Advertisement

ಶಾಲೆಗಳಲ್ಲಿ ಇನ್ನು ವೇದ-ಮಂತ್ರ ಘೋಷ?ಗೋ ವಿಜ್ಞಾನ್‌ಗೆ ಸೂಚನೆ

11:06 AM Feb 19, 2021 | Team Udayavani |

ನವದೆಹಲಿ: ಭಾರತದ ಅತ್ಯಂತ ಪ್ರಾಚೀನ ಧರ್ಮಗ್ರಂಥಗಳಾದ ವೇದಗಳೂ ಇನ್ನು ಮಕ್ಕಳಿಗೆ ಪಠ್ಯಪುಸ್ತಕಗಳಾಗುವ ದಿನಗಳು ದೂರವಿಲ್ಲ! ಶಾಲೆಗಳಲ್ಲಿ ವೇದಿಕ್‌ ಆಧಾರಿತ ಶಿಕ್ಷಣ ಅಳವಡಿಸಲು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಿದ್ದು, ಈ ಸಂಬಂಧ ಭಾರೀ ಚರ್ಚೆಗಳೂ ನಡೆಯುತ್ತಿವೆ.

Advertisement

ಇದನ್ನೂ ಓದಿ:ತುಳು ಚಿತ್ರರಂಗ @50: ‘ಎನ್ನ ತಂಗಡಿ’ ಯಿಂದ ‘ಗಮ್ಜಾಲ್’ ವರೆಗೆ ಚಿತ್ರರಂಗ ನಡೆದು ಬಂದ ಪಯಣ

ಎಲ್ಲ ಅಂದುಕೊಡಂತೆ ನಡೆದರೆ “ವೇದಿಕ್‌ ಶಿಕ್ಷಣ ಮಂಡಳಿ’ ಭಾರತೀಯ ಶಾಲೆಗಳಿಗೆ ವೇದ ಆಧಾರಿತ ಪಠ್ಯಕ್ರಮ ಮುಂದಿಡಲಿದೆ. ಅಲ್ಲದೆ ರಾಜ್ಯ, ಸಿಬಿಎಸ್‌ಇನಂತೆಯೇ ವೇದಿಕ್‌ ಶಿಕ್ಷಣ ಬೋರ್ಡ್‌ ಕೂಡ ಅಸ್ತಿತ್ವಕ್ಕೆ ಬರಲಿದ್ದು, ಇದರ ಜಾರಿಗೆ ಅಂತಿಮ ಹಂತದ ಚರ್ಚೆಗಳು ಚಾಲ್ತಿಯಲ್ಲಿವೆ.

ಆರೆಸ್ಸೆಸ್‌ ಬೆಂಬಲ: ಉದ್ದೇಶಿತ ಮಂಡಳಿ ಸ್ಥಾಪನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ ಎಸ್‌ ಎಸ್‌) ಮುಕ್ತ ಬೆಂಬಲ ಸೂಚಿಸಿದೆ ಎಂದು “ದಿ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. ಶಿಕ್ಷಣ ಸಚಿವಾಲಯದಲ್ಲಿನ ತಜ್ಞರು ವೇದಿಕ್‌ ಶಿಕ್ಷಣ ಮಂಡಳಿ ಸ್ಥಾಪನೆ ಕುರಿತ ಸಾಧ್ಯತೆ ಬಗ್ಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಇಂಥ ಮಂಡಳಿ ಈಗಿಲ್ಲವೇ?: ಶಿಕ್ಷಣ ಸಚಿವಾಲಯ ಈಗಾ ಗಲೇ ಬಾಬಾ ರಾಮ್‌ದೇವ್‌ ನೇತೃತ್ವದ ಪತಂಜಲಿ ಗ್ರೂಪ್‌ ಸ್ಥಾಪಿಸಿರುವ ಭಾರತೀಯ ಶಿಕ್ಷಾ ಮಂಡಳಿಗೆ (ಬಿಎಸ್‌ ಬಿ) ಅನುಮೋದನೆ ನೀಡಿದೆ. ಭಾರತೀಯ ಸಂಸ್ಕೃತಿಯ ಜ್ಞಾನವ್ಯವಸ್ಥೆ ಆಧಾರಿತವಾಗಿ ಈ ಮಂಡಳಿ ನೂತನ ಪಠ್ಯ ಕ್ರಮ ರೂಪಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಲ್ಲಿ ಇದೂ ಒಂದು ಹೈಲೈಟ್‌ ಆಗಿದೆ.

Advertisement

ಮಿಶ್ರ ಪ್ರತಿಕ್ರಿಯೆ: ಸರ್ಕಾರ ಈಗಾಗಲೇ ಸಿಬಿಎಸ್‌ಇ ಮತ್ತು ಎನ್‌ಐಒಎಸ್‌ ಬೋರ್ಡ್‌ಗಳನ್ನು ನಡೆಸುತ್ತಿದೆ. ಇವುಗಳ ಪಠ್ಯಗಳಲ್ಲೂ ವೇದ ಮತ್ತು ವೇದಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಅಳವಡಿಸಲಾಗಿದೆ. ಹೀಗಿರುವಾಗ ಇದಕ್ಕೇ ಪ್ರತ್ಯೇಕವಾದ ವೇದಿಕ್‌ ಶಿಕ್ಷಣ ಮಂಡಳಿಯ ಅಗತ್ಯವಿಲ್ಲ ಎನ್ನುವುದು ಶಿಕ್ಷಣ ಸಚಿವಾಲಯದ ಕೆಲವು ಅಧಿಕಾರಿಗಳ ವಾದ.

2009ರ ಶೈಕ್ಷಣಿಕ ಹಕ್ಕುಗಳ ಕಾಯ್ದೆಯ ಸೆಕ್ಷನ್‌ 29 ಮತ್ತು 30ರ ಅನ್ವಯ ವೇದಿಕ್‌ ಪಾಠ ಶಾಲೆ ಮತ್ತು ಮದ್ರಸಾಗಳನ್ನು ಸ್ಥಾಪಿಸಲು ಅವಕಾಶವಿದೆ. ಹೀಗಿರುವಾಗ ವೇದ ಆಧಾರಿತ ಶಿಕ್ಷಣವನ್ನು ಕೇವಲ ಮಂಡಳಿಗಳಿಗೆ ಸೀಮಿತ ಮಾಡ ಬೇಕೇ? ಅಥವಾ ಗುರುಕುಲದಂಥ ಪ್ರತ್ಯೇಕ ಶಾಲೆ ಗಳನ್ನು ತೆರೆದು ಅಲ್ಲಿ ಅದನ್ನು ಕಲಿಸಬೇಕೇ?- ಎಂಬುದರ ಕುರಿತೂ ಚರ್ಚೆಗಳು ನಡೆಯುತ್ತಿವೆ.

ಗೋ ವಿಜ್ಞಾನ್‌ಗೆ ಸೂಚನೆ
ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತವಾಗಿ “ಗೋ ವಿಜ್ಞಾನ್‌’ ಪರೀಕ್ಷೆ ತೆಗೆದುಕೊಳ್ಳಲು ಸೂಚಿಸುವಂತೆ ಯುಜಿಸಿ, ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಿದೆ. “ಕಾಮಧೇನು ಗೋ ವಿಜ್ಞಾನ್‌ ಪ್ರಚಾರ್‌- ಪ್ರಸಾರ್‌ ಪರೀಕ್ಷೆ’ ಫೆ.25ರಂದು ನಡೆಯಲಿದ್ದು, ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಪ್ರೈಮರಿ, ಸೆಕೆಂಡರಿ ಮತ್ತು ಸೀನಿಯರ್‌ ಸೆಕೆಂಡರಿ ಶಾಲೆಗ ಳಲ್ಲದೇ ಕಾಲೇಜು ವಿದ್ಯಾರ್ಥಿಗಳೂ ಪರೀಕ್ಷೆ ತೆಗೆದುಕೊಳ್ಳಬಹುದು. ರಾಷ್ಟ್ರೀಯ ಕಾಮಧೇನು ಆಯೋಗ ಈ ಪರೀಕ್ಷೆ ಆಯೋಜಿಸಿದೆ.

*ಶಾಲೆಗಳಲ್ಲಿ ವೇದಿಕ್‌ ಮಂಡಳಿ ಅಳವಡಿಕೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಉತ್ಸುಕತೆ ತೋರಿದೆ.

*ಆದರೆ, ಶಾಲಾ ಶಿಕ್ಷಣ ಇಲಾಖೆ ಈ ಹೊಸ ಪರಿಕಲ್ಪನೆಗೆ ವಿರೋಧ ಸೂಚಿಸಿದೆ.

*ಶಿಕ್ಷಣ ಇಲಾಖೆಯ ಕೆಲವರು “ಕೇಂದ್ರ ಈಗಾಗಲೇ ಸಿಬಿ ಎ ಸ್‌ಇ, ಎನ್‌ಐಒಎಸ್‌ ಮಂಡಳಿಯನ್ನು ಮುನ್ನಡೆಸುತ್ತಿರುವಾಗ, ವೇದಿಕ್‌ ನಂಥ ಹೊಸ ಮಂಡಳಿ ಬೇಕಿಲ್ಲ’ ಎನ್ನುತ್ತಿದ್ದಾರೆ.

*ಉದ್ದೇಶಿತ ವೇದಿಕ್‌ ಮಂಡಳಿಗೆ ಆರೆಸ್ಸೆಸ್‌ ಸಂಪೂರ್ಣ ಬೆಂಬಲ ಸೂಚಿಸಿದೆ.

*”ಸೆಕ್ಷನ್‌ 29-30ರ ಅಡಿಯಲ್ಲಿ ಮದ್ರಸಾ ತೆರೆಯಲು ಅವ ಕಾಶವಿರುವಂತೆ, ವೇದಿಕ್‌ ಪಾಠ ಶಾಲಾ ತೆರೆದೂ ಅಲ್ಲೂ ಪಠ್ಯಕ್ರಮ ಅಳವಡಿಸಲು ಅವಕಾಶವಿದೆ’ ಎಂಬ ಚರ್ಚೆಯೂ ನಡೆದಿದೆ.

* ವೇದಿಕ್‌ ಬೋರ್ಡ್‌ ಸ್ಥಾಪನೆ ಕುರಿತು ಶೀಘ್ರವೇ ಮತ್ತೊಂದು ನಿರ್ಣಾಯಕ ಸಭೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next