Advertisement

ಅಭಿನಂದನ್‌ಗೆ ಪಾಪಿಸ್ಥಾನ ನೀಡಿದ್ದ ಚಿತ್ರಹಿಂಸೆ ಹೇಗಿತ್ತು ಗೊತ್ತಾ ?

10:49 AM Mar 07, 2019 | udayavani editorial |

ಹೊಸದಿಲ್ಲಿ : ಅಂತಾರಾಷ್ಟ್ರೀಯ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕಿಸ್ಥಾನ ಕೊನೆಗೂ ತನ್ನ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿತ್ತಾದರೂ, ಆತ ತನ್ನ ವಶದಲ್ಲಿದ್ದ ಮೊದಲ 24 ತಾಸು ಕಾಲ ಆತನಿಗೆ ಅಪಾರ ಹಿಂಸೆ ನೀಡಿ ಮಾನಸಿಕವಾಗಿ ಆತನನ್ನು ಕುಗ್ಗಿಸಿ, ಆತನಿಂದ ವಾಯು ಪಡೆಯ ಅತ್ಯಮೂಲ್ಯ ಮಾಹಿತಿಗಳನ್ನು ಪಡೆಯುವ ವಿಫ‌ಲ ಯತ್ನ ಮಾಡಿತ್ತು ಎಂಬುದರ ನೈಜ ಚಿತ್ರಣವನ್ನು ಹಿಂದುಸ್ಥಾನ್‌ ಟೈಮ್ಸ್‌ ಇದೀಗ ವರದಿ ಮಾಡಿದೆ.

Advertisement

ಭಾರತೀಯ ವಾಯು ಪಡೆಯು ದಾಳಿ ವೇಳೆ ಬಳಸುತ್ತಿದ್ದ  ಅತ್ಯಧಿಕ ಭದ್ರತೆಯ ರೇಡಿಯೋ ತರಂಗಾಂತರಗಳ ಮಾಹಿತಿ, ಭಾರತೀಯ ಸೇನೆಯ ನಿಯೋಜನೆ ಮತ್ತು ಅವುಗಳ ನಿಖರ ತಾಣ, ಅತಿ ಸೂಕ್ಷ್ಮ ಸೇನಾ ಸಾರಿಗೆ ಮಾಹಿತಿ, ದಾಳಿಗೆ ಭಾರತ ಸಿದ್ಧಪಡಿಸಿರುವ ಫೈಟರ್‌ ಜೆಟ್‌ಗಳ ನಿಖರ ಸಂಖ್ಯೆ ಇತ್ಯಾದಿಗಳ ರಹಸ್ಯ ಮಾಹಿತಿಯನ್ನು ಅಭಿನಂದನ್‌ ಅವರಿಂದ ಪಡೆಯಲು ಪಾಕ್‌ ಸೇನೆ ಇನ್ನಿಲ್ಲದ ರೀತಿಯ ಮಾನಸಿಕ ಹಿಂಸೆಯನ್ನು ಆತನಿಗೆ ನೀಡಿತ್ತು.

ಅಭಿನಂದನ್‌ ಅವರಿಂದ IAF ರೇಡಿಯೋ ತರಂಗಾಂತರ ಮಾತ್ರವಲ್ಲದೆ ಇನ್ನಿತರ ಹಲವು ರಹಸ್ಯ ಮಾಹಿತಿಗಳನ್ನು ಪಡೆಯಲು ಪಾಕ್‌ ಸೇನೆ ಆತನಿಗೆ ದಿನಪೂರ್ತಿ ನಿಂತಿರುವ ಶಿಕ್ಷೆ ನೀಡಿತು. ಮಾತ್ರವಲ್ಲದೆ ಕಿವಿ ತಮಟೆ ಕಿತ್ತುಹೋಗುವಷ್ಟು ದೊಡ್ಡ ಸದ್ದಿನ ಸಂಗೀತವನ್ನು ಆತ ಬಲವಂತದಿಂದ ಕೇಳುವಂತೆ ಮಾಡಿತು. ಜತೆಗೆ ದೈಹಿಕವಾಗಿ ಆತನ ಮೇಲೆ ಹಲ್ಲೆ ನಡೆಸಲಾಯಿತು.

ವರ್ಧಮಾನ್‌ ಅವರು ಪಾಕ್‌ ಕಪಿಮುಷ್ಟಿಯಿಂದ ಬಿಡುಗಡೆಯಾಗಿ ಭಾರತಕ್ಕೆ ಬಂದ ಬಳಿಕ ಮಿಲಿಟರಿ ಆಸ್ಪತ್ರೆಯಲ್ಲಿನ “ಕೂಲಿಂಗ್‌ ಡೌನ್‌’ ಪ್ರಕ್ರಿಯೆಯಲ್ಲಿ ತನ್ನ ಹಿರಿಯ ಅಧಿಕಾರಿಗಳಿಗೆ ತಾನು ಪಾಕ್‌ ಸೇನೆಯ ವಶದಲ್ಲಿದ್ದಾಗ ಅನುಭವಿಸಿದ್ದ ನರಕ ಯಾತನೆಯ ವಿವರಗಳನ್ನು ತಿಳಿಸಿದರು ಎಂದು ಹಿಂದುಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. 

ಆದರೆ ವೀರ ಯೋಧ, ದೃಢ ಚಿತ್ತದ, ಪೈಲಟ್‌ ಅಭಿನಂದನ್‌ ಅವೆಲ್ಲವನ್ನೂ ಸಹಿಸಿಕೊಂಡು ಶತ್ರು ಸೇನೆಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದಿರುವಲ್ಲಿ ಯಶಸ್ವಿಯಾದರು ಎಂದು ಹಿಂದುಸ್ಥಾನ್‌ ಟೈಮ್ಸ್‌ ವರದಿ ತಿಳಿಸಿದೆ.

Advertisement

ಅಭಿನಂದನ್‌ ಚಲಾಯಿಸುತ್ತಿದ್ದ ಮಿಗ್‌ 21 ಬೈಸನ್‌ ಫೈಟರ್‌ ಜೆಟ್‌ ವಿಮಾನವನ್ನು ಪಾಕ್‌ ವಾಯು ಪಡೆ ಎಲ್‌ಓಸಿಯಲ್ಲಿ ಭಾರತೀಯ ವಾಯು ಪಡೆಯೊಂದಿಗಿನ ಡಾಗ್‌ ಫೈಟ್‌ ನಲ್ಲಿ ಹೊಡೆದುರುಳಿಸಿತ್ತು. ಅಭಿನಂದನ್‌ ಪ್ಯಾರಾಶೂಟ್‌ ಮೂಲಕ ಯಶಸ್ವಿಯಾಗಿ ತನ್ನ ವಿಮಾನದಿಂದ ಹೊರಜಿಗಿದು ಪ್ರಾಣ ಉಳಿಸಿಕೊಂಡರೂ ದುರದೃಷ್ಟವಶಾತ್‌  ಪಿಓಕೆಯಲ್ಲೇ ಬಿದ್ದು ಪಾಕ್‌ ಸೇನೆಯ ವಶವಾದರು. 

ಶತ್ರು ಸೇನೆಯ ವಶವಾದ ಸಂದರ್ಭದಲ್ಲಿ ಮೊದಲ 24 ತಾಸುಗಳ ಅವಧಿಯಲ್ಲಿ  ಕೊಡಲ್ಪಡುವ ಯಾವುದೇ ರೀತಿಯ ಚಿತ್ರ ಹಿಂಸೆಯನ್ನು ಹೇಗಾದರೂ ಸಹಿಸಿಕೊಂಡು, ಐಎಎಫ್ ವಾಯು ದಾಳಿಗಾಗಿ ಬಳಸುವ ಅತ್ಯಧಿಕ ಭದ್ರತೆಯ ರೇಡಿಯೋ ತರಂಗಾಂತರಗಳ ಮಾಹಿತಿಯನ್ನು ಶತ್ರುಗಳಿಗೆ ನೀಡದಿರುವಂತೆ ಪೈಲಟ್‌ಗಳಿಗೆ ತರಬೇತಿ ನೀಡಿರುತ್ತದೆ. ಶತ್ರು ಸೇನೆಗೆ ಭಾರತೀಯ ಪೈಲಟ್‌ ವಶವಾದ 24 ತಾಸಿನ ಬಳಿಕದಲ್ಲಿ ರೇಡಿಯೋ ತರಂಗಾಂತರಗಳನ್ನು ಬದಲಾಯಿಸುವುದು ಸಾಧ್ಯವಿರುತ್ತದೆ ಎನ್ನುವುದೇ ಇಲ್ಲಿ ಬಹು ಮುಖ್ಯ ಸಂಗತಿಯಾಗಿರುತ್ತದೆ ಎಂದು ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next