ನವದೆಹಲಿ: ಲೋಕಸಭೆಯ ಲೈಬ್ರರಿ ಹಾಲ್ ವಾಸ್ತು ದೋಷದಿಂದ ಕೂಡಿದೆ. ಇದರಿಂದಾಗಿಯೇ ಸರ್ಕಾರಗಳು ಪದೇ, ಪದೇ ಪತನವಾಗಲು ಕಾರಣ ಎಂದು 1997ರಲ್ಲಿ ಖ್ಯಾತ ವಾಸ್ತುಶಾಸ್ತ್ರಜ್ಞ ಶಾಸ್ತ್ರಿ ಕುಶ್ ದೀಪ್ ಬನ್ಸಾಲ್ ಹೇಳುವ ಮೂಲಕ ಪತ್ರಿಕೆಯ ಹೆಡ್ ಲೈನ್ಸ್ ಗಳಲ್ಲಿ ಗುರುತಿಸಿಕೊಂಡಿದ್ದು, ಇದೀಗ ಸುಮಾರು 30 ವರ್ಷಗಳ ಬಳಿಕ ಬನ್ಸಾಲ್ ಬರೋಬ್ಬರಿ 65 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ:Protest: BJP ರಾಜ್ಯಾಧ್ಯಕ್ಷ ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ… NSUI ಕಾರ್ಯಕರ್ತರ ಬಂಧನ
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸ್ ಮತ್ತು ದೆಹಲಿಯ ವಿಶೇಷ ಪೊಲೀಸ್ ಪಡೆ ಜಂಟಿಯಾಗಿ ವಾಸ್ತು ತಜ್ಞ ಬನ್ಸಾಲ್ ಹಾಗೂ ಸಹೋದರನನ್ನು ಬಂಧಿಸಿದೆ.
ರಾಜಧಾನಿ ಬಾರಾಕಂಬ ಪ್ರದೇಶದಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ. ಅಸ್ಸಾಂ ಪೊಲೀಸರು ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್ ಮೂಲಕ ಅಸ್ಸಾಂಗೆ ಕರೆದೊಯ್ದಿರುವುದಾಗಿ ವರದಿ ವಿವರಿಸಿದೆ. ಆಟೋನೊಮಸ್ ಕೌನ್ಸಿಲ್ ಹಗರಣದಲ್ಲಿ ಬನ್ಸಾಲ್ ಹಾಗೂ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಶಾಮೀಲಾಗಿರುವುದಾಗಿ ವರದಿ ತಿಳಿಸಿದೆ.
ದೆಹಲಿ ಮೂಲದ ಸಬರ್ವಾಲ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಮಾಲೀಕ ಕಮಲ್ ಸಬರ್ವಾಲ್ ಬನ್ಸಾಲ್ ವಿರುದ್ಧ ದೂರು ನೀಡಿದ್ದರು. ಕಮಲ್ ಸಬರ್ವಾಲ್ ಗೆ ಒಬ್ಬ ವ್ಯಕ್ತಿಯನ್ನು ಪರಿಚಯಿಸಿದ್ದಾಗಿ ಬನ್ಸಾಲ್ ದೆಹಲಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ವಿವಿಧ ರಾಜ್ಯ ಸರ್ಕಾರಗಳ ಯೋಜನೆಗಳಿಗೆ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುವ ಬನ್ಸಾಲ್, ದೇಶದ ಪ್ರಮುಖ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿರುವುದಾಗಿ ವರದಿ ಹೇಳಿದೆ.