ಕೋಲಾರ: ತಮಗೂ ಸಂಸದ ಮುನಿಸ್ವಾಮಿ ನಡುವೆ ಯಾವುದೇ ವೈಮನಸ್ಯವಿಲ್ಲ ಎಂಬುದನ್ನು ಮುನಿಸ್ವಾಮಿಗೆ ಮುತ್ತು ಕೊಡುವ ಮೂಲಕ ಮಾಜಿ ಸಚಿವ ವರ್ತೂರು ಪ್ರಕಾಶ್ ನಿರೂಪಿಸಲು ಪ್ರಯತ್ನಿಸಿದರು.
ನಗರದ ಕೋಲಾರಮ್ಮ ದೇಗುಲದ ಆವರಣದಲ್ಲಿ ಭಾನುವಾರ ಹೊಸ ವರ್ಷದ ಅಂಗವಾಗಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಡೆದ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಸಂಸದರೂ ಗೈರು ಹಾಜರಾಗಿದ್ದಕ್ಕೆ ವೈಮನಸ್ಯ ಇರುವ ಬಗ್ಗೆ ವಿರೋಧಿಗಳು ಮಾತನಾಡುತ್ತಿದ್ದಾರೆ. ಆದರೆ, ನಮ್ಮ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಲ್ಲರೂ ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.
ಸಂಸದ ಮುನಿಸ್ವಾಮಿ ಮಾತನಾಡಿ, ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ, ಮಾಲೂರಿನಲ್ಲಿ ಗೊಂದಲ ಗಳನ್ನು ಸೃಷ್ಟಿಸುತ್ತಿರುವವರು ಶಾಸಕ ಕೆ.ವೈ.ನಂಜೇಗೌಡ ರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಮಾಲೂರು ಕ್ಷೇತ್ರದ ಸಮಾಜ ಸೇವಕ ಹೂಡಿ ವಿಜಯ್‌ಕುಮಾರ್ ವಿರುದ್ಧ ಆರೋಪ ಮಾಡಿದರು. ಮಾಲೂರಿನಲ್ಲಿ ಶಾಸಕ ನಂಜೇಗೌಡರ ಬಗ್ಗೆ ನಾನು, ಪಕ್ಷದ ಜಿಲ್ಲಾಧ್ಯಕ್ಷರು ಅಥವಾ ಮಾಜಿ ಶಾಸಕರು ಮಾತನಾಡಬೇಕು ಅಷ್ಟೇ ಬೇರೆ ಯಾರು ಮಾತನಾಡುವುದಿಲ್ಲ. ಈಗ ಗೊಂದಲ ಸೃಷ್ಟಿ ಮಾಡುತ್ತಿರುವವರು ರಾತ್ರಿ ಹೊತ್ತು ಮಾತ್ರ ಶಾಸಕರೊಂದಿಗೆ ಮಾತನಾಡಿಕೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಅನುಮಾನ:ಬಿಜೆಪಿಯಲ್ಲಿ ಬೇಕಾದಷ್ಟು ಜನರು ಆಕಾಂಕ್ಷಿಗಳು ಇದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಇರುವ ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದ್ದು, ಮಾಲೂರು ಶಾಸಕರು ತಮ್ಮ ಪುತ್ರನಿಂದ ಅರ್ಜಿ ಹಾಕಿಸಿದ್ದಾರೆ ಎಂದು ಲೇವಡಿ ಮಾಡಿದ ಅವರು, ನಮ್ಮಲ್ಲಿ ಗೊಂದಲಗಳು ಇಲ್ಲ. ಇರುವುದು ಕಾಂಗ್ರೆಸ್ ಅಥವಾ ಇತರೆ ಪಕ್ಷಗಳಲ್ಲಿ ಎಂದು ದೂರಿದರು.
ಬಿಜೆಪಿ ಪಕ್ಷಕ್ಕೆ ಜನರು ಮತ ಹಾಕಿ ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯಿಂದಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿದ್ದು, ಕೆಲಸ ಮಾಡುವವರನ್ನು ಗುರುತಿಸಲಾಗುತ್ತದೆ ಶೋ ಮ್ಯಾನ್‌ಗಳನ್ನು ಅಲ್ಲ ಎಂದು ಮತ್ತೂಮ್ಮೆ ಹೂಡಿ ವಿಜಯ್‌ಕುಮಾರ್‌ಗೆ ತಿರುಗೇಟು ನೀಡಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಕೋಲಾರ, ಬಂಗಾರಪೇಟೆ, ಮಾಲೂರು, ಕೆಜಿಎಫ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಶಾಸಕರಾಗಲಿದ್ದಾರೆ. ನಮ್ಮದೇನಿದ್ದರೂ ಗಟ್ಟಿ ಬಂಧನ್, ಬಿಜೆಪಿ ಬಂಧನ್ ಅಷ್ಟೇ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಟೀಂಗಳು ಬೇರೆ ಇಲ್ಲ. ಎಲ್ಲರೂ ಒಂದೇ ಎಂದು ಪ್ರತಿಪಾದಿಸಿದರು.