ್ತಾರೆ.
ವೇದಾವತಿಯವರು ಸಹೋದರಿಯ ಮೂವರೂ ಪುತ್ರರನ್ನು ಅವರು ದುಡಿವವರೆಗೆ ಸಾಕಿ ಸಲಹಿದ್ದಾರೆ. ಆರೋಗ್ಯ ಸಮಸ್ಯೆ ಕಾಡಿದಾಗ ಸಹೋದರಿಯ ಪುತ್ರರೇ ವೇದಾವತಿ ಅವರಿಗೆ ಸಹಾಯ ಮಾಡುತ್ತಾರೆ.
ಸರಕಾರಕ್ಕೆ ಕೈಚಾಚಲಿಲ್ಲ!
ವೃದ್ಧಾಪ್ಯ ವೇತನ, ವಿಧವಾ ವೇತನಕ್ಕೆ ವೇದಾವತಿ ಅರ್ಹರಾಗಿದ್ದರೂ ಅವರು ಯಾವುದೇ ವೇತನಗಳಿಗೆ ಅರ್ಜಿ ಸಲ್ಲಿಸದೇ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಹೆಚ್ಚಿಗೆ ಹಣ ನೀಡುವ ಗ್ರಾಹಕರು
ಅಂಬಾಗಿಲಿನ ಮಿಲ್‌ನಿಂದ ಮರ ತಂದು ತಯಾರಿಸಿದ ಪೀಠೊಪಕರಣಗಳನ್ನು ವೇದಾವತಿ ರಥಬೀದಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಮನೆಗೆ ಬಂದು ಖರೀದಿಸುವ ಸ್ಥಳೀಯರೂ ಇದ್ದಾರೆ. ಮನೆಗೆ ಬರುವ ಗ್ರಾಹಕರು ಅವರೊಂದಿಗೆ ಚರ್ಚೆ ಮಾಡದೆ ಸ್ವಲ್ಪಮಟ್ಟಿಗೆ ಹೆಚ್ಚಿನ ಮೊತ್ತವನ್ನೇ ಕೊಟ್ಟು ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ.
Related Articles
ಬಡಗಿ ಕೆಲಸವು ನನ್ನ ಜೀವನ ನಿರ್ವಹಣೆಯೊಂದಿಗೆ ಹಿಂದಿನ ಸಾಲ ತೀರಿಸಲು ನೆರವಾಗುತ್ತಿದೆ. ನಿರಂತರ ಕೆಲಸದಿಂದ ಮನಸ್ಸಿನ ವೇದನೆ ಮರೆಯಾಗುತ್ತದೆ. ಮಹಿಳಾ ಒಕ್ಕೂಟ ನನ್ನನ್ನು “ಪುರುಷರಂತೆಯೇ ಬಡಗಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುವ ಮಹಿಳೆ’ ಎಂದು ಗುರುತಿಸಿ ಸಮ್ಮಾನಿಸಿದೆ. ಶಕ್ತಿ ಇರುವಲ್ಲಿವರೆಗೆ ಈ ಕೆಲಸ ಮುಂದುವರಿಸುತ್ತೇನೆ.
– ವೇದಾವತಿ ಆಚಾರ್ಯ
Advertisement
– ಎಸ್.ಜಿ. ನಾಯ್ಕ