Advertisement

ಅಮೆರಿಕದಲ್ಲಿ ವಸಂತ ಸಾಹಿತ್ಯೋತ್ಸವ

07:53 PM May 18, 2019 | Team Udayavani |

ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು. ಅಮೆರಿಕದಂಥ ದೇಶಗಳಲ್ಲಿ ಕೂಡ ದೇವಸ್ಥಾನಗಳು ಕಟ್ಟಲ್ಪಟ್ಟವು, ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ತರಗತಿಗಳು ಪ್ರಾರಂಭವಾದವು, ಪುಟ್ಟ ಪುಟ್ಟ ನಗರಗಳಲ್ಲಿದ್ದ ಜನಗಳೆಲ್ಲ ಸೇರಿ ಯುಗಾದಿ, ಗಣೇಶೋತ್ಸವ ಮುಂತಾದವನ್ನು ಒಟ್ಟಿಗೆ ಆಚರಿಸುವಂಥ ಪ್ರಕ್ರಿಯೆಗಳು ಆರಂಭವಾದವು. ಕನ್ನಡ ಕೂಟಗಳು, ಸಾಹಿತ್ಯ ಗೋಷ್ಠಿಗಳು ನಡೆಯಲಾರಂಭಿಸಿದವು. ಇವೆಲ್ಲವನ್ನೂ ಒಂದೇ ವೇದಿಕೆಯಲ್ಲಿ ತರುವ ಸಲುವಾಗಿ 2000ದಲ್ಲಿ ಅಕ್ಕ ಸಮ್ಮೇಳನದ ಕಲ್ಪನೆ ಹುಟ್ಟಿಕೊಂಡಿತು. ಕನ್ನಡ ನಾಡುನುಡಿ ಸಂಸ್ಕೃತಿಯನ್ನು ಹೊಸ ಜನಾಂಗಕ್ಕೆ ಪರಿಚಯಿಸುವ ಮತ್ತು ಅನಿವಾಸಿ ಕನ್ನಡಿಗರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ರೂಪಗೊಂಡ ಈ ಸಂಸ್ಥೆ ಆನಂತರದ ಜಾತ್ರೆಗಳಂತಾಗಿ ಸಾಹಿತ್ಯಕ್ಕೆ ಹೆಚ್ಚಿನ ಮಾನ್ಯತೆ ಸಿಗದಿದ್ದಾಗ ಕೆಲವು ಜನ ಸೇರಿ ಅಮೆರಿಕದಲ್ಲಿರುವ ಎಲ್ಲ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಡಿ ತರುವ ಕನಸು ಕಂಡರು. ಯಾವುದೇ ಜಾತಿ-ಧರ್ಮ ವಿಚಾರ-ಸಿದ್ಧಾಂತಗಳಿಗೆ ಅವಕಾಶಮಾಡಿಕೊಡದೆ ಸಾಹಿತ್ಯದ ಅನನ್ಯತೆ ಮತ್ತು ಶ್ರೇಷ್ಠತೆಯನ್ನು ಎತ್ತಿ ಹಿಡಿಯುವಂಥ ಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಹೀಗೆ 2003ರಲ್ಲಿ ರೂಪುಗೊಂಡಿದ್ದೇ ಕನ್ನಡ ಸಾಹಿತ್ಯ ರಂಗ.

Advertisement

ಈ ಸಂಸ್ಥೆಯನ್ನು ಸ್ಥಾಪಿಸಿದವರಲ್ಲಿ ಎಚ್‌. ರಂಗಾಚಾರ್‌, ಎಚ್‌. ವೈ. ರಾಜಗೋಪಾಲ್‌, ಎಚ್‌. ಕೆ. ಚಂದ್ರಶೇಖರ್‌, ನಾಗ ಐತಾಳ್‌ ಮುಂತಾದವರು ಮುಖ್ಯರು. ಎರಡು ವರ್ಷಗಳಿಗೊಮ್ಮೆ ವಸಂತ ಸಾಹಿತ್ಯೋತ್ಸವವನ್ನು ಆಯೋಜಿಸಿ ಎಲ್ಲ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಡಿ ತರುವುದು ರಂಗದ ಗುರಿಯಾಗಿತ್ತು. ಸಾಹಿತ್ಯಕ ಗೋಷ್ಠಿಗಳು ಪುಳಿಯೋಗರೆ, ಮೊಸರನ್ನ ತಿಂದು, ಜರತಾರಿ ಸೀರೆ, ಜುಬ್ಟಾ-ಪೈಜಾಮಗಳಂಥ ಪೋಷಾಕುಗಳಲ್ಲಿ ಕಳೆದುಹೋಗದೆ ಸಾರ್ವಕಾಲಿಕ ದಾಖಲೆಯಾಗಬೇಕೆಂಬ ಮುಂದಾಲೋಚನೆಯೂ ಸಮಿತಿಯಲ್ಲಿತ್ತು ಅದಕ್ಕಾಗಿಯೇ ಕರ್ನಾಟಕದಿಂದ ವಿದ್ವಾಂಸರನ್ನು ಆಹ್ವಾನಿಸಿ ಅವರ ಭಾಷಣವನ್ನು ಮೊದಲೇ ಅಚ್ಚುಮಾಡಿಸಿ ಆ ದಿನ ವಿತರಿಸಬೇಕೆಂಬ ನಿಯಮವನ್ನು ರೂಪಿಸಿಕೊಂಡರು. ಎಲ್ಲ ಕಾರ್ಯಕ್ರಮಗಳು ಕೂಡ ಅಚ್ಚುಕಟ್ಟಾಗಿ ಮತ್ತು ಸಾರವತ್ತಾಗಿ ನಡೆಯಬೇಕೆಂದು ಉಪಸಮಿತಿಗಳನ್ನು ರಚಿಸಿಕೊಂಡು ಕೆಲಸ ಆರಂಭಿಸಿದರು. ಮೊದಲ ವಸಂತ ಸಾಹಿತ್ಯೋತ್ಸವ 2004ರಲ್ಲಿ ನಡೆಯಿತು. ಕುವೆಂಪು ಅವರ ಶಿಷ್ಯರಾದ ಕೆ. ಪ್ರಭುಶಂಕರ್‌ ಅವರನ್ನು ಆಹ್ವಾನಿಸಲಾಯಿತು. ಜೀವವಿಜ್ಞಾನಿ ಮತ್ತು ಪ್ರಸಿದ್ಧ ಲೇಖಕರಾಗಿರುವ ನಾಗ ಐತಾಳರು ಸಂಪಾದಿಸಿದ ಅಮೆರಿಕನ್ನಡಿಗ ಬರಹಗಾರರು, ಕುವೆಂಪು ಸಾಹಿತ್ಯ ಸಮೀಕ್ಷೆ ಬಿಡುಗಡೆಗೊಂಡಿತು. ಅಲ್ಲಿಂದ ಶುರುವಾದ ವಸಂತೋತ್ಸವ ಈವರೆಗೆ ಎಂಟು ಕಾರ್ಯಕ್ರಮಗಳನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಿದೆ.

ಫಿಲಡೆಲ್ಪಿಯಾ, ಶಿಕಾಗೋ, ಲಾಸ್‌ಏಂಜಲೀಸ್‌, ಹೋಸ್ಟನ್‌, ಸ್ಯಾನ್‌ ಪ್ರಾನ್ಸಿಸ್ಕೋ, ಸೆಂಟ್‌ ಲೂಯಿಸ್‌, ಬಾಸ್ಟನ್‌ ಮುಂತಾದ ನಗರಗಳಲ್ಲಿ ಅಲ್ಲಿಯ ಸ್ಥಳೀಯ ಕನ್ನಡ ಕೂಟಗಳ ಸಹಯೋಗದಿಂದ ವಸಂತೋತ್ಸವಗಳನ್ನು ಏರ್ಪಡಿಸಲಾಗಿದೆ. ವೈದೇಹಿ, ವೀಣಾ ಶಾಂತೇಶ್ವರ, ಬರಗೂರ ರಾಮಚಂದ್ರಪ್ಪ , ಕೆ. ವಿ. ತಿರುಮಲೇಶ್‌, ಸುಮತೀಂದ್ರ ನಾಡಿಗ, ಅ. ರಾ. ಮಿತ್ರ, ಭುವನೇಶ್ವರಿ ಹೆಗಡೆ, ಪ್ರಧಾನ ಗುರುದತ್‌, ಲಕ್ಷ್ಮೀಶ ತೋಳ್ಪಾಡಿ ಮುಂತಾದವರು ಈವರೆಗೆ ಭಾಗವಹಿಸಿದ್ದಾರೆ. ಈ ಮಧ್ಯೆ ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತ ಕಮ್ಮಟವನ್ನು ನಡೆಸಿಕೊಟ್ಟಿದ್ದಾರೆ.

ಪ್ರತಿ ಸಾಹಿತ್ಯೋತ್ಸವಕ್ಕೂ ಒಂದೊಂದು ವಿಷಯ
ಪ್ರತಿ ಸಾಹಿತ್ಯೋತ್ಸವಕ್ಕೂ ಒಂದೊಂದು ವಿಷಯ. ಆ ವಿಷಯ ಕುರಿತು ಅಮೆರಿಕದಾದ್ಯಂತ ಇರುವ ಬರಹಗಾರರಿಂದ ಬರಹಗಳನ್ನು ಆಹ್ವಾನಿಸಿ. ಸಂಗ್ರಹಿಸಿ, ಸಂಕಲಿಸಿ, ಸಂಪಾದಿಸಿ, ತಿದ್ದಿ ಪುಸ್ತಕವನ್ನು ಬಿಡುಗಡೆಗೊಳಿಸುವುದು ಕನ್ನಡ ಸಾಹಿತ್ಯ ರಂಗದ ಸಂಪ್ರದಾಯ.

ಅವುಗಳಲ್ಲಿ ಕೆಲವು ಪುಸ್ತಕಗಳಿವು : ಆಚೀಚೆಯ ಕಥೆಗಳು- ಕಡಲಾಚೆಯ ಕಥೆಗಳು, ನಗೆಗನ್ನಡಂ ಗೆಲ್ಗೆ, ಮಥಿಸಿದಷ್ಟು ಮಾತು, ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು, ಬೇರು ಸೂರು, ಅನುವಾದ ಸಂವಾದ, ಅವರವರ ಭಕುತಿಗೆ… ಹೀಗೆ ಪ್ರತಿ ಸಂಪುಟವೂ ಅರ್ಥಪೂರ್ಣ. ಇದರ ಜೊತೆಗೆ ಕನ್ನಡದ ಕೆಲವು ಬರಹಗಳನ್ನು ಇಂಗ್ಲಿಶ್‌ಗೂ ಅನುವಾದಿಸಿ ಪ್ರಕಟಿಸುವ ಪ್ರಯತ್ನವನ್ನೂ ಮಾಡಿದೆ. ಇತ್ತೀಚೆಗೆ ವಸಂತೋತ್ಸವದ ಭಾಷಣಗಳನ್ನೆಲ್ಲ ಸೇರಿಸಿ ರಂಗಾಂತರಂಗ ಎನ್ನುವ ಪುಸ್ತಕವನ್ನೂ ಪ್ರಕಟಿಸಲಾಗಿದೆ.

Advertisement

ಕನ್ನಡ ಸಾಹಿತ್ಯರಂಗದ ನಿರಂತರ ಪ್ರೋತ್ಸಾಹ ಮತ್ತು ಕಾರ್ಯಕ್ರಮಗಳ ಪ್ರಭಾವದಿಂದ ಅನೇಕ ಪ್ರತಿಭಾವಂತರು ತಮ್ಮ ಸಾಹಿತ್ಯಕೃತಿಗಳ ಮೂಲಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮುಖ್ಯರಾಗಿದ್ದಾರೆ. ಕನ್ನಡ ಸಂಸ್ಕೃತಿಗೆ ತಮ್ಮ ಅನುಭವ ಲೋಕದ ಸಂವೇದನೆಗಳನ್ನು ಪರಿಚಯಿಸಿ¨ªಾರೆ ಗುರುಪ್ರಸಾದ್‌ ಕಾಗಿನೆಲೆ, ಮೀರಾ ರಾಜಗೋಪಾಲ್‌, ವೈಶಾಲಿ ಹೆಗಡೆ, ಶಾಂತಲಾ ಬಂಡಿ- ಹೀಗೆ ಹೆಸರು ಬೆಳೆಯುತ್ತ ಹೋಗುತ್ತದೆ. ಇವರಿಗೆಲ್ಲ ಬೆನ್ನೆಲುಬಾಗಿ ನಿಂತು ತಾವೂ ಬೆಳೆದು ಇತರರನ್ನು ಬೆಳೆಸುತ್ತಿರುವ ದೊಡ್ಡ ಬಳಗವೇ ಇದೆ. 84ರ ಹರೆಯದಲ್ಲಿಯೂ ತಮ್ಮ ಕಣ್ಣು ಮಂಜಾಗುತ್ತಿದ್ದರೂ ಕನ್ನಡದ ಮೇಲಿನ ಪ್ರೀತಿಯಿಂದ ನಾಗ ಐತಾಳರು ಹಗಲಿರುಳು ಸಾಹಿತ್ಯ ರಂಗಕ್ಕೆ ದುಡಿಯುತ್ತಿದ್ದಾರೆ. ಕಳೆದ ವರ್ಷವಷ್ಟೆ ನಿಧನರಾದ ಎಚ್‌. ವೈ. ರಾಜಗೋಪಾಲರ ಕೊಡುಗೆಯೂ ಮಹಣ್ತೀದ್ದೇ. ಅಂತಃಕರಣಕ್ಕೆ ಇನ್ನೊಂದು ಹೆಸರಿನಂತಿರುವ ನಳಿನಿ ಮೈಯ, ಯಾವ ಕೆಲಸವಾದರೂ ಸರಿ ನಿಯಮಬದ್ಧವಾಗಿ ಮತ್ತು ಕಾಲಾನುಕ್ರಮದಲ್ಲಿಯೇ ನಡೆಯಬೇಕೆಂದು ಬಯಸುವ ಮೈ. ಶ್ರೀ. ನಟರಾಜ, ಹಣಕಾಸಿನ ನಿರ್ವಹಣೆಯನ್ನು ಎಚ್ಚರದಿಂದ ನಿರ್ವಹಿಸುವ ಗುಂಡು ಶಂಕರ್‌, ಕಸಾರಂ ಕೆಲಸಗಳನ್ನು ತನ್ನ ಮನೆಯ ಕೆಲಸವೆಂಬಂತೆ ನಿರ್ವಹಿಸುವ ಶ್ರೀಕಾಂತ ಬಾಬು, ಬೇಸರವಿಲ್ಲದೆ ಶ್ರದ್ಧೆಯಿಂದ ದುಡಿಯುವ ತ್ರಿವೇಣಿ ಶ್ರೀನಿವಾಸರಾವ್‌ ಮುಂತಾದವರು ಸ್ವತಃ ಬರಹಗಾರರು. ಸಾಹಿತ್ಯರಂಗದ ಕೆಲಸದ ಜೊತೆ ಜೊತೆಗೆ ತಮ್ಮ ಬರಹಗಳ ಮೂಲಕ ಗಮನಸೆಳೆದವರು.

ಅಮೆರಿಕದಲ್ಲಿ ನೋಂದಾಯಿತ
ಕಸಾರಂ ಲಾಭದಾಯಕವಲ್ಲದ ಸಾಹಿತ್ಯಕ ಸಂಸ್ಥೆಯಾಗಿ ಅಮೆರಿಕದಲ್ಲಿ ನೋಂದಾಯಿತವಾಗಿದೆ. ನಿಯಮಿತ ಆದಾಯವಿಲ್ಲದ ಸಂಸ್ಥೆಯಾಗಿರುವುದರಿಂದ ಸದಸ್ಯರು ಮತ್ತು ದಾನಿಗಳ ಪ್ರೋತ್ಸಾಹದಿಂದಲೇ ನಡೆಯುತ್ತಿರುವ ಈ ಸಂಸ್ಥೆಗೆ ಕಾಯಕಲ್ಪ ನೀಡಿ, ಆರ್ಥಿಕವಾಗಿ ಸದೃಢವಾದ, ಸ್ವಾಯತ್ತ ಸಂಸ್ಥೆಯನ್ನಾಗಿಮಾಡಬೇಕೆಂಬ ಕನಸಿದೆ. ಜೊತೆಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಬೇಕೆಂಬ ಮನಸೂ ಇದೆ.
ನ್ಯೂಜೆರ್ಸಿಯಲ್ಲಿ “ಬದಲಾವಣೆ’ಯನ್ನು ಕುರಿತ ಕೇಂದ್ರವಿಷಯವಾಗುಳ್ಳ ಸಾಹಿತ್ಯೋತ್ಸವ ಇದೇ 18 ಮತ್ತು 19ರಂದು ತ್ರಿವೇಣಿ ಕನ್ನಡ ಕೂಟದ ಸಹಯೋಗದಲ್ಲಿ ನಡೆಯಲಿದೆ. ಕಥೆಗಾರ ವಸುಧೇಂದ್ರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ವಸುಂಧರಾ ಭೂಪತಿ ಅವರು ಪುಸ್ತಕ ಸಂಸ್ಕೃತಿಯ ಬಗ್ಗೆ ವಿಶೇಷ ಕಮ್ಮಟವನ್ನು, ಸುನಂದಾ ಕಡಮೆ ಕಥಾಕಮ್ಮಟವನ್ನು ನಡೆಸಿಕೊಡಲಿದ್ದಾರೆ.

ನ. ರವಿಕುಮಾರ

Advertisement

Udayavani is now on Telegram. Click here to join our channel and stay updated with the latest news.

Next