ನಂಜನಗೂಡು: ನಾನು ಇನ್ನು ಕ್ಷೇತ್ರದಲ್ಲಿ ಮತಯಾಚನೆಗೆ ಬರುವುದಿಲ್ಲ. ಪುತ್ರ ಯತೀಂದ್ರರೇ ತಮ್ಮ ಪರವಾಗಿ ಮಾತಯಾಚಿಸುತ್ತಾರೆ. ವರುಣಾ ಜನತೆ ಈ ಹಿಂದೆ ತಮಗೆ ಆಶೀರ್ವಾದ ನೀಡಿದ್ದರಿಂದಲೇ ವಿಪಕ್ಷದ ನಾಯಕ, ಮುಖ್ಯಮಂತ್ರಿ ಸಹಿತ ಎಲ್ಲ ಅಧಿಕಾರವನ್ನು ಅನುಭವಿಸುವಂತಾಯಿತು.
ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ತಾವು ರಾಜ್ಯಾದ್ಯಂತ ಪ್ರವಾಸ ಮಾಡಬೇಕಿರುವುದರಿಂದ ನೀವೇ ನನ್ನ ಪರವಾಗಿ ಕೆಲಸ ಮಾಡಿ ಮತ ನೀಡಿ ಗೆಲ್ಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ತಾಲೂಕಿನ ಬಿಳುಗಲಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಪಿಲಾ ಸೇತುವೆ ಉದ್ಘಾಟನೆ ಹಾಗೂ ಡಾ| ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷ ಅಳೆದು ತೂಗಿ ನನ್ನನ್ನು ಇಲ್ಲಿ ನಿಲ್ಲಿಸಿದೆ. ಈಗ ನೀವು ನಿಲ್ಲು ಎನ್ನುತ್ತೀರಾ, ಬೇಡ ಎನ್ನುತ್ತಿರಾ? ನೀವು ಹೇಳಿದ ಹಾಗೆ ಎಂದು ಸಿದ್ದರಾಮಯ್ಯ ನುಡಿದಾಗ ಸಭೆಯಿಂದ “ನೀವೇ ನಿಲ್ಲಿ’ ಎಂಬ ಒಕ್ಕೊರಲಿನ ಧ್ವನಿ ಕೇಳಿ ಬಂದಿತು. ಹಾಗಾದರೆ ಮತಯಾಚನೆಯಲ್ಲಿ ಯತೀಂದ್ರರಿಗೆ ಮಾಜಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಹಾಗೂ ಡಾ| ತಿಮ್ಮಯ್ಯ ಸಹಿತ ಕೈ ಪಕ್ಷದ ನೂರಾರು ಮುಖಂಡರು ಸಾಥ್ ನೀಡುತ್ತಾರೆಂದು ಸಿದ್ದರಾಮಯ್ಯ ತಿಳಿಸಿದರು.
ಹಣದ ಚೀಲದೊಂದಿಗೆ ಬಿಜೆಪಿ ಕಣಕ್ಕಿಳಿಯಲಿದೆ
ನಂಜನಗೂಡು -ಸಮಾನತೆ ಬೇಡವಾದ ಬಿಜೆಪಿ ಭ್ರಷ್ಟಾಚಾರದ ಹಣದ ತೈಲಿಯೊಂದಿಗೆ ಈ ಬಾರಿ ಚುನಾವಣಾ ಕಣಕ್ಕಿಳಿಯಲಿದೆ. ಮತದಾರರೇ ಜಾಗೃತರಾಗಿರಿ ಎಂದು ತಿಳಿಸಿದರು.