ಮಹಾನಗರ: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಅವರು ಸೋಮವಾರ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರ ಜತೆ ಪಾದಯಾತ್ರೆಯಲ್ಲಿ ಸಾಗಿ ಲಾಲ್‌ಬಾಗ್‌ನ ಮನಪಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿ
ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು. ಮೆರವಣಿಗೆ ಆರಂಭದಲ್ಲಿ ಬಿಜೆಪಿ ಕಾರ್ಯಕರ್ತೆಯರು ಕಾಮತ್ ಅವರಿಗೆ ಆರತಿ ಬೆಳಗಿಸಿದರು.
ಕುದ್ರೋಳಿ ಕ್ಷೇತ್ರದಿಂದ ಆರಂಭಗೊಂಡ ಪಾದಯಾತ್ರೆಯು ಮಣ್ಣಗುಡ್ಡ, ಬಲ್ಲಾಳ್ ಬಾಗ್ ಮೂಲಕ ಲಾಲ್‌ಬಾಗ್ ಮನಪಾ ಕಚೇರಿಗೆ ಸಾಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಕಾರ್ಯ ಕರ್ತರು ಬಿಜೆಪಿಯ ಟೋಪಿ ಹಾಗೂ ಶಾಲು ಧರಿಸಿ ಗಮನ ಸೆಳೆದರು. ಜತೆಗೆ ಕಾರ್ಯಕರ್ತರು ಬಿಜೆಪಿ ಪಕ್ಷ, ಪ್ರಧಾನಿ ಮೋದಿ, ಕಾಮತ್ ಅವರಿಗೆ ಜಯಘೋಷ ಹಾಕುತ್ತಾ ಸಾಗಿದರು.
ಮೆರವಣಿಗೆಯಲ್ಲಿ ಕಾರ್ಯಕರ್ತರಿಗೆ ನಮಸ್ಕರಿಸುತ್ತಾ ಸಾಗಿ ಬಂದ ಕಾಮತ್ ಅವರು ಪಾಲಿಕೆಯ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಪ್ರವೇಶಿಸಿದರು.
ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ರುಕ್ಮಯ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಮುಖಂಡರಾದ ಕ್ಯಾ| ಬ್ರಿಜೇಶ್ ಚೌಟ, ಕಾರ್ಪೊರೇಟರ್‌ಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪರಸ್ಪರ ಜಯಘೋಷ.!
ವೇದವ್ಯಾಸ ಕಾಮತ್ ಅವರು ನಾಮಪತ್ರ ಸಲ್ಲಿಕೆಗೆ ಪಾಲಿಕೆ ಕಚೇರಿಯ ಒಳಪ್ರವೇಶಿ ಸುತ್ತಿದ್ದಂತೆ ಮೊದಿನ್ ಬಾವಾ ಅವರು ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದರು. ಈ ಸಂದರ್ಭ ಎದುರುಬದುರಾದ ಬಿಜೆಪಿ- ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷ ಹಾಗೂ ನಾಯಕರಿಗೆ ಜಯಘೋಷ ಕೂಗಿದರು. ಬಳಿಕ ಬಾವಾ ಅವರೇ ಕಾರ್ಯಕರ್ತರಲ್ಲಿ ಸುಮ್ಮನಿರುವಂತೆ ಮನವಿ ಮಾಡಿದರು.