ಹೊಸದಿಲ್ಲಿ : ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಹಿಂಸಾಚಾರ ಘಟನೆಯ ಬಳಿಕ ರೈತರ ಪರ ಬಿಜೆಪಿ ಯುವ ನಾಯಕ ವರುಣ್ ಗಾಂಧಿ ಮತ್ತೆ ಧ್ವನಿ ಎತ್ತಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1980ರಲ್ಲಿ ರೈತರ ಪರವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ವಿರುದ್ಧ ಗುಡುಗಿದ್ದ ವಿಡಿಯೋ ತುಣುಕೊಂದನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿಗೆ ಇನ್ನೊಂದು ಪರೋಕ್ಷ ಶಾಕ್ ನೀಡಿದ್ದಾರೆ.
ಟ್ವೀಟ್ ಮಾಡಿರುವ ವರುಣ್ ಗಾಂಧಿ,ದೊಡ್ಡ ಹೃದಯದ ನಾಯಕನಿಂದ ಬುದ್ಧಿವಂತಿಕೆಯ ಮಾತುಗಳು ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
ಸರಕಾರ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ರೈತರನ್ನು ದಮನ ಮಾಡಿದರೆ,ನಾವು ರೈತರೊಂದಿಗೆ ಹೋರಾಟಕ್ಕೆ ಸೇರಲು ಹಿಂಜರಿಯುವುದಿಲ್ಲ ಎಂದು ವಾಜಪೇಯಿ ಅವರು ರೈತರ ಪರವಾಗಿ ಭಾಷಣ ಮಾಡಿದ್ದರು.
ಲಖೀಂಪುರ ಖೇರಿಯಲ್ಲಿ ಹಿಂಸಾಚಾರ ಘಟನೆಯ ವಿಚಾರದಲ್ಲಿ ಆರೋಪಿಗಳ ವಿರುದ್ಧ ಧ್ವನಿ ಎತ್ತಿದ್ದ ಪಿಲಿಭಿತ್ ಕ್ಷೇತ್ರದ ಸಂಸದರಾಗಿರುವ ವರುಣ್ ಗಾಂಧಿ ಅವರನ್ನು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿತ್ತು.
ಲಖೀಂಪುರ ಹಿಂಸಾಚಾರವನ್ನು ಹಿಂದೂ ಮತ್ತು ಸಿಖ್ ಘರ್ಷಣೆಯನ್ನಾಗಿ ಪರಿವರ್ತಿಸಲು ಸಂಚು ಹೂಡಲಾಗಿತ್ತು ಎಂದು ವರುಣ್ ಗಾಂಧಿ ಹೇಳಿಕೆ ನೀಡಿದ್ದರು.