ಜೈಪುರ: ರಾಜಸ್ಥಾನ ಬಿಜೆಪಿಯಲ್ಲೀಗ “ಹೈಕಮಾಂಡ್ v/s ವಸುಂಧರಾ ರಾಜೇ ಬೆಂಬಲಿಗರು’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಿಎಂ ವಸುಂಧರಾ ರಾಜೇ ಅವರನ್ನು ಬಿಜೆಪಿ ಹೈಕಮಾಂಡ್ ನಿರ್ಲಕ್ಷಿಸುತ್ತಿದೆ ಎನ್ನುವ ಸೂಚನೆಗಳ ನಡುವೆಯೇ ಈಗ ಆಕೆಯ ಬೆಂಬಲಿಗರು “ವಸುಂಧರಾ ರಾಜೇ ಸಮರ್ಥಕ್ ರಾಜಸ್ಥಾನ್ ಮಂಚ್’ ಎನ್ನುವ ಸಂಘಟನೆ ಆರಂಭಿಸಿದ್ದಾರೆ!
ಪಕ್ಷದ ಧುರೀಣ ಅಮಿತ್ ಶಾ, ರಾಜಸ್ಥಾನದ ಟಾಪ್ 3 ನಾಯಕರನ್ನು ಹೊಸದಿಲ್ಲಿಗೆ ಕರೆಸಿಕೊಂಡು ಸಭೆ ನಡೆಸಿದ ಬೆನ್ನಲ್ಲೇ ಶನಿವಾರ ಈ ಬೆಳವಣಿಗೆ ನಡೆದಿದೆ. ರಾಜೇ ಅವರನ್ನು ದಿಲ್ಲಿಯ ಸಭೆಗೆ ಆಹ್ವಾನಿಸದೆ ಇರುವುದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಅಮಿತ್ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಮುಖಂಡರಾದ ಗುಲಾಬ್ ಚಾಂದ್ ಕಟಾರಿಯಾ, ರಾಜೇಂದ್ರ ರಾಥೋಡ್‌ರನ್ನು ಶುಕ್ರವಾರ ದಿಲ್ಲಿಗೆ ಆಹ್ವಾನಿಸಿದ್ದರು.
ಏನಿದು ಮಂಚ್?: ರಾಜೇ ಕಟ್ಟಾನುಯಾಯಿ, ಜೈಪುರದ ಖ್ಯಾತ ವಕೀಲ ವಿಜಯ್ ಭಾರದ್ವಾಜ್ ನೇತೃತ್ವದಲ್ಲಿ “ರಾಜಸ್ಥಾನ್ ಮಂಚ್’ ಆರಂಭಿಸಲಾಗಿದೆ. ರಾಜ್ಯ ಕಾರ್ಯನಿರ್ವಾಹಕ ಸಮಿತಿ ಮತ್ತು 25 ಜಿಲ್ಲೆಗಳಿಗೆ ಅಧ್ಯಕ್ಷರು, ತಂಡದ ಸದಸ್ಯರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಇದು ಸಾಮಾಜಿಕ ಜಾಲತಾಣಗಳಲ್ಲಷ್ಟೇ ಭಾರೀ ಸಕ್ರಿಯವಿದೆ.
ಪಕ್ಷಕ್ಕಿಂತ ದೊಡ್ಡವರಲ್ಲ! :
“ರಾಜೇ ಬೆಂಬಲಿಗರ ಮಂಚ್ ಗಂಭೀರ ವಿಚಾರವೇನಲ್ಲ. ಇಲ್ಲಿ ಯಾರೂ ಪಕ್ಷ, ಸಿದ್ಧಾಂತಕ್ಕಿಂತ ದೊಡ್ಡವರಿಲ್ಲ. ರಾಜಸ್ಥಾನದ ಎಲ್ಲ ಬೆಳವಣಿಗೆಗಳೂ ಹೈಕಮಾಂಡ್‌ಗೆ ಗೊತ್ತಿದೆ. ಪಕ್ಷದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗದಿದ್ದವರು ಸಾಮಾಜಿಕ ಜಾಲತಾಣಗಳಲ್ಲಿ ಮಂಚ್ ಕಟ್ಟುತ್ತಿದ್ದಾರೆ’ ಎಂದು ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಪ್ರತಿಕ್ರಿಯೆ ನೀಡಿದ್ದಾರೆ.