ಡಿ. ಸತ್ಯಪ್ರಕಾಶ್ ನಿರ್ದೇಶನದ ರಾಮ ರಾಮ ರೇ’ ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾದವ ಹುಡುಗ ವಾಸುಕಿ ವೈಭಬ್. ಅದಾದ ನಂತರ ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿಕೊಟ್ಟು, ಅಲ್ಲೇ ಮನಸಿಂದ ಯಾರೂ ಕೆಟ್ಟೊರಲ್ಲ…’ ಎಂಬ ಹಾಡನ್ನು ಸಂಯೋಜಿಸಿ ಜನಪ್ರಿಯತೆ ಪಡೆದುಕೊಂಡ ವೈಭವ್ ಇದೀಗ ತಮ್ಮ ಸ್ನೇಹಿತ, ಮತ್ತೂಬ್ಬ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಅವರೊಂದಿಗೆ ಸಹಭಾಗಿತ್ವದಲ್ಲಿ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಗಾಡ್ ಫಾದರ್ ಸ್ಟುಡಿಯೋ’ ಎಂಬ ಮ್ಯೂಸಿಕ್ ಸ್ಟುಡಿಯೋ ಕಟ್ಟಿಕೊಂಡು ವೈಭವ್ ಒಂದಷ್ಟು ಸಂಗೀತ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಈ ತಂಡದಲ್ಲಿ ಅಂತಾರಾಷ್ಟ್ರೀಯ ಸಂಗೀತಗಾರರು ಸಹ ಕೆಲಸ ಮಾಡಲಿದ್ದಾರೆ. ಪ್ರಸ್ತುತ ಪೀಳಿಗೆಯ ಜನರಿಗೆ ರಂಗಭೂಮಿ ಮತ್ತು ಜಾನಪದ ಸಂಗೀತ ನೀಡುವ ಬಗ್ಗೆ ಆಲೋಚಿಸುತ್ತಿದ್ದೇವೆ’ ಎನ್ನುತ್ತಾರೆ ವಾಸುಕಿ ವೈಭವ್ ಹೇಳಿದ್ದಾರೆ.
ಸದ್ಯ ಕೋವಿಡ್ 19 ವೈರಸ್ ಚಿತ್ರರಂಗವನ್ನು ಸ್ತಬ್ದಗೊಳಿಸಿದ್ದು, ಇದೇ ವೇಳೆ ವಾಸುಕಿ ವೈಭವ್ ಬಿಗ್ ಬಾಸ್’ ಮನೆಗೆ ಹೋಗುವ ಮೊದಲು ಕೈಗೆತ್ತಿಕೊಂಡಿದ್ದ ಕೆಲವೊಂದು ಯೋಜನೆಗಳನ್ನು ಪೂರ್ಣಗೊಳಿಸುವುದರತ್ತ ಗಮನ ಹರಿಸಿದ್ದಾರಂತೆ. ಸದ್ಯ ಪುನೀತ್ ರಾಜಕುರ್ಮಾ ಒಡೆತನದ ಪಿ.ಆರ್.ಕೆ ಪ್ರೂಡಕ್ಷನ್ಸ್’ ನಿರ್ಮಾಣದ ಲಾ’ ಮತ್ತು ಪನ್ನಗಾ ಭರಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಗಳಿಗೆ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆಗೆ ಆರ್.ಜೆ ಪ್ರದೀಪ್ ನಿರ್ಮಾಣದ ಕನ್ನಡ ವೆಬ್ ಸರಣಿ ಹನಿಮೂನ್’ ಗೂ ಸಂಗೀತ ಸಂಯೋಜಿಸಲಿದ್ದಾರೆ.
ಇದಲ್ಲದೆ ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರಕ್ಕೂ ವಾಸುಕಿ ವೈಭವ್ ಸಂಗೀತವಿದ್ದು, ಈ ಚಿತ್ರ ಇನ್ನಷ್ಟೇ ತೆರೆಗೆ ಬರಬೇಕಿದೆ. ತಮ್ಮ ಮುಂಬರುವ ಚಿತ್ರಗಳ ಸಂಗೀತದ ಬಗ್ಗೆ ಮಾತನಾಡುವ ವಾಸುಕಿ ವೈಭವ್, ಸದ್ಯ ನಾನು ಸಂಗೀತ ಮಾಡುತ್ತಿರುವ ಮೂರು ಸಿನಿಮಾಗಳು ಮತ್ತೂಂದು ವೆಬ್ ಸೀರಿಸ್ ತೆರೆಗೆ ಬರಬೇಕಿದೆ.
ಇದೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಪ್ರತಿಯೊಂದರಲ್ಲೂ ಹೊಸತರದ ಮ್ಯೂಸಿಕ್ ಆಸ್ವಾಧಿಸಬಹುದು. ಲಾಕ್ ಡೌನ್ ನಡುವೆಯೇ ಬಾಕಿಯಿರುವ ಮ್ಯೂಸಿಕ್ ಕೆಲಸಗಳನ್ನ ಮಾಡುತ್ತಿದ್ದೇನೆ. ಕೋವಿಡ್ 19 ಲಾಕ್ ಡೌನ್ ಮುಗಿದ ಬಳಿಕ ಬರುತ್ತಿರುವ ಹೊಸ ಸಿನಿಮಾಗಳ ಆಫರ್ಸ್ ಬಗ್ಗೆ ಯೋಚನೆ ಮಾಡಬೇಕಿದೆ’ ಎನ್ನುವುದು ವೈಭವ್ ಮಾತು.