ಬೆಂಗಳೂರು: ಹಣದಾಸೆಗೆ ಪರಿಚಯಸ್ಥೆ ಸುನೀತಾ ರಾಮಪ್ರಸಾದ್ ಎಂಬಾಕೆಯನ್ನು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸರ್ಜಾಪುರದ ಕಾಚಮಾರನಹಳ್ಳಿಯ ಕಿರಣ್‌ಕುಮಾರ್ (35), ಗೋವಿಂದ ಪುರದ ಶೇಖ್ ಇಮ್ರಾನ್ (23) ಹಾಗೂ ವೆಂಕಟೇಶ್ (52) ಬಂಧಿತರು.
ಆರೋಪಿಗಳು ಏ.1ರಂದು ಮಲ್ಲೇಶ್ವರದ ನಿವಾಸಿ ಸುನೀತಾ ರಾಮ್ ಪ್ರಸಾದ್ ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.
ಏ.5ರಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ನಂತರ ತನಿಖೆ ನಡೆಸಿ ಗೋವಿಂದಪುರ ನಿವಾಸಿಗಳಾದ ಇಮ್ರಾನ್(32) ಮತ್ತು ವೆಂಕಟೇಶ್ (30) ಎಂಬುವವರನ್ನು ಬಂಧಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಕಿರಣ್ (25) ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳ ಪೈಕಿ ಕಿರಣ್ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ. ಈತನ ಪತ್ನಿ ಶಿಕ್ಷಕಿಯಾಗಿದ್ದು, ವರ್ತೂರಿನ ಕಾಚಮಾರನಹಳ್ಳಿಯ ಅಪಾರ್ಟ್‌ಮೆಂಟ್‌ನ ಒಂದನೇ ಮಹಡಿಯಲ್ಲಿ ದಂಪತಿ ವಾಸವಾಗಿದ್ದರು. ಇಮ್ರಾನ್ ಆಟೋ ಚಾಲಕನಾಗಿದ್ದು, ವೆಂಕಟೇಶ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಈ ಹಿಂದೆ ಕಿರಣ್ ಕೂಡ ಗೋವಿಂದಪುರದಲ್ಲಿ ವಾಸವಾಗಿದ್ದರಿಂದ ಮೂವರು ಪರಿಚಯಸ್ಥರಾಗಿದ್ದರು. ಸುನೀತಾ ರಾಮ್‌ಪ್ರಸಾದ್ ಸಹೋದರರು ವಿದೇಶದಲ್ಲಿದ್ದು, ತಂದೆ ಮೈಸೂರಿ ನಲ್ಲಿದ್ದಾರೆ. ಹೀಗಾಗಿ, ಮಲ್ಲೇಶ್ವರಂನಲ್ಲಿ ಸಂಬಂಧಿಯೊಬ್ಬರ ಜತೆ ವಾಸವಾಗಿದ್ದರು. ಜತೆಗೆ ಸಣ್ಣ-ಪುಟ್ಟ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು.
ಈ ಮಧ್ಯೆ ಕಿರಣ್ ಪರಿಚಯವಾಗಿದೆ. ಅಲ್ಲದೆ, ಸುನೀತಾಗೆ ನಡೆಯಲು ಕಷ್ಟವಾಗುತ್ತಿದ್ದರಿಂದ ಎಲ್ಲಿಗಾದರೂ ಹೋಗಲು ಕಿರಣ್, ಇಮ್ರಾನ್ ಹಾಗೂ ವೆಂಕಟೇಶ್ ಸಹಾಯ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಸುನಿತಾ ಬಳಿ ಹೆಚ್ಚಿನ ಹಣ ಇರಬಹುದೆಂದು ಆರೋಪಿ ಗಳು ತಿಳಿದುಕೊಂಡು, ಕಿರಣ್ ವಾಸವಾಗಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲ್ಯಾಟನ್ನು ಬಾಡಿಗೆ ಪಡೆದುಕೊಂಡು ಸುನೀತಾರನ್ನು ಕರೆದೊಯ್ದಿದ್ದ. ಬಳಿಕ ಆಕೆಗೆ ಹಣ ನೀಡುವಂತೆ ಮೂವರು ದುಂಬಾಲು ಬಿದ್ದಿದ್ದಾರೆ. ಆದರೆ, ಆಕೆ ಅಷ್ಟೊಂದು ಹಣವಿಲ್ಲ ಎಂದು ಹೇಳಿದಾಗ, ಕೊಲೆಗೈದಿ ದ್ದರು ಎಂದು ಪೊಲೀಸರು ಹೇಳಿದರು.