Advertisement

ವರ್ತೂರು ಕೆರೆಯತ್ತ ಎನ್‌ಜಿಟಿ ಚಿತ್ತ

12:13 PM Jan 30, 2018 | Team Udayavani |

ಬೆಂಗಳೂರು: ಬೆಳ್ಳಂದೂರು ಕೆರೆ ನಂತರ ಈಗ ವರ್ತೂರು ಕೆರೆಯ ಮೇಲೆ ಕಣ್ಣು ನೆಟ್ಟಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), “ವರ್ತೂರು ಕೆರೆ ಅಭಿವೃದ್ಧಿಗಾಗಿ ನಿಗದಿತ ಅವಧಿಯಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ’ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Advertisement

ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಸೋಮವಾರ ಮಧ್ಯಂತರ ಆದೇಶ ನೀಡಿರುವ ಹಸಿರು ನ್ಯಾಯಮಂಡಳಿ, ಇದೇ ಮೊದಲ ಬಾರಿಗೆ ವರ್ತೂರು ಮತ್ತು ಅಗರ ಕೆರೆಗಳ ಅಭಿವೃದ್ಧಿ ಬಗ್ಗೆ ಉಲ್ಲೇಖೀಸಿದೆ. ಅಷ್ಟೇ ಅಲ್ಲದೆ, ನಿಗದಿತ ಅವಧಿಯಲ್ಲಿ ಈ ಎರಡೂ ಕೆರೆಗಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದೆ.

ಈ ಮೊದಲು ಪ್ರತಿ ವಿಚಾರಣೆ ವೇಳೆ ಬೆಳ್ಳಂದೂರು ಕೆರೆ ಬಗ್ಗೆ ಹೆಚ್ಚು ಪ್ರಸ್ತಾಪ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕೈಗೆತ್ತಿಕೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುತ್ತಿತ್ತು. ಆದರೆ, ಮತ್ತೂಂದೆಡೆ 445 ಎಕರೆಯ ವರ್ತೂರು ಕೆರೆ ದಿನೇ ದಿನೆ ಹಾಳಾಗುತ್ತಿದೆ. ಹೀಗಿರುವಾಗ, ವರ್ತೂರು ಕೆರೆಯನ್ನೂ ಪ್ರಸ್ತಾಪಿಸಿರುವುದು ಸ್ವಾಗತಾರ್ಹ ಎಂದು ವರ್ತೂರು ಕೆರೆ ವಾರ್ಡನ್‌ ಮತ್ತು ವೈಟ್‌ಫೀಲ್ಡ್‌ ರೈಸಿಂಗ್‌ ಸದಸ್ಯ ಜಗದೀಶ್‌ ರೆಡ್ಡಿ ತಿಳಿಸಿದ್ದಾರೆ. 

ವರ್ತೂರು ಕೆರೆಯೇ ಹೆಚ್ಚು ಮಲಿನ?: 2017ರ ಜುಲೈನಿಂದ ಈಚೆಗೆ ಬೆಳ್ಳಂದೂರು ಕೆರೆಗಿಂತ ವರ್ತೂರು ಕೆರೆ ಹೆಚ್ಚು ಮಲಿನಗೊಳ್ಳುತ್ತಿದೆ. ಬೆಳ್ಳಂದೂರು ಕೆರೆಗೆ ಸೇರುವ ರಾಸಾಯನಿಕಗಳು, ಕೊಳಚೆ ನೀರನ್ನು ವರ್ತೂರು ಕೆರೆಯತ್ತ ತಿರುಗಿಸಿರುವುದೇ ಇದಕ್ಕೆ ಕಾರಣ. ಆದ್ದರಿಂದ ವೈಟ್‌ಫೀಲ್ಡ್‌ ನಿವಾಸಿಗಳು ಪ್ರತ್ಯೇಕ ಎನ್‌ಜಿಟಿಗೆ ಅರ್ಜಿ ಸಲ್ಲಿಸಿದ್ದಾರೆ. ಫೆ. 2ರಂದು ಅರ್ಜಿ ವಿಚಾರಣೆಗೆ ಬರಲಿದೆ.

ಈ ಸಂದರ್ಭದಲ್ಲಿ ವರ್ತೂರು ಕೆರೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಜಗದೀಶ್‌ ಹೇಳಿದ್ದಾರೆ. ಸರ್ಕಾರವೇ ರಚಿಸಿದ ತಜ್ಞರ ಸಮಿತಿ ಕೂಡ ಈ ಎರಡೂ ಕೆರೆಗಳ ಅಭಿವೃದ್ಧಿಗೆ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು.

Advertisement

ಕೇವಲ 99 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್‌ ನೀಡುವುದರಿಂದ ಹಾಗೂ ಕೊಳಚೆನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದರಿಂದ ಉಪಯೋಗ ಆಗುವುದಿಲ್ಲ. ಬೆಳ್ಳಂದೂರು ಮತ್ತು ವರ್ತೂರು ಜಲಾನಯನ ಪ್ರದೇಶದಲ್ಲಿ 96 ಕೆರೆಗಳು ಬರುತ್ತವೆ. ಅವೆಲ್ಲವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಮತ್ತೋರ್ವ ಸದಸ್ಯ ಈಳಂಗೋವನ್‌ ತಿಳಿಸುತ್ತಾರೆ. 

ಸಮಿತಿ ಶಿಫಾರಸುಗಳೇನು?: ತಜ್ಞರ ಸಮಿತಿಯು ಕೆರೆ ಒತ್ತುವರಿ ತೆರವುಗೊಳಿಸಬೇಕು, ಸುತ್ತಲೂ ಫೆನ್ಸಿಂಗ್‌ ಹಾಕಬೇಕು, ಜೌಗು ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಫೆನ್ಸಿಂಗ್‌ ಹಾಕಬೇಕು ಎನ್ನುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿದೆ.

ಹಾಗೇ ಕೆರೆಗಳಲ್ಲಿ ತೇಲುವ ಒಣ ಹುಲ್ಲು “ಮ್ಯಾಕ್ರೋಫಿಟ್‌’ಗಳ ಜೀವಕ್ರಮದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅಧ್ಯಯನ ಕೈಗೆತ್ತಿಕೊಳ್ಳಬೇಕು ಎಂದು ಎನ್‌ಜಿಟಿ ಹೇಳಿದೆ. ಮ್ಯಾಕ್ರೋಫಿಟ್‌ಗಳ ಬೆಳವಣಿಗೆ, ಅದರ ನಿರ್ಮೂಲನೆ ಸೇರಿದಂತೆ ಸಮಗ್ರ ಜೀವಕ್ರಮ ಕುರಿತು ಅಧ್ಯಯನ ನಡೆಸಬೇಕು ಎಂದು ನ್ಯಾಯಮಂಡಳಿ ಸೂಚಿಸಿದೆ. 

ಮಾಲಿನ್ಯ ನಿಯಂತ್ರಣ ಮಂಡಳಿಗೂ ನೋಟಿಸ್‌: ಬೆಳ್ಳಂದೂರು ಕೆರೆಗೆ ಯಾವುದೇ ಕಾರಣಕ್ಕೂ ಕೊಳಚೆನೀರು ಬಿಡದಿರಲು ಹಾಗೂ ಲಭ್ಯವಿರುವ ಜಾಗದಲ್ಲೇ ಕೊಳಚೆನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳನ್ನು ಸ್ಥಾಪಿಸುವ ಸಂಬಂಧ ಕೆರೆ ಸುತ್ತಲಿನ 99 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್‌ ನೀಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚನೆ ನೀಡಿದೆ. 

ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸೋಮವಾರ ಮಧ್ಯಂತರ ತೀರ್ಪು ನೀಡಿತು. ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಸಿಟಿಜನ್‌ ಆ್ಯಕ್ಷನ್‌ ಫೋರಂ ಕೆರೆ ರಕ್ಷಣೆಗಾಗಿ ಎನ್‌ಜಿಟಿ ಮೊರೆ ಹೋಗಿದ್ದವು. 

ಅದರಂತೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಗೆ ಕೊಳಚೆನೀರು ಬಿಡುಗಡೆ ಮಾಡದಂತೆ ಎಲ್ಲ 99 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್‌ ನೀಡಬೇಕು. ಹಾಗೂ ಲಭ್ಯವಿರುವ ಜಾಗಗಳಲ್ಲೇ ಕಟ್ಟಡಗಳಿಗೆ ಯಾವುದೇ ಧಕ್ಕೆ ಆಗದಂತೆ ಮಾಡ್ಯುಲರ್‌ ಎಸ್‌ಟಿಪಿ (ಕೊಳಚೆನೀರು ಸಂಸ್ಕರಣಾ ಘಟಕ)ಗಳನ್ನು ನಿರ್ಮಿಸಲು ನೋಟಿಸ್‌ ಜಾರಿ ಮಾಡಬೇಕು ಎಂದು ಸೂಚಿಸಿತು. 

ಅಲ್ಲದೆ, ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳಿಗೆ ಕೈಗಾರಿಕಾ ತ್ಯಾಜ್ಯ, ರಾಸಾಯನಿಕ ವಸ್ತುಗಳು ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕೆರೆಗಳಲ್ಲಿ ಬೆಂಕಿಗೆ ಕಾರಣವಾದ ತೇಲುವ ಒಣ ಹುಲ್ಲು “ಮ್ಯಾಕ್ರೋಫಿಟ್‌’ಗಳನ್ನು ಕಿತ್ತುಹಾಕಬೇಕು. ಹಾಗೂ ಈ ಬಗ್ಗೆ ಪ್ರತಿ ತಿಂಗಳು ವರದಿ ಸಲ್ಲಿಸಬೇಕು ಎಂದೂ ಹೇಳಿದೆ. ವಿಚಾರಣೆಯಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ಹಣ ಮತ್ತು ಜಾಗದ ಅಲಭ್ಯತೆ ಹಾಗೂ ಕಟ್ಟಡಗಳಿಗೆ ಧಕ್ಕೆ ಆಗುತ್ತದೆ. ಆದ್ದರಿಂದ ಈಗ ಇದು ಕಷ್ಟ ಎಂದು ಅಪಾರ್ಟ್‌ಮೆಂಟ್‌ ಮಾಲಿಕರು ವಾದ ಮುಂದಿಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next