ಕಲಬುರಗಿ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕಲ್ಯಾಣ ಕರ್ನಾಟಕ, ಕರುನಾಡಿನ ಮಾತೃಭಾಷೆಯ ಕರುಳು ಬಳ್ಳಿ, ಪ್ರಾಧ್ಯಾಪಕ, ಲೇಖಕ, ಸಾಹಿತಿ, ಭಾಷಾ ವಿದ್ವಾಂಸ, ಸಾಹಿತ್ಯ ಲೋಕದ ಮೇರು ಕಳಸವಾಗಿದ್ದ ಪ್ರೊ| ವಸಂತ ಕುಷ್ಟಗಿ ಶುಕ್ರವಾರ ಅಸ್ತಂಗರಾಗಿದ್ದು, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಪ್ರೊ| ವಸಂತ ಕುಷ್ಟಗಿ ಅಗಲುವಿಕೆಯಿಂದ ಸಾಹಿತ್ಯ ಲೋಕಕ್ಕೆ ದೊಡ್ಡ ಹಾನಿಯಾಗಿದೆ.
ಕಲ್ಯಾಣ ಕರ್ನಾಟಕದ ಸಾಹಿತ್ಯ, ಐತಿಹಾಸಿಕ ಹೋರಾಟಗಳು, ಚಾರಿತ್ರಿಕ ಘಟನೆಗಳ ಕುರಿತು ಅಪಾರ ಅನುಭವ ಜ್ಞಾನದಿಂದ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆ ಮೂಲಕ ರಾಷ್ಟ್ರ ಭಕ್ತಿಯ ಸುಧೆ ಹರಿಸಿದವರು ದೈವಾ ಧೀನರಾಗಿದ್ದು ಕನ್ನಡ ಸಾಹಿತ್ಯ ಲೋಕ ಹಾಗೂ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ. ಕಲ್ಯಾಣ ಕರ್ನಾಟಕದ ಐತಿಹಾಸಿಕ ಶತಮಾನ ಕಂಡ ಪ್ರತಿಷ್ಠಿತ “ನೂತನ ವಿದ್ಯಾಲಯ’ದ ಕನ್ನಡ ಪ್ರಾಧ್ಯಾಪಕರು, ಪ್ರಾಂಶುಪಾಲರಾಗಿ ತಮ್ಮ ಜ್ಞಾನ ಜ್ಯೋತಿಯಿಂದ ಅಸಂಖ್ಯಾತ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿ, ಶಿಕ್ಷಣ ಸಂಸ್ಥೆ ಯ ಕೀರ್ತಿಯನ್ನು ಕರುನಾಡಿನ ತುಂಬಾ ವ್ಯಾಪಿಸುವಂತೆ ಮಾಡಿ, ಮಹಾನ್ ಆಡಳಿತಗಾರರು ಎಂದು ಮನ್ನಣೆ ಪಡೆದಿದ್ದರು.
1995ರಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಪರಿಷ್ಕರಣೆಗೊಳಿಸಿ ಪ್ರಥಮ ಭಾಷೆಯಾದ ಕನ್ನಡದ ಪದ್ಯಭಾಗದಲ್ಲಿ ಕುಷ್ಟಗಿ ಅವರು ಬರೆದ “ಹಾರೈಕೆ’ ಮೊದಲ ಪದ್ಯವನ್ನೇ ಅಳವಡಿಸಿತ್ತು. ಈ ಕವಿತೆ ಕರುನಾಡಿನಾದ್ಯಂತ ಮನೆಮಾತಾಗಿತ್ತು. ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಲಭಿಸಿತ್ತು. ಗುಲಬರ್ಗಾ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಹಿರಿಯರು ಆಗಿದ್ದರು. ನಾಡಿನ ವಿದ್ವಾಂಸ ಪರಂಪರೆಯ ಹಿರಿಯ ಕೊಂಡಿ ಆಗಿದ್ದ ಕುಷ್ಟಗಿ ಲೇಖಕರಿಗೆ ಪ್ರೇರಕ ಶಕ್ತಿಯಾಗಿ ಚೈತನ್ಯ ತುಂಬಿದ್ದರು.
ಸುಮಾರು 80 ಕೃತಿಗಳನ್ನು ಸಾಹಿತ್ಯ ಸರಸ್ವತಿ ಮಡಿಲಿಗೆ ಹಾಕಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾವ್ಯ, ಹತ್ತಾರು ಲೇಖನ, ವಿಶೇಷವಾಗಿ ದಾಸಸಾಹಿತ್ಯದಲ್ಲಿ ಸಾಹಿತ್ಯ ಕೃಷಿ ಮಾಡಿದ್ದರು. ಎನ್. ಧಮಸಿಂìಗ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರೊ| ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಎಂಭತ್ತರ ಇಳಿ ವಯಸ್ಸಿನಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕುಷ್ಟಗಿ ಅವರ ಮನಸ್ಸು ಸದಾ ಮಿಡಿಯುತ್ತಿತ್ತು. ಇಂತಹ ಸಾಹಿತ್ಯ ದಿಗ್ಗಜಗೆ ಮತ್ಯಾರೂ ಸರಿಸಾಟಿ ಆಗಲಾರರು.