ಮುಂಬಯಿ: ಹಳ್ಳಿಯ ಜನರ ಬೇಸಾಯದ ಆನಂತರದ ಭವಣೆ, ಅಂದಿನ ತೊಡರುಗಳನ್ನು, ಕಷ್ಟ ಕಾರ್ಪಣ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಹಿಂದೆ ಊರಿನ ನಂಬಿಕೆಯ ದಿನಗಳಲ್ಲಿ ಆಷಾಢ ತಿಂಗಳಲ್ಲಿ ಯಾವುದೇ ಪವಿತ್ರ ಕಾರ್ಯಕ್ರಮಗಳು ಜರಗುತ್ತಿರಲಿಲ್ಲ. ಕಾರಣ ಆ ತಿಂಗಳು ಯಾವುದೇ ಕಾರ್ಯಕ್ರಮಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ದೈಹಿಕವಾಗಿ, ಮಾನಸಿಕವಾಗಿಯೂ ಆಷಾಢ ತಿಂಗಳು ಒಂದು ತಟಸ್ಥ ಮಾಸವಾಗಿತ್ತು ಎಂದು ವಸಾಯಿ ತಾಲೂಕು ಮೊಗವೀರ ಸಂಘದ ಅಧ್ಯಕ್ಷ ವಿನೋದ್ ಕುಂದರ್ ಅವರು ಅಭಿಪ್ರಾಯಿಸಿದರು.
ಆ. 5 ರಂದು ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಸಂಸ್ಥೆಯ ಕಚೇರಿಯಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಇವರು, ಬದಲಾದ ಬದುಕಿನಲ್ಲಿ ಅಂದಿನ ಬದುಕಿನ ಆಚಾರ-ವಿಚಾರಗಳು ಕಟ್ಟುನಿಟ್ಟಿನ ಸಂಸ್ಕೃತಿ, ಸಂಪ್ರದಾಯದ ಪಾಲನೆಯ ಬಗ್ಗೆ ನಾವು ಇಂದಿನ ಮಕ್ಕಳಿಗೆ ಇಂತಹ ಕಾರ್ಯಕ್ರಮದ ಮೂಲಕ ತಿಳಿಸುವುದು ಅವಶ್ಯ. ಇಂದಿನ ಕಾರ್ಯಕ್ರಮಕ್ಕೆ ಮಹಿಳೆಯರ ಸಂಘಟಿತ ಯೋಜನೆ ಯಶಸ್ಸನ್ನು ತಂದಿದೆ. ಮುಂದೆಯೂ ಎಲ್ಲರ ಸಹಕಾರ ದೊರೆಯಲಿ ಎಂದು ಹಾರೈಸಿದರು.
ನ್ಯಾಯವಾದಿ ಸಿ. ಎಸ್. ಕರ್ಕೇರ ಅವರು ಆಟಿ ತಿಂಗಳ ಕುಲಕಸುಬು, ಆಟಿ ತಿಂಗಳ ಮೀನುಗಾರಿಕೆಯ ಪ್ರತಿಬಂಧ ಹಾಗೂ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಪ್ರಾರಂಭದಲ್ಲಿ ಮೋಹಿನಿ ಮಲ್ಪೆ ಪ್ರಾರ್ಥನೆಗೈದರು. ಸದಸ್ಯರಾದ ಪ್ರದೀಪ್ ಜೆ. ಪುತ್ರನ್ ಸ್ವಾಗತಿಸಿ, ವಸಾಯಿ, ನಾಯಾYಂವ್, ವಿರಾರ್-ನಲಸೋಪರ ಪರಿಸರದಲ್ಲಿ ಈ ಕಾರ್ಯಕ್ರಮದದ ಪ್ರಥಮ ಆಯೋಜಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯಾಗಿದ್ದು, ತುಳುನಾಡ ಪದ್ಧತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರ ಅಭಿರುಚಿ ಯಶಸ್ಸಿಗೆ ಕಾರಣವಾಗಿದೆ ಎಂದು ನುಡಿದು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಮುರಳಿ ಪುತ್ರನ್, ಮಹಿಳಾ ಕಾರ್ಯಾಧ್ಯಕ್ಷೆ ಇಂದಿರಾ ಸಾಲ್ಯಾನ್, ಗೌರವ ಕೋಶಾಧಿಕಾರಿ ರಾಜ್ ಕಾಂಚನ್, ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷ ಸುಧೀರ್ ಸಾಲ್ಯಾನ್ ಉಪಸ್ಥಿತರಿದ್ದರು. ವಿವಿಧ ರೀತಿಯ ಖಾದ್ಯ, ತಿಂಡಿಗಳನ್ನು ತಯಾರಿಸಿ ಮಹಿಳಾ ಸದಸ್ಯೆಯರು ಪ್ರದರ್ಶಿಸಿದರು. ಪ್ರಾರಂಭದಲ್ಲಿ ಸದಸ್ಯರೆಲ್ಲರು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಉದ್ಯಾವರ್