Advertisement
ದುರ್ಬಲರಿಗೆ ಆಶಾಕಿರಣವಾಗಿರುವ ವಿವಿಧ ಪಿಂಚಣಿ ಯೋಜನೆಗಳಿಂದ ಬಹಳಷ್ಟು ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ವಿಕಲಚೇತನರಿಗೆ ಸೇರಿದಂತೆ ಸಮಾಜದ ವಿವಿಧ ದುರ್ಬಲರಿಗೆ ಆಸರೆಯಾಗುವ ಹಲವಾರು ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ.
ದಕ್ಷಿಣ ಕನ್ನಡದಲ್ಲಿ ಎಲ್ಲ ಪಿಂಚಣಿ ಯೋಜನೆಗಳ ಮೊತ್ತವನ್ನು ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಪಿಂಚಣಿ ದೊರಕಲು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ 2023 ಜೂನ್ 1ರ ವರೆಗೆ ಸುಮಾರು 18577 ಮಂದಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು, ಬ್ಯಾಂಕ್‌ಗೆ ಕೆವೈಸಿ ನೀಡದಿರುವುದು ಮತ್ತಿತರ ಸಮಸ್ಯೆಗಳಿಂದಾಗಿ ಪಿಂಚಣಿ ಜಮೆಯಾಗಲು ತೊಂದರೆ ಆಗುತ್ತಿತ್ತು. ಕಂದಾಯ ಇಲಾಖೆಯು ಈ ಸಮಸ್ಯೆಯನ್ನು ಅಭಿಯಾನದ ಮೂಲಕ ಸರಿಪಡಿಸುತ್ತಿದೆ. ಈ ನಿಟ್ಟಿನಲ್ಲಿ ಆಯಾ ಗ್ರಾಮಕರಣಿಕರು ಫಲಾನುಭವಿಗಳ ಮನೆ ಮನೆಗೆ ತೆರಳಿ ಅವರ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಜೋಡಿಸಲು ಮತ್ತು ಕೆವೈಸಿ ಅಪ್‌ಡೇಟ್ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಪಿಂಚಣಿ ಫಲಾನುಭವಿಗಳಿಗೆ ಸಕಾಲದಲ್ಲಿ ಪಿಂಚಣಿ ದೊರಕಲಿದ್ದು, ಪ್ರಸ್ತುತ 1,534 ಮಂದಿ ಆಧಾರ್ ಜೋಡಣೆ ಬಾಕಿ ಇದೆ ಶೀಘ್ರದಲ್ಲಿ ಇದು ಶೂನ್ಯಕ್ಕೆ ಬರಲಿದೆ.
Related Articles
ಸಾಮಾಜಿಕ ಭದ್ರತಾ ಯೋಜನೆಗಳು ಎಂದು ಕರೆಯಲ್ಪಡುವ ಈ ಪಿಂಚಣಿ ಯೋಜನೆಗಳ ಮೂಲಕ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣಕಾಸು ನೆರವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ವೃದ್ದಾಪ್ಯ ವೇತನದಡಿ ಜಿಲ್ಲೆಯಲ್ಲಿ 37,231 ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ವಿಧವಾ ವೇತನವನ್ನು 49,062 ಫಲಾನುಭವಿಗಳು, ಅಂಗವಿಕಲ ವೇತನವನ್ನು 17,751 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
Advertisement
ಸಂಧ್ಯಾ ಸುರಕ್ಷಾ ವೇತನವನ್ನು ಜಿಲ್ಲೆಯಲ್ಲಿ 62,907 ಮಂದಿ, ಮನಸ್ವಿನಿ ವೇತನವನ್ನು 6,228 ಫಲಾನುಭವಿಗಳು, ಮೈತ್ರಿ ವೇತನವನ್ನು 10 ಫಲಾನುಭವಿಗಳು, ಎಂಡೋಸಲ್ಫಾನ್ ವೇತನ 3,808 ಮಂದಿ, ಮೃತ ರೈತರ ಪತ್ನಿಗೆ ವಿಧವಾ ವೇತನ 28 ಫಲಾನುಭವಿಗಳು ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ಮಾಸಾಶನವನ್ನು ಒಬ್ಬರು ಪಡೆಯುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
ಉಡುಪಿ ಜಿಲ್ಲೆಯ ಅಂಕಿಅಂಶಸಾಮಾಜಿಕ ಭದ್ರತ ಯೋಜನೆಯಡಿಯಲ್ಲಿ ವೃದ್ಧಾಪ್ಯ ವೇತನವನ್ನು 29,939, ಅಂಗವಿಕಲ ವೇತನವನ್ನು 14,009, ವಿಧವಾ ವೇತನ 35093, ಸಂಧ್ಯಾ ಸುರಕ್ಷಾ ವೇತನ 63,823, ಮನಸ್ವಿನಿ ವೇತನವನ್ನು 4005 ಹಾಗೂ ಮೈತ್ರಿ ವೇತನವನ್ನು 28 ಫಲಾನುಭವಿಗಳು ಸೇರಿದಂತೆ ಜಿಲ್ಲೆಯ 1,46,897 ಫಲಾನುಭವಿಗಳು ವಿವಿಧ ಪಿಂಚಣಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು, ಬ್ಯಾಂಕ್‌ಗೆ ಕೆವೈಸಿ ನೀಡದಿರುವುದು ಮತ್ತಿತರ ಸಮಸ್ಯೆಗಳಿಂದಾಗಿ ಸುಮಾರು 4,000 ಫಲಾನುಭವಿಗಳು ಸೇವೆಯನ್ನು ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ.