Advertisement

ಒಂದು ಕಾಲದ ಫೈರ್ ಬ್ರ್ಯಾಂಡ್ !: ಬಿಜೆಪಿ ತೊರೆಯುವರೇ ವರುಣ್ ಗಾಂಧಿ?

05:17 PM Nov 12, 2021 | Team Udayavani |

ಲಕ್ನೋ : ಬಿಜೆಪಿಯಲ್ಲಿ ಒಂದು ಕಾಲದ ಫೈರ್ ಬ್ರ್ಯಾಂಡ್ ನಾಯಕನೆನಿಸಿಕೊಂಡ ವರುಣ್ ಗಾಂಧಿ ಅವರ ಇತ್ತೀಚಿಗಿನ ಹೇಳಿಕೆಗಳು ಮತ್ತು ಚಟುವಟಿಕೆಗಳನ್ನು ಗಮನಿಸಿದರೆ ಅವರು ಪಕ್ಷ ತೊರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Advertisement

ವರುಣ್ ಅವರ ಇತ್ತೀಚಿನ ಹೇಳಿಕೆಗಳು ಮತ್ತು ನಡವಳಿಕೆ ಬಿಜೆಪಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಬಿಜೆಪಿ ನಾಯಕರು, ಕಾರ್ಯಕರ್ತರು ಹೇಳುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್ ವಿರುದ್ಧ ಅವರ ಇತ್ತೀಚಿನ ಟ್ವೀಟ್ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದ್ದು, ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಆದರೆ ಆಶ್ಚರ್ಯಕರವಾಗಿ ಬಿಜೆಪಿ ಕಾರ್ಯಕರ್ತರ ಬೆಂಬಲವನ್ನೂ ಗಳಿಸಿದೆ.

2014 ರಲ್ಲಿ ವರುಣ್ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ಸುಲ್ತಾನ್‌ಪುರದ ಸ್ಥಳೀಯ ಬಿಜೆಪಿ ನಾಯಕರೊಬ್ಬರು, “ಕಂಗನಾ ರಣಾವತ್‌ ಅವರ ಹಿಂದಿನ ಹೇಳಿಕೆಗಳು ಮತ್ತು ನಡವಳಿಕೆಯಿಂದಾಗಿ ನಮಗೆ ದೊಡ್ಡ ಮುಜುಗರ ತಂದಿದೆ. ಆಕೆಯ ಸ್ವಾತಂತ್ರ್ಯ ಹೇಳಿಕೆಯನ್ನು ವರುಣ್ ಗಾಂಧಿ ತಿರಸ್ಕರಿಸಿದ್ದು ಸರಿಯಾಗಿಯೇ ಇದೆ. ಪೂರ್ಣವಾಗಿ ಅದನ್ನ ಘೋಷಿಸಲು ನಮಗೆ ಸಾಧ್ಯವಾಗದಿದ್ದರೂ ನಾವು ವರುಣ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದಿದ್ದಾರೆ.

ವರುಣ್, ಈ ಹಿಂದೆ, ಧರಣಿ ನಿರತ ರೈತರನ್ನು ಬೆಂಬಲಿಸಿ ಮಾತನಾಡಿದ್ದರು ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರೈತರನ್ನು ಬೆಂಬಲಿಸಿ ಮಾಡಿದ ಭಾಷಣದ ಕಿರು ತುಣುಕನ್ನು ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದರು.

Advertisement

ಕಳೆದ ತಿಂಗಳು ಲಖಿಂಪುರ ಖೇರಿ ಹಿಂಸಾಚಾರದ ಬಳಿಕ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಗ ಆಶಿಶ್ ಮಿಶ್ರಾ ಅವರ ವಿರುದ್ಧ ನಿಲುವು ತೆಗೆದುಕೊಂಡು ವರುಣ್ ಗಾಂಧಿ ಹೇಳಿಕೆ ನೀಡಿದ್ದರು.

ವರುಣ್ ಹೇಳಿಕೆಗಳನ್ನು ಬಿಜೆಪಿ ಇದುವರೆಗೆ ಅಧಿಕೃತವಾಗಿ ವಿರೋಧಿಸಿಲ್ಲ ಆದರೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅವರನ್ನು ಕೈಬಿಡುವ ಮೂಲಕ ಪಕ್ಷವು ತನ್ನ ಅಸಮಾಧಾನವನ್ನು ಈಗಾಗಲೇ ಹೊರಹಾಕಿದೆ.

ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ ವರುಣ್ ಗಾಂಧಿ ಅವರು ಈಗಾಗಲೇ ಅಂತಹ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿ ನಿಂತಿರುವ ಉತ್ತರಪ್ರದೇಶದ ಬಿಜೆಪಿ, ವರುಣ್ ಅವರ ಮುಂದಿನ ನಡೆಗಾಗಿ ಕಾಯುತ್ತಿದೆ ಎನ್ನಲಾಗಿದೆ.

41 ರ ಹರೆಯದ ವರುಣ್ ಗಾಂಧಿ ಪಿಲಿಭಿತ್ ಕ್ಷೇತ್ರದಿಂದ ಲೋಕಸಭೆಗೆ ಮೂರನೇ ಅವಧಿಯ ಸಂಸತ್ ಸದಸ್ಯರಾಗಿದ್ದಾರೆ. 2012 ರಲ್ಲಿ ರಾಜನಾಥ್ ಸಿಂಗ್ ಅವರು ಅಧ್ಯಕ್ಷರಾಗಿದ್ದ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು.

2009 ರ ಸಾರ್ವತ್ರಿಕ ಚುನಾವಣೆಯಲ್ಲಿ, ವರುಣ್ ಗಾಂಧಿಯವರು ಅವರ ತಾಯಿ ಮನೇಕಾ ಗಾಂಧಿ ಪ್ರತಿನಿಧಿಸುತ್ತಿದ್ದ ಪಿಲಿಭಿತ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದು ಭಾರಿ ಮತಗಳ ಅಂತರದಿಂದ ಜಯ ಪಡೆಯುವ ಮೂಲಕ ಬಿಜೆಪಿಯ ಭವಿಷ್ಯದ ನಾಯಕನೆನಿಸಿಕೊಂಡಿದ್ದರು.

ಪಿಲಿಭಿತ್‌ನ ದಾಲ್‌ಚಂದ್ ಮೊಹಲ್ಲಾ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಮುಸ್ಲಿಮರ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು, ಅವರು ಆ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು. ಆ ಭಾಷಣದ ಬಳಿಕ ಅವರು ಫೈರ್ ಬ್ರ್ಯಾಂಡ್ ನಾಯಕ ಎನಿಸಿಕೊಂಡಿದ್ದರು. ಬಿಜೆಪಿ ಪರವಾಗಿ ದೇಶದ ಹಲವು ಕಡೆ ಚುನಾವಣಾ ಪ್ರಾಚಾರವನ್ನೂ ಕೈಗೊಂಡಿದ್ದರು.

ವರುಣ್ ಅವರ ತಾಯಿ ಮನೇಕಾ ಗಾಂಧಿ ಅವರು ಜನತಾದಳ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಪ್ರಸಕ್ತ ಅವರು ಸುಲ್ತಾನ್ ಪುರ ಕ್ಷೇತ್ರದ ಬಿಜೆಪಿ ಸಂಸದೆ.

Advertisement

Udayavani is now on Telegram. Click here to join our channel and stay updated with the latest news.

Next