Advertisement

ಗಾಡಿ ಗ್ಯಾರೇಜಿಗೆ ಬಾಡಿ ದವಾಖಾನೆಗೆ!

06:21 PM Mar 25, 2019 | Team Udayavani |

ಇನ್ನೇನು ಇವನ ಗಾಡಿ ಆಕೆಯ ಗಾಡಿಯನ್ನು ತಡೆದು ನಿಲ್ಲಿಸಬೇಕು ಅನ್ನೋಷ್ಟರಲ್ಲಿ ಎಡವಟ್ಟು ನಡೆದೇ ಹೋಯ್ತು. ಗಾಬರಿಯಲ್ಲಿ ಆತ ಪಕ್ಕದ ಚರಂಡಿಯೊಳಗೇ ಬೈಕ್‌ ನುಗ್ಗಿಸಿದ್ದ. ಆಕೆ ಇವನ ಅವಾಂತರ ನೋಡಿ ಗಾಬರಿಯಾಗಿ ಅಲ್ಲಿಂದ ಪರಾರಿಯಾದಳು.

Advertisement

ಆರಾಮಾಗಿ ಓಡಾಡಿಕೊಂಡಿದ್ದ ಕುಚಿಕು ಹೈದ ಇದ್ದಕ್ಕಿದ್ದಂತೆ ಪ್ರೀತಿ-ಪ್ರೇಮದ ಕುರಿತು ಪುರಾಣ ಹೊಡೆಯಲು ಶುರು ಮಾಡಿದ್ದ. ಪಾಪದ ಹುಡುಗ ಅಂದುಕೊಂಡಿದ್ದವನಲ್ಲಿ ಆದ ಬದಲಾವಣೆಗೆ ಕಾರಣ ಹುಡುಕಿದಾಗ, ಹುಡುಗಿಯ ವಿಷಯ ಬಯಲಾಯ್ತು. ಎಲ್ಲಿಗೆ ಹೋದರೂ ಅವಳೇ ಕಾಣುತ್ತಾಳೆ, ಕನಸಲ್ಲೂ ಅವಳದೇ ಹಾವಳಿ, ತಂಪಾದ ಹೊತ್ತಲ್ಲಿ ತಂಗಾಳಿ ಸವಿಯುತ್ತ ಕುಳಿತಾಗ ಬೆಳದಿಂಗಳಂತೆ ಬಂದ ಹುಡುಗಿ…ಅಂತೆಲ್ಲಾ ಹೇಳುತ್ತಿದ್ದ. “ಬೇಡ ಕಣೋ ಇದೆಲ್ಲಾ’ ಅಂತ ಬುದ್ಧಿ ಹೇಳಿದರೂ ಆತ ಕೇಳಿಸಿಕೊಳ್ಳಲಿಲ್ಲ. ಆಕೆಯೇ ನನ್ನ ಜೀವ-ಭಾವ ಅಂತ ಕುಳಿತುಬಿಟ್ಟ. ನಾವೊಂದಿಷ್ಟು ಪಡ್ಡೆಗಳು ಸೇರಿ, ಪ್ರಾಣಸ್ನೇಹಿತನ ಪ್ರೀತಿಯನ್ನು ಆತನ ಪ್ರಾಣಸಖೀಗೆ ತಲುಪಿಸಲೇಬೇಕು ಅಂತ ನಿರ್ಧರಿಸಿದೆವು. ಈ ಘನಂದಾರಿ ಕೆಲಸಕ್ಕೆ ಪ್ರೇಮಿಗಳ ದಿನವೇ ಸರಿ ಎಂದು ಎಲ್ಲರ ಸಮ್ಮುಖದಲ್ಲಿ ಗೊತ್ತುವಳಿ ಮಾಡಲಾಯ್ತು.

ಸೂರ್ಯ ನೆತ್ತಿಯ ಮೇಲೆ ಬಂದರೂ ಏಳದ ನಮ್ಮ ಹುಡುಗ, ಆ ದಿನ ಬೇಗ ಎದ್ದು, ಟಿಪ್‌ಟಾಪ್‌ಆಗಿ ರೆಡಿಯಾಗಿ ದೇವರಿಗೆ ಕೈ ಮುಗಿಯುತ್ತಿದ್ದುದನ್ನು ನೋಡಿ, ಹೆತ್ತವರಿಗೆ ಅಚ್ಚರಿ. ಈ ಪುಣ್ಯಾತ್ಮನಿಗೆ ಇದ್ದಕ್ಕಿದ್ದಂತೆ ಏನಾಯ್ತು, ನಿನ್ನೆವರೆಗೂ ಸರಿಯಾಗಿದ್ದನಲ್ಲ ಅಂತ! ಅನುಮಾನ ಬಂದು, “ಏನ್ರಪ್ಪಾ, ಇವನು ಯಾರಿಗಾದ್ರೂ ಪ್ರಪೋಸ್‌ ಮಾಡೋಕೆ ಹೊರಟಿದ್ದಾನ?’ ಅಂತ ನಮ್ಮನ್ನು ಕೇಳಿಯೂ ಬಿಟ್ಟರು. ನಾವು ಹುಡುಗರು ಹಾಗೆಲ್ಲಾ ಗುಟ್ಟು ಬಿಟ್ಟು ಕೊಡುವ ಜಾಯಮಾನದವರಲ್ಲ. ಜಾಣತನದ ಜವಾಬು ನೀಡಿ ತಪ್ಪಿಸಿಕೊಂಡೆವು. ಪುಕ್ಕಲು ಪ್ರೇಮಿಯನ್ನು ಅವನ ಮನೆಯಿಂದ ಕರೆದುಕೊಂಡು ಬರುವುದೇ ದೊಡ್ಡ ಸಾಹಸವಾಯ್ತು.

ಆ ಹುಡುಗಿ ಸ್ಕೂಟಿಗೆ ಪೆಟ್ರೋಲ್‌ ಹಾಕಿಸಿಕೊಳ್ಳೋಕೆ ದಿನಾ ಪೆಟ್ರೋಲ್‌ ಬಂಕ್‌ಗೆ ಬರುತ್ತಿದ್ದಳು. ನಾನು ದಿನಾ ಆಕೆಗಾಗಿಯೇ ಅಲ್ಲಿಗೆ ಹೋಗ್ತಿದ್ದೆ ಅನ್ನೋ ಮಾಹಿತಿಯನ್ನು ಹುಡುಗನೇ ನಮಗೆ ಕೊಟ್ಟ. ಹಾಗಾದ್ರೆ, ಅಲ್ಲಿಯೇ ಅವಳಿಗೆ ಪ್ರಪೋಸ್‌ ಮಾಡು ಅಂತ ಹುರಿದುಂಬಿಸಿ, ಕೆಂಗುಲಾಬಿಯ ಗುತ್ಛವನ್ನು ಆತನ ಕೈಗಿಟ್ಟೆವು. ಅವನಂತೂ ಎಮೋಷನಲ್‌ ಆಗಿ, “ನೀವು ಕಣೊ ಫ್ರೆಂಡ್ಸ್‌ ಅಂದ್ರೆ, ನಿಮ್ಮನ್ನು ಜನ್ಮದಲ್ಲಿ ಮರೆಯೋದಿಲ್ಲ’ ಅಂತೆಲ್ಲಾ ಏನೇನೋ ಡೈಲಾಗ್‌ ಹೊಡೆದ. ನಮಗೋ ಆತನಿಗಿಂತಲೂ ಆತುರ. “ಸಾಕಪ್ಪಾ ನಿನ್ನ ಪುರಾಣ, ಹೋಗು ಪ್ರಪೋಸ್‌ ಮಾಡು’ ಅಂತ ಗದರಿಸಿ, ಸ್ವಲ್ಪ ದೂರದಲ್ಲಿದ್ದ ಮರದ ಕೆಳಗೆ ಹೋಗಿ ನಿಂತೆವು.

ಅವಳ ಮನೆಯ ಹತ್ತಿರ ನಮ್ಮ ಏಜೆಂಟ್‌ ಒಬ್ಬ ನಿಂತಿದ್ದ. ಆಕೆ ಮನೆಯಿಂದ ಹೊರಟ ಕೂಡಲೇ, “ಬಿ ರೆಡಿ. ಪ್ರೇಮ ಪಾರಿವಾಳ ಈಗಷ್ಟೇ ಗೂಡಿನಿಂದ ಹೊರಟಿದೆ’ ಅಂತ ಸೂಚನೆ ಕೊಟ್ಟ. ಅಷ್ಟು ಹೊತ್ತೂ ಧೈರ್ಯವಾಗಿದ್ದ ನಮ್ಮ ಹೀರೋ ಇದ್ದಕ್ಕಿದ್ದಂತೆ ಬೆವರುತ್ತ, “ಅಯ್ಯೋ ನಾ ಹೋಗಲ್ಲಪ್ಪಾ. ಅವಳ ಕೈಯಿಂದ ಏಟು ತಿನ್ನುವ ದೌರ್ಭಾಗ್ಯವೇ ಬೇಡ’ ಅಂತ ನಡುಗತೊಡಗಿದ. ನಮಗೆಲ್ಲ ಸಿಟ್ಟು ಜರ್ರನೆ ಏರಿತು. “ಏಯ್‌, ನೀನು ಹೇಳ್ದೆ ಇದ್ರೆ, ನಾವೇ ಹೋಗಿ ಹೇಳ್ತೀವಿ’ ಅಂತ ಹೆದರಿಸಿದ್ದಕ್ಕೆ, ಪುಕ್ಕಲು ಮಹಾಶಯ ಹೋಗೋಕೆ ರೆಡಿಯಾದ.

Advertisement

ಅಷ್ಟರಲ್ಲಿ ಅವಳು ಆ ಕಡೆಯಿಂದ ಬಂದೇ ಬಿಟ್ಟಳು. ನಮ್ಮ ಹುಡುಗ ನಡುಗುವ ಕೈಯಲ್ಲಿ ಗಾಡಿ ಸ್ಟಾರ್ಟ್‌ ಮಾಡಿಕೊಂಡು, ಯುದ್ಧಕ್ಕೆ ಹೊರಟವನಂತೆ ಹೊರಟ. ಮುಂದೇನಾಗುತ್ತದೋ ಅಂತ ನಾವು ಉಗುರು ಕಚ್ಚುತ್ತಾ ಕಾಯತೊಡಗಿದೆವು. ಅವಳು ಆ ಕಡೆ, ಇವನು ಈ ಕಡೆ. ಇನ್ನೇನು ಇವನ ಗಾಡಿ ಆಕೆಯ ಗಾಡಿಯನ್ನು ತಡೆದು ನಿಲ್ಲಿಸಬೇಕು ಅನ್ನೋಷ್ಟರಲ್ಲಿ ಎಡವಟ್ಟು ನಡೆದೇ ಹೋಯ್ತು. ಗಾಬರಿಯಲ್ಲಿ ಆತ ಪಕ್ಕದ ಚರಂಡಿಯೊಳಗೇ ಬೈಕ್‌ ನುಗ್ಗಿಸಿದ್ದ. ಆಕೆ ಇವನ ಅವಾಂತರ ನೋಡಿ ಗಾಬರಿಯಾಗಿ ಅಲ್ಲಿಂದ ಪರಾರಿಯಾದಳು.

“ಅಯ್ಯೋ, ಅಮ್ಮಾ’ ಅಂತ ನರಳುತ್ತಾ ಚರಂಡಿಯೊಳಗೆ ಬಿದ್ದಿದ್ದ ನಮ್ಮ ಹೀರೋನನ್ನು ನೋಡಿ ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು. ರೋಡ್‌ನ‌ಲ್ಲಿ ಪ್ರೇಮ ನಿವೇದನೆ ಮಾಡಪ್ಪಾ ಅಂದ್ರೆ, ಚರಂಡಿಯೊಳಗೆ ಬಂದು ಬಿದ್ಯಲ್ಲೋ ಅಂತ ಹೀಯಾಳಿಸುತ್ತಲೇ ಅವನನ್ನು ಮೇಲಕ್ಕೆತ್ತಿದೆವು. ಅವನ ಗಾಡಿ ಗ್ಯಾರೇಜ್‌ ಸೇರಿದರೆ, ಬಾಡಿ ದವಾಖಾನೆ ಸೇರಿತು. ಆ ಘಟನೆಯ ನಂತರ ಅವನ ತಲೆಗೇರಿದ್ದ ಪ್ರೇಮವೂ ಇಳಿದು ಹೋಯ್ತು. “ಕರುಣೆ ಇಲ್ಲದ ಕಡು ಹೃದಯ ಅವಳದ್ದು. ನಾನು ಬಿದ್ದು ಒದ್ದಾಡುತ್ತಿದ್ದರೂ, ನೋಡಿ ಸುಮ್ಮನೇ ಹೋದಳಲ್ಲ. ಮನುಷ್ಯತ್ವವೇ ಇಲ್ಲದ ಅವಳ ಮುಖ ನೋಡಲ್ಲ’ ಅಂತ ಭೀಷ್ಮ ಶಪಥ ಮಾಡಿದ.

ಚಂದನ್‌ ಎಸ್‌.ವೈ., ಮಾನಸ ಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next