Advertisement

ಸಿದ್ದರಾಮಯ್ಯ ಓಟಕ್ಕೆ ವಿ. ಸೋಮಣ್ಣ ತಡೆ?

01:31 PM May 08, 2023 | Team Udayavani |

ಮೈಸೂರು: ವರುಣ ವಿಧಾನಸಭಾ ಕ್ಷೇತ್ರ ಇದೇ ಮೊದಲ ಬಾರಿಗೆ ದೇಶದ ಗಮನ ಸೆಳೆದಿದೆ. ಮೈಸೂರು, ನಂಜನಗೂಡು, ತಿ.ನರಸೀಪುರ ತಾಲೂಕುಗಳ ಕೆಲವು ಪ್ರದೇಶಗಳನ್ನು ಒಳಗೊಂಡ ಈ ಕ್ಷೇತದಲ್ಲಿ ಸಿದ್ದರಾಮಯ್ಯ 2008, 2013ರಲ್ಲಿ ಗೆದ್ದಿದ್ದಾರೆ.

Advertisement

ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸಲು ನಿರ್ಧರಿಸಿದಾಗ ನಿರಾಳರಾಗಿದ್ದರು. ಆದರೆ, ಬಿಜೆಪಿ ವರಿಷ್ಠರು ಯಾವಾಗ ವಸತಿ ಸಚಿವ ವಿ.ಸೋಮಣ್ಣ ವರುಣದಲ್ಲಿ ತನ್ನ ಅಭ್ಯರ್ಥಿ ಎಂದು ಘೋ ಷಿಸಿತೋ ಸಿದ್ದರಾಮಯ್ಯ ಅವರಿಗೆ ಅದು ಮೊದಲ ಶಾಕ್‌. ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ತಂತ್ರ ಢಾಳಾಗಿ ಗೋಚರಿಸಿತ್ತು. ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸೋಮಣ್ಣ ಇದೇ ಸಮಾಜಕ್ಕೆ ಸೇರಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ಕುರುಬ ಸಮಾಜದವರು.

ವರುಣಾ ಕ್ಷೇತ್ರವನ್ನು ಬಿಜೆಪಿ ಜಿದ್ದಿಗೆ ತೆಗೆದುಕೊಂಡಿದೆ. ಜೆಡಿಎಸ್‌ ಪರಿಶಿಷ್ಟ ಜಾತಿಯ ಡಾ.ಭಾರತಿ ಶಂಕರ್‌ ಅವರನ್ನು ಕಣಕ್ಕಿಳಿಸಿದೆ. ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣ ಮೂರ್ತಿ ಅವರೇ ಇಲ್ಲಿ ಕಣಕ್ಕಿಳಿದಿದ್ದಾರೆ. ಈ ಪಕ್ಷಗಳ ನಡೆಯಿಂದ ತಮಗೆ ಲಾಭ ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಇಲ್ಲಿ ಬಿಜೆಪಿ-ಜೆಡಿಎಸ್‌ ಒಳಒಪ್ಪಂದವಾಗಿದೆ ಎಂಬುದು ಸಿದ್ದರಾಮಯ್ಯ ಅವರ ಆರೋಪ. ಸಚಿವ ಸೋಮಣ್ಣ ಅವರಿಗೆ ಈ ಕ್ಷೇತ್ರ ಹೊಸದು. ಇಲ್ಲಿನ ಮತದಾರರ ಪರಿಚಯವೂ ಅವರಿಗೆ ಇಲ್ಲ. ಆದರೆ, ಅವರು ತಮ್ಮ ನಡೆ, ನುಡಿಗಳಿಂದಲೇ ಇಲ್ಲಿನ ಮತದಾರರಿಗೆ ಬಹಳ ವರ್ಷಗಳಿಂದ ಪರಿಚಯ ಎಂಬಂತೆ ಸರಳತನದಿಂದ ಬೆರೆಯುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಹೊರಗಿನವರು ಹಾಗೂ ಸ್ಥಳೀ ಯರು ಎಂಬ ಚರ್ಚೆ ಬಿಸಿಲಿನ ತಾಪಗಿಂತ ಜೋರಾಗಿದೆ. ನಾನು ಮನೆ ಮಗ. ಬಿಜೆಪಿಯ ಸೋಮಣ್ಣ ಬೆಂಗಳೂರಿನವರು. ಇದು ಮನೆಮಗ ಹಾಗೂ ಹರಕೆಯ ಕುರಿಯ ನಡುವಿನ ಸ್ಪರ್ಧೆ. ಇದು ನನ್ನ ಕೊನೆಯ ಚುನಾವಣೆ. ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಗೆಲ್ಲಿಸಿ ಅಂತ ಸಿದ್ದರಾಮಯ್ಯ ಭಾವನಾತ್ಮಕ ದಾಳ ಉರುಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಮಣ್ಣ ಅವರನ್ನು ಗೆಲ್ಲಿಸಿ. ಮುಂದೆ ಅವರನ್ನು ದೊಡ್ಡ ವ್ಯಕ್ತಿ ಮಾಡುತ್ತೇವೆ ಎಂದು ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡಿರುವುದು ಕ್ಷೇತ್ರದಲ್ಲಿ ಹಾಗೂ ಬಿಜೆಪಿಯಲ್ಲೂ ಹೆಚ್ಚು ಚರ್ಚೆಗೆ ದಾರಿ ಮಾಡಿದೆ. ಡಾ.ಯತೀಂದ್ರ ಅವರು, ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ ಇದು. ಚುನಾವಣಾ ರಾಜಕಾರಣದಿಂದ ಗೌರವ ಯುತ ನಿವೃತ್ತಿಗೆ ಅವಕಾಶ ನೀಡಿ ಎಂದು ಕೈಮುಗಿಯುತ್ತಿದ್ದಾರೆ.

ಜೆಡಿಎಸ್‌ ತನ್ನ ವೋಟನ್ನು ತಾನೇ ಹಾಕಿಸಿಕೊಂಡರೆ ಸಿದ್ದರಾಮಯ್ಯ ಸೇಫ್. ಜೆಡಿಎಸ್‌ ವೋಟು ಬಿಜೆಪಿಗೆ ವರ್ಗವಾದರೆ ಸಿದ್ದರಾಮಯ್ಯ ಗೆಲುವಿನ ದಾರಿಗೆ ಅಡ್ಡಿಯಾಗಲಿದೆ. ಕಾಂಗ್ರೆಸ್ಸಿನ ಬಣ ರಾಜಕಾರಣದಿಂದ ಒಳೇಟು ಬಿದ್ದರೆ ಸಿದ್ದರಾಮಯ್ಯ ಅವರಿಗೆ ಕಷ್ಟವಾಗುತ್ತದೆ. ಕಣದಲ್ಲಿ 15 ಅಭ್ಯರ್ಥಿಗಳಿದ್ದಾರೆ.

Advertisement

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next