ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಏಳನೇ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವವು ಮೇ 6 ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆಯು ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಸಮಿತಿಯ ವಿಶ್ವಸ್ಥರಾದ ಲಕ್ಷಿ¾à ನರಸಿಂಹ ಪ್ರಭು ಮತ್ತು ನರಸಿಂಹ ಅನಂದ ಪ್ರಭು ಅವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಗರದ ಗಾಯಕ ಸಂಜಯ್ ನಾಡಕರ್ಣಿ ಮತ್ತು ತಂಡದವರಿಂದ ವಿಶೇಷ ಭಜನ ಕಾರ್ಯಕ್ರಮ ನೆರವೇರಿತು.
ತಂಡದವರು ಕನ್ನಡ, ಕೊಂಕಣಿ ಮತ್ತು ಮರಾಠಿ ಭಜನೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನು ರಂಜಿಸಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಶ್ರೀಧರ ಭಟ್, ತಬಲಾದಲ್ಲಿ ಸಿದ್ಧಾರ್ಥ್ ಪಡಿಯಾರ್, ಪಖ್ವಾಜ್‌ನಲ್ಲಿ ರಾಘವೇಂದ್ರ ಮಲ್ಯ ಮತ್ತು ತಾಳದಲ್ಲಿ ಅಶೋಕ್ ಶಿಂಧೆ ಇವರು ಸಹಕರಿಸಿದರು.
ಈ ಎಲ್ಲಾ ಕಲಾವಿದರನ್ನು ಸಮಿತಿಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಆನಂತರ ಶ್ರೀ ಸತ್ಯನಾರಾಯಣ ಮತ್ತು ಪರಿವಾರ ದೇವರಿಗೆ ಮಹಾಮಂಗಳಾರತಿ ನಡೆಯಿತು.
ಬೆಳಗ್ಗೆ ಭಕ್ತಾದಿಗಳಿಗೆ ಫಲಾಹಾರ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಮಿತಿಯ ವಿಶ್ವಸ್ಥರಾದ ಅಭಿಜಿತ್ ನರಸಿಂಹ ಪ್ರಭು ಅವರ ನೇತೃತ್ವದಲ್ಲಿ ಅಲಂಕರಿಸಿದ ಶ್ರೀ ಸತ್ಯನಾರಾಯಣ ದೇವರ ಮಂಟಪವು ಭಕ್ತಾದಿಗಳನ್ನು ಆಕರ್ಷಿಸಿತು. ಸಮಾಜ ಬಾಂಧವರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.