Advertisement

ವಿವಿಧೆಡೆ ಮಳೆಕೊಯ್ಲು ಅಳವಡಿಕೆ ಮಾಹಿತಿ ಕಾರ್ಯಾಗಾರ

11:56 PM Aug 04, 2019 | mahesh |

ಮಹಾನಗರ: ಕುಳಾಯಿ ಸ್ಪಂದನ ಫ್ರೆಂಡ್ಸ್‌ ಸರ್ಕಲ್ ಸಹಯೋಗದಲ್ಲಿ ಮಳೆ ನೀರುಕೊಯ್ಲು ಬಗ್ಗೆ ಮಾಹಿತಿ ಕಾರ್ಯಾಗಾರ ರವಿವಾರ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

Advertisement

ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲು ವಿಷಯದ ಕುರಿತಾಗಿ ಮಾಹಿತಿ ನೀಡಿದರು. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದು, ಮಳೆಕೊಯ್ಲು ಬಗ್ಗೆ ಮಾಹಿತಿ ಪಡೆದುಕೊಂಡರು.

ದೈವಸ್ಥಾನದ ಬಾವಿಗೆ ಮಳೆಕೊಯ್ಲು

‘ಉದಯವಾಣಿ’ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತವಾದ ಸುರತ್ಕಲ್ ಕುಚ್ಚಿಗುಡ್ಡೆ ಕೋಡ್ದಬ್ಬು ದೈವಸ್ಥಾನ ಆಡಳಿತ ಸಮಿತಿಯು ದೈವಸ್ಥಾನದ ಬಾವಿಗೆ ಮಳೆಕೊಯ್ಲು ಅಳವಡಿಕೆ ಮಾಡಿದ್ದಾರೆ. ಭವಿಷ್ಯದ ನೀರಿನ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು 25,000 ರೂ.ಗಳ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಕುಚ್ಚಿಗುಡ್ಡೆ ಕೋಡ್ದಬ್ಬು ದೈವಸ್ಥಾನ ಪುರಾತನ ದೈವಸ್ಥಾನ. ಇಲ್ಲಿ ಬಾವಿ ಇದ್ದು, ದೇವಸ್ಥಾನದ ದೈವ ಕಾರ್ಯಗಳಿಗೆ ಮಾತ್ರ ಬಾವಿ ನೀರಿನ ಬಳಕೆ ಮಾಡಲಾಗುತ್ತದೆ. ಅಲ್ಲದೆ, ನೀರಿನ ಸಮಸ್ಯೆ ಇಲ್ಲಿ ಕಂಡು ಬಂದಿಲ್ಲ. ಆದರೆ, ‘ಉದಯವಾಣಿ’ ಮಳೆಕೊಯ್ಲು ಅಭಿಯಾನ ನೋಡಿ ಪ್ರೇರಿತರಾದ ಆಡಳಿತ ಮಂಡಳಿಯ ಸದಸ್ಯರು ಮಳೆಕೊಯ್ಲು ವ್ಯವಸ್ಥೆ ಮೂಲಕ ನೀರಿಂಗಿಸಿ ಅಂತರ್ಜಲ ಮಟ್ಟ ಏರಿಸಲು ಸಹಕರಿಸಿದ್ದಾರೆ. ನೀರು ಶುದ್ಧೀಕರಣಕ್ಕೆ ಫಿಲ್ಟರ್‌ ಅಳವಡಿಸಲಾಗಿದೆ.

Advertisement

ಅಧ್ಯಕ್ಷ ಜಯ ಶೆಟ್ಟಿ, ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಪ್ರತೀ ಗ್ರಾಮದಲ್ಲೂ ಮಳೆ ಕೊಯ್ಲು ಆದಲ್ಲಿ ಅಂತರ್ಜಲ ವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ದೈವಸ್ಥಾನದ ಗೌರವಾಧ್ಯಕ್ಷ ವೈ. ರಮಾನಂದ ರಾವ್‌.

ಜಲಮರುಪೂರಣ ಮಾಹಿತಿ ಕಾರ್ಯಾಗಾರ
ಗುರುಪುರ ಕೈಕಂಬ ಪೊಂಪೈ ಚರ್ಚ್‌ನ ಕೊಳವೆ ಬಾವಿಗೆ ಅಳವಡಿಸಿದ ಜಲಮರುಪೂರಣ ಉದ್ಘಾಟನೆ ಹಾಗೂ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ರವಿವಾರ ಚರ್ಚ್‌ನ ಸಭಾಂಗಣದಲ್ಲಿ ನಡೆಯಿತು.

ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲು ವಿಷಯದ ಕುರಿತಾಗಿ ಮಾಹಿತಿ ನೀಡಿದರು.ಚರ್ಚ್‌ನ ವಂ| ಆ್ಯಂಟನಿ ಲೋಬೋ, ಪಂಚಾಯತ್‌ ಸದಸ್ಯರು, ಲಯನ್ಸ್‌ ಕ್ಲಬ್‌ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ
ನೀರೆಂಬ ಅಮೃತವನ್ನು ಯಾವ ರೀತಿ ಉಳಿತಾಯ ಮಾಡಬೇಕೆಂಬ ಬಗ್ಗೆ ಮಳೆಕೊಯ್ಲು ಅಭಿಯಾನದ ಮೂಲಕ ಜನತೆಗೆ ತಿಳಿಸಿಕೊಟ್ಟ ‘ಉದಯವಾಣಿ’ಗೆ ಧನ್ಯವಾದಗಳು. ನಾನು ಶಿಕ್ಷಕಿಯಾಗಿದ್ದು, ಹತ್ತನೇ ತರಗತಿಯ ಕನ್ನಡ ವಿಭಾಗದ ಮಕ್ಕಳಿಗೆ ಈ ಮಾಹಿತಿಯನ್ನು ನೀಡಿದ್ದೇನೆ. ಶಿಕ್ಷಕರೂ ತಮ್ಮ ವಿದ್ಯಾರ್ಥಿಗಳಿಗೆ ಮಳೆಕೊಯ್ಲು ಅಳವಡಿಕೆಯ ಮಾಹಿತಿ ನೀಡಿದರೆ ಉತ್ತಮ.
-ಸಪ್ನಾ ಸಲ್ಡಾನ್ಹಾ,, ಶಿಕ್ಷಕಿ, ವಾಮಂಜೂರು
Advertisement

Udayavani is now on Telegram. Click here to join our channel and stay updated with the latest news.

Next