Advertisement
ಉಡುಪಿ: ಇಂದಿನ ಆಧುನಿಕತೆಯ ಯುಗದಲ್ಲಿ ತಂದೆಯಿಂದ ಬಂದ ಕೃಷಿ ಕಾಯಕಯವನ್ನು ಮುಂದುವರೆಸಿಕೊಂಡು, ತಮ್ಮ ಮಕ್ಕಳಿಗೂ ಕೃಷಿಯಲ್ಲಿ ಆಸಕ್ತಿ ಮೂಡಿಸಿರುವ ಹಿರೇಬೆಟ್ಟು ನಿವಾಸಿ ವಾಸುದೇವ್ ಭಟ್ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.
ಕೂಲಿ ಕಾರ್ಮಿಕರ ಸಮಸ್ಯೆಯಿಂದ ಎಲ್ಲರೂ ಯಾಂತ್ರಿಕ ಕೃಷಿಗೆ ಮುಖ ಮಾಡುತ್ತಿದ್ದರೆ, ವಾಸುದೇವ್ ಭಟ್ ಅವರು ಕೃಷಿಯ ಸಂಪೂರ್ಣ ಚಟುವಟಿಕೆಯನ್ನು ಮಾನವ ಶ್ರಮ ಬಳಸಿಕೊಂಡು ಮಾಡುತ್ತಿದ್ದಾರೆ. ಗೆದ್ದೆ ಹದ ಮಾಡಲು ಟ್ರ್ಯಾಕ್ಟರ್ ಬದಲಾಗಿ ಮನೆಯಲ್ಲಿ ಸಾಕಿದ ಕೋಣಗಳನ್ನು ಬಳಸುತ್ತಾರೆ. ತೋಟಗಾರಿಕೆ ಬೆಳೆಯನ್ನು ವೈಜ್ಞಾನಿಕ ವಿಧಾನ ಬಳಸಿಕೊಂಡಿದ್ದಾರೆ.
Related Articles
ಕೃಷಿ ಕೆಲಸಗಳಿಗೆ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ವಾಸುದೇವ್, ಅವರ ಪತ್ನಿ, ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಹಲವಾರು ಕಾರಣಗಳಿಂದ ಕೃಷಿ ಕ್ಷೇತ್ರದಿಂದ ಹಿಂದೆ ಸರಿಯುತ್ತಿರುವ ಅದೆಷ್ಟೋ ಕೃಷಿಕರ ಮಧ್ಯೆ ಗ್ರಾಮೀಣ ಭಾಗದಲ್ಲಿದ್ದೂ ಕೃಷಿಯ ಜತೆ ಬದುಕು ಕಟ್ಟುತ್ತಿದೆ ಈ ಕುಟುಂಬ.
Advertisement
ಸಮಗ್ರ ಕೃಷಿಕೃಷಿ ಜತೆಗೆ ಹೈನುಗಾರಿಕೆಯಲ್ಲಿ ಸಹ ನಿರತರಾಗಿದ್ದಾರೆ. ವರ್ಷಕ್ಕೆ ಒಂದು ಮುಂಗಾರು ಭತ್ತ ಕೃಷಿ ಬೇಸಾಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಎಚ್‌ಎಂ4 ತಳಿಯ ಭತ್ತವನ್ನು ಬಳಸುತ್ತಿದ್ದಾರೆ. ತೋಟದಲ್ಲಿ 350 ಅಡಿಕೆ, 35 ತೆಂಗು, ಕಾಳು ಮೆಣಸು ಬೆಳೆಸಿದ್ದಾರೆ. ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು 2 ಕೋಣ ಸೇರಿದಂತೆ ಒಟ್ಟು 8 ದನಗಳನ್ನು ಸಾಕಿದ್ದಾರೆ. ಹಟ್ಟಿಗೊಬ್ಬರವನ್ನು ಭತ್ತ ಕೃಷಿ ಹಾಗೂ ತೋಟಕ್ಕೆ ಬಳಕೆ ಮಾಡುತ್ತಿದ್ದಾರೆ. ಇÊರ ಕೃಷಿ ಮೇಲಿನ ಪ್ರೇಮ ಹಾಗೂ ಸಾಧನೆಯನ್ನು ಕೃಷಿ ಇಲಾಖೆ ಪ್ರಶಸ್ತಿಯನ್ನು ನೀಡಿದೆ. ಶ್ರೇಷ್ಠ ಕೃಷಿಕ ಪ್ರಶಸ್ತಿಗಳು
ವಾರ್ಷಿಕ ಸುಮಾರು 20 ಕ್ವಿಂಟಾಲ್ ಭತ್ತದ ಬೆಳೆ ತೆಗೆಯುತ್ತಾರೆ. ನಿತ್ಯ 50 ಲೀಟರ್ ಹಾಲು, 35 ತೆಂಗಿನ ಮರದಿಂದ ತಲಾ 80 ಕಾಯಿಗಳು, ಅಡಿಕೆ ಸೇರಿದಂತೆ ಸಮಗ್ರ ಕೃಷಿ ಮೂಲಕ ತಿಂಗಳಿಗೆ 40,000 ರೂ. ಆದಾಯ ಗಳಿಸುತ್ತಿದ್ದಾರೆ. ಇವರ ತೋಟಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ತೋಟದಲ್ಲಿ ಬೆಳೆದ ಕಾಳುಮೆಣಸಿನ ಸಸಿಗಳನ್ನು ಕೂಡ ಮಾರಾಟ ಮಾಡುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ 2017-18 ಸಾಲಿನ ಜಿಲ್ಲಾ ಶ್ರೇಷ್ಠ ಕೃಷಿಕ, ಹೆರ್ಗ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಜಾನುವಾರು ಮೇಳದಲ್ಲಿ ಶೇಷ್ಠ ಹೈನುಗಾರಿಕೆ ಪ್ರಶಸ್ತಿ, ಗ್ರಾಮೀಣ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಇವರು ಅಡ್ವೆ ,ಪುತ್ತೂರು, ಕಟಪಾಡಿ ಸೇರಿದಂತೆ ವಿವಿಧ ಕಂಬಳಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೋಟಿ ವಿದ್ಯೆಗಿಂತ ಮೇಲು
ಎಲ್ಲ ಉದ್ಯೋಗಕ್ಕಿಂತ ಕೃಷಿ ಉತ್ತಮ. ಶಾರೀರಕ ವ್ಯಾಯಮದ ಜತೆ ಸ್ವಾವಲಂಬಿ ಉದ್ದಿಮೆ ಆಗಿದೆ. ಕಡಿಮೆ ಸಮಯದಲ್ಲಿ ಉತ್ತಮ ಇಳುವರಿಯ ಮೂಲಕ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಪ್ರಸ್ತುತ ಎಂಜಿನಿಯರಿಂಗ್ ಕಲಿಯತ್ತಿರುವ ಮಗ ಹೈನುಗಾರಿಕೆಯಲ್ಲಿ ಆಸಕ್ತಿಯಿದ್ದು, ಜತೆಗೆ ಕುಟುಂಬದ ಎಲ್ಲ ಸದಸ್ಯರು ಕೃಷಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಯುವಕರ ಸ್ವಾವಲಂಬಿ ಬದುಕಿಗೆ ಈ ಕೃಷಿ ಚಟುವಟಿಕೆ ಹೆಚ್ಚು ಉಪಯುಕ್ತವಾಗಿದೆ. “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂದು ಕವಿ ಸರ್ವಜ್ಞ ಹೇಳಿದ್ದಾನಲ್ಲವೇ?
-ವಾಸುದೇವ್ ಭಟ್, ಕೃಷಿ ಸಾಧಕ. -ಕಾರ್ತಿಕ್ ಚಿತ್ರಾಪುರ